ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

52 ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ

ನೀರಿನ ಘಟಕಗಳ ದುರಸ್ತಿಗೆ ನಿರ್ಲಕ್ಷ್ಯ: ಸಾರ್ವಜನಿಕರ ಆರೋಪ
Published 11 ಜೂನ್ 2024, 7:04 IST
Last Updated 11 ಜೂನ್ 2024, 7:04 IST
ಅಕ್ಷರ ಗಾತ್ರ

ದೇವದುರ್ಗ: ಗ್ರಾಮದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ಉದ್ದೇಶದಿಂದ ಸರ್ಕಾರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆದಿದೆ. ಆದರೆ, ಅವುಗಳು ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ.

ತಾಲ್ಲೂಕಿನಲ್ಲಿ 146 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. 94 ಕಾರ್ಯ ನಿರ್ವಹಿಸುತ್ತಿದ್ದು, 52 ಸ್ಥಗಿತಗೊಂಡಿವೆ. ಒಂದು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ₹14ರಿಂದ ₹20 ಲಕ್ಷದ ವರೆಗೆ ವೆಚ್ಚ ಮಾಡಲಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್), ಶಾಸಕರ ಅನುದಾನ ಹಾಗೂ ಸಹಕಾರ ಸಂಘಗಳ ನೆರವಿನಿಂದ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ, ಗುತ್ತಿಗೆ ಪಡೆದಿರುವ ಕಂಪನಿ, ಗ್ರಾಮ ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ಲಕ್ಷ್ಯದಿಂದ ದುರಸ್ತಿಯಾಗದೆ ತುಕ್ಕು ಹಿಡಿದಿವೆ ಎಂಬ ಆರೋಪ ಕೇಳಿಬಂದಿದೆ.

ಸದಾ ಅಂತರ್ಜಲ ಕುಸಿತದ ಸಮಸ್ಯೆ ಇರುವ ದೇವದುರ್ಗ ತಾಲ್ಲೂಕಿನ ಕೆಲವು ಗ್ರಾಮಗಳ ಕುಡಿಯುವ ನೀರಿನಲ್ಲಿ ರಾಯಚೂರು ಜಿಲ್ಲೆಯಲ್ಲೇ ಅತಿ ಹೆಚ್ಚು ಫ್ಲೋರೈಡ್ ಅಂಶ ಕಂಡುಬರುತ್ತದೆ. ಬಹುತೇಕ ಜನರು ಹಲ್ಲು ಮತ್ತು ಮೂಳೆ ರೋಗದಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆ ವರದಿಯಿಂದ ದೃಢಪಟ್ಟಿದೆ.

ಜಲಜೀವನ್‌ ಮಿಷನ್‌ ಯೋಜನೆಯಡಿ ಪ್ರತಿ ಮನೆಗೂ ಕುಡಿಯುವ ನೀರನ್ನು ಒದಗಿಸುವ ಉದ್ದೇಶವಿದೆ. ಆದರೆ, ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕಾಮಗಾರಿ ಮುಕ್ತಾಯಗೊಂಡು ಎರಡು ವರ್ಷ ಕಳೆದರೂ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ.

ತಾಲ್ಲೂಕಿನಲ್ಲಿ ನಿರಂತರವಾಗಿ 5ರಿಂದ 10 ಘಟಕಗಳು ಕೆಟ್ಟು ನಿಲ್ಲುತ್ತವೆ. ಇವುಗಳನ್ನು ದುರಸ್ತಿ ಮಾಡಬೇಕಾಗಿರುವ ಏಜೆನ್ಸಿ ಹಾಗೂ ಗ್ರಾಮ ಪಂಚಾಯಿತಿಗಳ ನಿರ್ಲಕ್ಷ್ಯದಿಂದಾಗಿ ದುರಸ್ತಿಯಾಗಲು ವಾರಗಟ್ಟಲೇ ಸಮಯ ತೆಗೆದುಕೊಳ್ಳುತ್ತವೆ. ಹೀಗಾಗಿ ಖಾಸಗಿ ಶುದ್ಧ ಕುಡಿಯುವ ನೀರಿನ ಟ್ಯಾಂಕರ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಗ್ರಾಮ ಪಂಚಾಯಿತಿ, ಏಜೆನ್ಸಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಸಮನ್ವಯ ಕೊರತೆಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಾಗದೆ ಬಡವರನ್ನು ಪರದಾಡುವಂತೆ ಮಾಡಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಖಾಸಗಿಯವರು ದುಪ್ಪಟ್ಟು ದರಕ್ಕೆ ನೀರು ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ದೇವದುರ್ಗ ತಾಲ್ಲೂಕಿನ ಗೂಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಗಲ್ ಗ್ರಾಮದಲ್ಲಿ 6 ವರ್ಷದಿಂದ ನಿರುಪಯುಕ್ತವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ
ದೇವದುರ್ಗ ತಾಲ್ಲೂಕಿನ ಗೂಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಗಲ್ ಗ್ರಾಮದಲ್ಲಿ 6 ವರ್ಷದಿಂದ ನಿರುಪಯುಕ್ತವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ
ದೇವದುರ್ಗ ತಾಲ್ಲೂಕಿನ ಚಿಕ್ಕಬುದೂರು ಗ್ರಾಮದಲ್ಲಿ 8 ವರ್ಷದಿಂದ ನಿರುಪಯುಕ್ತವಾದ ಶುದ್ಧ ಕುಡಿಯುವ ನೀರಿನ ಘಟಕ
ದೇವದುರ್ಗ ತಾಲ್ಲೂಕಿನ ಚಿಕ್ಕಬುದೂರು ಗ್ರಾಮದಲ್ಲಿ 8 ವರ್ಷದಿಂದ ನಿರುಪಯುಕ್ತವಾದ ಶುದ್ಧ ಕುಡಿಯುವ ನೀರಿನ ಘಟಕ
ಶುದ್ಧ ನೀರಿನ ಘಟಕಗಳನ್ನು ಗುತ್ತಿಗೆ ಪಡೆದ ಏಜೆನ್ಸಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಲೇಬೇಕು. ಈ ಕುರಿತು ತಿಂಗಳಿಗೊಮ್ಮೆ ವರದಿ ಒಪ್ಪಿಸಬೇಕು. ಸೂಕ್ತ ನಿರ್ವಹಣೆ ಮಾಡದಿದ್ದರೆ ಲೈಸೆನ್ಸ್ ರದ್ದುಪಡಿಸಲಾಗುವುದು.
–ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ನಿರ್ವಹಣೆ ಮಾಡದ ಗುತ್ತಿಗೆದಾರರ ಲೈಸೆನ್ಸ್ ರದ್ದುಪಡಿಸಿ ಕಪ್ಪು ಪೆಟ್ಟಿಗೆ ಸೇರಿಸಬೇಕು. ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗೆ ವಹಿಸಬೇಕು.
–ರಾಮಣ್ಣ ಎನ್.ಗಣೇಕಲ್, ಸಾಮಾಜಿಕ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT