ಸೋಮವಾರ, ಜೂನ್ 27, 2022
28 °C
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಂದ ಪರಿಶೀಲನೆ

ಕೋವಿಡ್‌ ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ; ಲಕ್ಷ್ಮಣ ಸವದಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ‘ಕೋವಿಡ್‌ ಮೂರನೇ ಅಲೆಯನ್ನು ಯುದ್ದೋಪಾದಿಯಲ್ಲಿ ನಿಯಂತ್ರಿಸಲಾಗುವುದು. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಕೋವಿಡ್‌ ಪರಿಸ್ಥಿತಿ ಅವಲೋಕಿಸುವುದಕ್ಕಾಗಿ ಗುರುವಾರ ಜಿಲ್ಲೆಗೆ ಭೇಟಿನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಪ್ಪು ಶಿಲೀಂಧ್ರಕ್ಕೆ ಬೇಕಾದ ಇಂಜೆಕ್ಷನ್‌ ಬೇರೆ ಬೇರೆ ದೇಶಗಳಿಂದಲೂ ಪಡೆದುಕೊಳ್ಳಲಾಗುತ್ತಿದೆ. ಇದಕ್ಕಾಗಿ ಕೇಂದ್ರದ ಸಚಿವರು ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಮಹಾಮಾರಿ ಇಳಿಮುಖವಾಗುತ್ತಿದೆ. ಜಿಲ್ಲಾಡಳಿತವು ಗ್ರಾಮಗಳಿಗೆ ಹೋಗಿ ಅಲ್ಲಿರುವ ಸೋಂಕಿತರನ್ನು ಸ್ಥಳಾಂತರಿಸುವ ಕೆಲಸ ಮಾಡಿದೆ. ಸಾಕಷ್ಟು ಜಾಗೃತಿ ಮೂಡಿಸಿ ಕೊರೊನಾ ಸೋಂಕು ಹತೋಟಿಗೆ ತಂದಿದೆ ಎಂದು ಹೇಳಿದರು.

ಸರ್ಕಾರದ ರಿಮ್ಸ್‌ ಮತ್ತು ಓಪೆಕ್‌ ಆಸ್ಪತ್ರೆಗಳ ಸುಧಾರಣೆ ಬಹಳಷ್ಟು ಆಗಿದ್ದು, ಜನರಿಗೆ ಒಳ್ಳೆಯ ಸೇವೆ ಕೊಡಲಾರಂಭಿಸಿವೆ. ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಪರಿಶೀಲಿಸಲಾಗಿದೆ. ಸಿಬ್ಬಂದಿಯು ಪಾಳಿಗಳಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ವೈದ್ಯರು ಉತ್ತಮ ಸೇವೆ ನೀಡುತ್ತಿರುವುದು ಅಭಿನಂದನಾರ್ಹ.

ಕಪ್ಪು ಶಿಲೀಂಧ್ರ ಎಂಬುದು ಈಗ ಹೊಸ ಸವಾಲು. ರಾಯಚೂರು ಜಿಲ್ಲೆಯಲ್ಲಿ 42 ಜನರಲ್ಲಿ ಕಪ್ಪು ಶಿಲೀಂಧ್ರ ಕಾಣಿಸಿಕೊಂಡಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬರು ಗುಣಮುಖರಾಗಿದ್ದು, ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಈ ರೋಗಿಗಳಿಗೆ 45 ದಿನಗಳವರೆಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಎಲ್ಲರಿಗೂ ಉಚಿತ ವೈದ್ಯಕೀಯ ಸೇವೆ ನೀಡಲಾಗುತ್ತಿದೆ ಎಂದು ಹೇಳಿದರು.

ರಿಮ್ಸ್‌ನಲ್ಲಿ 20 ಕೆಎಲ್‌ ಆಮ್ಲಜನಕ ಶೇಖರಣಾ ಘಟಕ ಪ್ರಾರಂಭಿಸಲಾಗಿದೆ. 30 ಆಮ್ಲಜನಕ ಸಾಂದ್ರಕಗಳು ಬಂದಿದ್ದು, ವಿವಿಧ ತಾಲ್ಲೂಕುಗಳಿಗೆ ಹಂಚಿಕೆ ಮಾಡಲಾಗಿದೆ. ಮತ್ತೆ 20 ಸಾಂದ್ರಕಗಳು ಬಂದಿವೆ. ಸದ್ಯ ಕೋವಿಡ್‌ ಪ್ರಕರಣಗಳು ಇಳಿಕೆ ಆಗುತ್ತಿದ್ದರೂ ಮೈಮರೆಯುವಂತಿಲ್ಲ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರೆಮಿಡಿಸಿವರ್‌ ಇಂಜೆಕ್ಷನ್‌, ಆಮ್ಲಜನಕ ಕೊರತೆ ಆಗದಂತೆ ಕ್ರಮ ವಹಿಸಲಾಗುತ್ತಿದೆ. ಅದೇ ರೀತಿ ಸಾರಿಗೆ ಇಲಾಖೆಯ ಹಳೇ ಬಸ್‌ಗಳನ್ನು ಸುಸಜ್ಜಿತವಾಗಿ ಆಮ್ಲಜನಕ ಬಸ್‌ಗಳೆಂದು ಮಾಡಲಾಗುತ್ತಿದೆ. ಕೆಲವೊಂದನ್ನು ಐಸಿಯು ಬಸ್‌ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಶಾಸಕರು ಮತ್ತು ಸಂಸದರು ತಮ್ಮ ನಿಧಿಯನ್ನು ಕೊಡುತ್ತಿದ್ದಾರೆ. ಒಂದು ಐಸಿಯು ಬಸ್‌ ತಯಾರಿಸಲು ₹10 ಲಕ್ಷ ವೆಚ್ಚವಾಗುತ್ತದೆ. ಸಂಸದ ಕರಣಿ ಸಂಗಣ್ಣ ಅವರು ₹10 ಲಕ್ಷ ಅನುದಾನ ಕೊಟ್ಟಿದ್ದಾರೆ ಎಂದು ಹೇಳಿದರು.

ವಿಶೇಷವಾಗಿ ರಾಯಚೂರು ಜಿಲ್ಲೆಗೆ ₹1,998 ಕೋಟಿ ಅನುದಾನ ಕುಡಿಯುವ ನೀರಿಗಾಗಿ ರಾಜ್ಯ ಸಚಿವ ಸಂಪುಟದಲ್ಲಿ ಮಂಜೂರಾತಿ ನೀಡಲಾಗಿದೆ. ನಬಾರ್ಡ್‌ ಮೂಲಕ ಹಣ ಪಡೆದು, ಗ್ರಾಮಗಳಿಗೆ ನೀರು ಒದಗಿಸಲಾಗುವುದು. ಇದರಿಂದ ಬಹಳಷ್ಟು ಸದುಪಯೋಗ ಆಗಲಿದೆ. ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಜೂನ್‌ 8 ರಂದು ರಾಯಚೂರು ಜಿಲ್ಲೆಗೆ ಬರುತ್ತಿದ್ದು, ಈ ಬಗ್ಗೆ ಪರಿಶೀಲನೆ ಮಾಡುವುದರ ಜೊತೆಗೆ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು.

ಸಂಸದರಾದ ರಾಜಾ ಅಮರೇಶ್ವರ ನಾಯಕ, ಸಂಗಣ್ಣ ಕರಡಿ, ಶಾಸಕ ಡಾ.ಶಿವರಾಜ ಪಾಟೀಲ, ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್‌ ನಿಕ್ಕಂ, ಉಪವಿಭಾಗಾಧಿಕಾರಿ ಸಂತೋಷಕುಮಾರ್‌ ಮತ್ತಿತರರು ಇದ್ದರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು