ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಿತ್ತನೆ ಪೂರ್ವದಲ್ಲಿ ಬೀಜೋಪಚಾರ ಮಾಡಿ’

ಕೀಟಶಾಸ್ತ್ರ ವಿಜ್ಞಾನಿ ಶ್ರೀವಾಣಿ ಜಿ.ಎನ್ ಸಲಹೆ
Published 8 ಜೂನ್ 2024, 15:14 IST
Last Updated 8 ಜೂನ್ 2024, 15:14 IST
ಅಕ್ಷರ ಗಾತ್ರ

ರಾಯಚೂರು: ‘ಬೀಜಗಳನ್ನು ರೋಗಾಣು ಹಾಗೂ ಕೀಟಗಳಿಂದ ರಕ್ಷಿಸಲು ಶಿಲೀಂಧ್ರ ನಾಶಕ ಮತ್ತು ಕೀಟನಾಶಕಗಳಿಂದ ಉಪಚಾರ ಮಾಡಬೇಕು’ ಎಂದು ಕೀಟಶಾಸ್ತ್ರ ವಿಜ್ಞಾನಿ ಶ್ರೀವಾಣಿ ಜಿ.ಎನ್ ಹೇಳಿದರು.

ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬೀಜೋಪಚಾರ ಮಾಡುವ ವಿಧಾನದ ಕುರಿತು ರೈತರಿಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

‘ಬೀಜೋ‍ಪಚಾರದಿಂದ ಬೆಳೆಯಿಂದ ಬೆಳೆಗೆ ಬೀಜಗಳ ಮುಖಾಂತರ ಹರಡುವ ರೋಗಗಳನ್ನು ನಿಯಂತ್ರಿಸಬಹುದು. ಭತ್ತದಲ್ಲಿ ಕಾಣುವ ಕಾಡಿಗೆ ರೋಗದಂತಹ ರೋಗ ತಡೆಗಟ್ಟಬಹುದು. ಬೀಜ ಕೊಳೆಯುವಿಕೆ ಮತ್ತು ಸಸಿ ಒಣಗುವಿಕೆಯನ್ನು ತಡೆಯುತ್ತದೆ. ಮೆಣಸಿನಕಾಯಿಯಲ್ಲಿ ಕಾಡುವ ಸಸಿ ಕೊಳೆ ರೋಗ, ಬೀಜದ ಮೊಳಕೆ ಪ್ರಮಾಣ ಹಾಗೂ ಸಂಗ್ರಹಣಾ ಶಕ್ತಿಯನ್ನು ಅಧಿಕಗೊಳಿಸಬಹುದು’ ಎಂದು ಹೇಳಿದರು.

‘ಭತ್ತದಲ್ಲಿ ಶಿಲೀಂಧ್ರ ನಾಶಕಗಳಾದ ಕಾರ್ಬನ್‍ ಡೈಜಿಮ್ 50 ಡಬ್ಲ್ಯೂ.ಪಿ. ಪ್ರತಿ ಕೆ.ಜಿ. ಬೀಜಕ್ಕೆ 2 ಗ್ರಾಂ ನಂತೆ ಉಪಚಾರ ಮಾಡಿ ಬಿತ್ತಬೇಕು. ತೊಗರಿಯಲ್ಲಿ ಬರುವ ನೆಟೆರೋಗ, ಸೊರಗು ರೋಗ ಮುಂತಾದವುಗಳಿಗೆ ಪ್ರತಿ ಕೆ.ಜಿ. ಬೀಜಕ್ಕೆ 2 ಗ್ರಾಂ ಕ್ಯಾಪ್ಟನ್ 80 ಡಬ್ಲ್ಯೂ.ಪಿ. ಅಥವಾ ಥೈರಾನ್ 75 ಡಬ್ಲ್ಯೂ.ಪಿ. ಕೊಡಬೇಕು’ ಎಂದು ಸಲಹೆ ನೀಡಿದರು.

‘ಹತ್ತಿಯಲ್ಲಿ ರಸ ಹೀರುವ ಕೀಟಗಳ ನಿಯತ್ರಣಕ್ಕಾಗಿ ಪ್ರತಿ ಕೆ.ಜಿ. ಬೀಜವನ್ನು 10 ಗ್ರಾಂ ಇಮಿಡಾಕ್ಲೋಪ್ರಿಡ್ 75 ಡಬ್ಲ್ಯೂ.ಎಸ್. ಅಥವಾ 5 ಗ್ರಾಂ. ಥಯಾಮಿಥಾಕ್ಸಾಮ್ 70 ಡಬ್ಲ್ಯೂ.ಎಸ್‍ದಿಂದ ಬೀಜೋಪಚಾರ ಮಾಡುವುದರಿಂದ ಮೊದಲನೆಯ ಹಂತದಲ್ಲಿ ಬರುವ ರಸ ಹೀರುವ ಕೀಟಗಳನ್ನು 35-40 ದಿನಗಳವರೆಗೆ ನಿಯಂತ್ರಿಸಬಹುದು’ ಎಂದರು.

‘ರಾಸಾಯನಿಕ ಪೀಡೆನಾಶಕಗಳಲ್ಲದೆ ಜೈವಿಕ ಪೀಡೆನಾಶಕಳಾದ ಟ್ರೈಕೋಡರ್ಮ್ 4 ಗ್ರಾಂ ಪ್ರತಿ ಬೀಜಕ್ಕೆ (ತೊಗರಿ), ಸೂಡೋಮೋನಾಸ್ 10 ಗ್ರಾಂ ಪ್ರತಿ ಕೆ.ಜಿ. ಬೀಜಕ್ಕೆ (ಭತ್ತ) ಮತ್ತು ಮೆಟಾರೈಜಿಯಂ 4 ಗ್ರಾಂ. ಪ್ರತಿ ಕೆ.ಜಿ. ಬೀಜಕ್ಕೆ ಪೀಡೆನಾಶಕಗಳನ್ನು ಬಿತ್ತನೆಗೆ ಮುಂಚೆ ಉಪಚರಿಸಬೇಕು. ಇವಲ್ಲದೆ ಜೈವಿಕ ಗೊಬ್ಬರಗಳಾದ ಪಿ.ಎಸ್.ಬಿ. 7.5 ಗ್ರಾಂ ಪ್ರತಿ ಕೆ.ಜಿ. ಬೀಜಕ್ಕೆ ಜೋಸ್ಪೆರುಲಂ 10 ಗ್ರಾಂ. ಪ್ರತಿ ಕೆ.ಜಿ. ಬೀಜಕ್ಕೆ ಮತ್ತು ರೈಜೋಬಿಯಂ 10 ಗ್ರಾಂ. ಪ್ರತಿ ಕೆ.ಜಿ. ಬೀಜಕ್ಕೆ (ತೊಗರಿ) ಉಪಚರಿಸಬಹುದು’ ಎಂದು ಸಲಹೆ ನೀಡಿದರು.

ಹೆಚ್ಚಿನ ಮಾಹಿತಿಗಾಗಿ ಹಿರಿಯ ವಿಜ್ಞಾನಿ ಹನುಮಂತಪ್ಪ ಶ್ರೀಹರಿ ದೂ.ಸಂ: 08532-220196 ಅಥವಾ ವಿಜ್ಞಾನಿ (ಕೀಟಶಾಸ್ತ್ರ) ಶ್ರೀವಾಣಿ ಜಿ.ಎನ್. ಮೊ.ಸಂ: 9480696314 ಸಂಪರ್ಕಿಸಬಹುದಾಗಿದೆ.

ರೈತ ಮುಂಗಾರಿನ ಸಿದ್ಧತೆ ಪ್ರಾರಂಬಿಸಿದ್ದು, ಈಗಾಗಲೇ ಬೀಜಗಳನ್ನು ಕೊಳ್ಳಲಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಉತ್ತಮ ಬೀಜದ ಆಯ್ಕೆಯ ಜೊತೆಗೆ ಬಿತ್ತನೆ ಪೂರ್ವದಲ್ಲಿ ಬೀಜೋಪಚಾರವೂ ಅತಿ ಪ್ರಮುಖವಾದ ಕ್ರಮವಾಗಿದೆ. ಹೀಗಾಗಿ ರೈತರಿಗೆ ಮಾಹಿತಿ ಕೊಡಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ಹೇಮಲತಾ.ಕೆ.ಜೆ, ವಿಜ್ಞಾನಿ (ತೋಟಗಾರಿಕೆ) ಸಹ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT