ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಸ್ಥ್ಯ ಕಾಯುವ ದೇವರು; ವೈದ್ಯ

Last Updated 30 ಜೂನ್ 2020, 18:30 IST
ಅಕ್ಷರ ಗಾತ್ರ

ರಾಯಚೂರು:ದೇಹದ ಸ್ವಾಸ್ಥ್ಯ ಸಮತೋಲನ ಕಳೆದುಕೊಂಡಾಗ ವೈದ್ಯರು, ವಿವಿಧ ಪರೀಕ್ಷೆಗಳನ್ನು ನಡೆಸಿ ಅಗತ್ಯ ಔಷೋಪಚಾರ ಕೊಟ್ಟು ಸರಿದಾರಿಗೆ ತರುವ ಮಹತ್ಕಾರ್ಯ ಮಾಡುತ್ತಾರೆ. ಸೇವಿಸುವ ಊಟ, ಹವಾಮಾನ ಹಾಗೂ ಅನುವಂಶಿಕವಾಗಿ ಕಂಡು ಬರುವ ಅನಾರೋಗ್ಯಗಳಿಗೆ ವೈದ್ಯರು ತಮ್ಮ ಮಾಂತ್ರಿಕ ಕೈಗಳಿಂದ ಚಿಕಿತ್ಸೆ ನೀಡುತ್ತಾರೆ. ಸಾವಿಗೆ ಕಡೆಗೆ ಹೋಗುವ ಮನುಷ್ಯರನ್ನು ಬದುಕಿಸುತ್ತಾರೆ. ಇಂತಹ ವೈದ್ಯರ ಸೇವೆ ಅಮೂಲ್ಯವಾದುದು.

ಜನರಲ್ಲಿ ವೈದ್ಯರ ಮೇಲಿನ ನಂಬಿಕೆ ಅಚಲವಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು, ಹಲ್ಲೆ ಘಟನೆಗಳಲ್ಲಿ ಸಾಯುವ ಸ್ಥಿತಿಗೆ ತಲುಪಿದವರನ್ನು ಹಾಗೂ ದಿಢೀರ್‌ ಅನಾರೋಗ್ಯ ಕಾಣಿಸಿಕೊಳ್ಳುವವರನ್ನು ಎಷ್ಟು ಬೇಗನೆ ಸಾಧ್ಯವೋ ಅಷ್ಟು ಬೇಗನೆ ವೈದ್ಯರಲ್ಲಿಗೆ ಕರೆದೊಯ್ಯುತ್ತಾರೆ. ಸಾಯುವ ಸ್ಥಿತಿಯಲ್ಲಿರುವ ಮನುಷ್ಯನನ್ನು ವೈದ್ಯರು ಬದುಕಿಸುತ್ತಾರೆ ಎನ್ನುವ ಪೂರ್ಣ ನಂಬಿಕೆ ಜನರಲ್ಲಿ ಬೇರೂರಿದೆ.

ದೇವರು ಎಲ್ಲರನ್ನು ಜೀವಿಸುವಂತೆ ಮಾಡಿದ್ದಾನೆ. ಇದಕ್ಕಾಗಿ ಭೂಮಿಯ ಮೇಲೆ ಆಹಾರ, ಉಸಿರಾಟಕ್ಕೆ ಗಾಳಿ ಕೊಟ್ಟಿದ್ದಾನೆ. ದಾಹ ಹಿಂಗಿಸಲು ನೀರು ಇದೆ. ಆಹಾರ ಬೇಯಿಸಿಕೊಳ್ಳಲು ಬೆಂಕಿ ಇದೆ. ಪ್ರಕೃತಿಯಲ್ಲಿಯೇ ದೇವರನ್ನು ಕಾಣುತ್ತೇವೆ; ಆರಾಧಿಸುತ್ತೇವೆ. ಆದರೆ, ನೀರು, ಆಹಾರ, ಬೆಂಕಿ ಅಥವಾ ಗಾಳಿಯಿಂದ ಏನಾದರೂ ದೈಹಿಕ ಆರೋಗ್ಯದಲ್ಲಿ ಏರುಪೇರು ಉಂಟಾದಾಗ, ವಾಸ್ತವದಲ್ಲಿ ದೇವರು ಬಂದು ಚಿಕಿತ್ಸೆ ನೀಡುವುದಿಲ್ಲ. ಪ್ರತ್ಯೇಕ್ಷವಾಗಿ ಕಾಣುವ ವೈದ್ಯರು ದೈಹಿಕ ತೊಂದರೆ ನಿವಾರಿಸುವ ಮೂಲಕ ದೇವರ ಸ್ಥಾನದಲ್ಲಿ ತುಂಬುತ್ತಿದ್ದಾರೆ. ಇದಕ್ಕಾಗಿಯೇ ಪ್ರಾಚೀನ ಕಾಲದಿಂದಲೂ ‘ವೈದ್ಯೋ ನಾರಾಯಣೋ ಹರಿ’ ಎಂದು ಪರಿಗಣಿಸುತ್ತಾ ಬರಲಾಗಿದೆ.

ಕಾಯಿಲೆಗಳು, ದೇಹದೊಳಗಿನ ಅಂಗಗಳಲ್ಲಿ ಕಾಣಿಸುವ ಅನಾರೋಗ್ಯಕ್ಕೂ ವೈದ್ಯರು ಔಷದೋಪಚಾರ ಮಾಡುತ್ತಾ ಬರುತ್ತಿದ್ದಾರೆ. ಮನುಷ್ಯರಿಗೆ ಆವರಿಸಿಕೊಳ್ಳುತ್ತಿರುವ ಹೊಸ ಹೊಸ ಅನಾರೋಗ್ಯ ಸಮಸ್ಯೆಗಳಿಗೆ ವೈದ್ಯರು ಸದಾಕಾಲ ಪರಿಹಾರಗಳನ್ನು ಕಂಡು ಹಿಡಿಯುತ್ತಾ ಬರುತ್ತಿದ್ದಾರೆ. ವೈದ್ಯಕೀಯದಲ್ಲೇ ನೂರಾರು ಉಪವಿಭಾಗಗಳು ಬೆಳೆದು ಬಂದಿವೆ. ಮನುಷ್ಯನ ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡಲು ಪ್ರತ್ಯೇಕ ವೈದ್ಯಕೀಯ ಶಾಸ್ತ್ರಗಳಿವೆ. ದಂತವೈದ್ಯಕೀಯ, ಹೃದಯ, ಕಿಡ್ನಿ, ಕಣ್ಣು, ಕಿವಿ, ಮೂಗು,. ಹೀಗೆ ಪ್ರತಿಯೊಂದಕ್ಕೂ ತಜ್ಞ ವೈದ್ಯರು ಇದ್ದಾರೆ.

ಜನನದಿಂದ ಆರಂಭಿಸಿ ಉಸಿರು ಕೊನೆಯಾಗುವವರೆಗೂ ವೈದ್ಯರು ಎಲ್ಲರ ಬದುಕಿನ ಭಾಗವಾಗಿ ಇರುತ್ತಾರೆ. ಇಂಥ ವೈದ್ಯರ ಸೇವೆಯನ್ನು ಎಲ್ಲರೂ ಸ್ಮರಿಸಿಕೊಳ್ಳಲೇಬೇಕು. ಇದಕ್ಕಾಗಿ ಇಡೀ ಜುಲೈ 1 ರಂದು ‘ವಿಶ್ವ ವೈದ್ಯರ ದಿನ’ ವೆಂದು ಆಚರಿಸಲಾಗುತ್ತಿದೆ. ಜನರಿಗೆ ಕಾಯಿಲೆಗಳು ಹೆಚ್ಚಿದಂತೆ ವೈದ್ಯಕೀಯ ಕ್ಷೇತ್ರವು ಸಾಕಷ್ಟು ವಿಸ್ತರಣೆಯಾಗುತ್ತಿದೆ. ಅನಾರೋಗ್ಯವನ್ನು ಸವಾಲಾಗಿ ಸ್ವೀಕರಿಸಿ, ಅದಕ್ಕೆ ಪರಿಹಾರ ಕಂಡು ಹಿಡಿಯುವ ಮಹತ್ಕಾರ್ಯದಲ್ಲಿ ಇಡೀ ವೈದ್ಯ ಸಮೂಹ ನಿರತವಾಗಿದೆ.

ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪರಿಣಾಮಕಾರಿ ಆರೋಗ್ಯ ಸೇವೆ ದೊರಕಿಸುವ ನಿಟ್ಟಿನಲ್ಲಿ ವಿಶೇಷ ತಜ್ಞ ವೈದ್ಯರಿದ್ದಾರೆ. ಮನುಷ್ಯನನ್ನು ಒಂದು ಸಣ್ಣ ಚಾಕುವಿನಿಂದ ತಿವಿದರೆ ಸ್ವಲ್ಪ ಹೊತ್ತಿನ ಬಳಿಕ ಮೃತಪಡುತ್ತಾನೆ. ವೈದ್ಯರು ಚಾಕುವನ್ನು ಬಳಸಿಕೊಂಡು ಶಸ್ತ್ರಚಿಕಿತ್ಸೆ ನೆರವೇರಿಸುತ್ತಾರೆ. ದೇಹದೊಳಗಿನ ಅಂಗಗಳಲ್ಲಿ ಕಂಡುಬರುವ ತೊಂದರೆಗಳನ್ನು ಸರಿಪಡಿಸುತ್ತಾರೆ.

50 ಹಾಗೂ 60 ರ ದಶಕದಲ್ಲಿ ಅನೇಕ ರೋಗಗಳಿಗೆ ಔಷಧಿ ಹಾಗೂ ಉಪಚಾರವಿಲ್ಲದೆ ಅಧಿಕ ಸಂಖ್ಯೆಯಲ್ಲಿ ಜನರು ಸಾಯುತ್ತಿದ್ದರು. ಪೊಲಿಯೋ ಪೀಡಿತರ ಸಂಖ್ಯೆ ಅಪಾರವಾಗಿತ್ತು. ವೈದ್ಯಕೀಯ ಕ್ಷೇತ್ರದಲ್ಲಿ ನಡೆದ ಸಂಶೋಧನೆಗಳ ಫಲದಿಂದ ಈಗ ಮರಣಪ್ರಮಾಣ ತುಂಬಾ ಕಡಿಮೆಯಾಗಿದೆ. ವೈದ್ಯರ ಮಹತ್ವವೂ ಹೆಚ್ಚಾಗಿದೆ. ಆದರೆ, ಭಾರತದಂತಹ ಅಭಿವೃದ್ಧಿಶೀಲ ದೇಶದ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. ವೈದ್ಯರ ಅಗತ್ಯ ತುಂಬಾ ಇದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಿದಂತೆ ವೈದ್ಯರ ಸಂಖ್ಯೆ ಕೂಡಾ ಕ್ರಮೇಣ ಹೆಚ್ಚಳವಾಗುತ್ತಿರುವುದು ಆಶಾದಾಯಕ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT