ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಪರಿಶಿಷ್ಟರ ಮೇಲಿನ ಹಲ್ಲೆಗೆ ಖಂಡನೆ

ದಲಿತ ಸಂಘರ್ಷ ಸಮಿತಿ ಮುಖಂಡರಿಂದ ಮನವಿ
Last Updated 9 ಮಾರ್ಚ್ 2022, 7:27 IST
ಅಕ್ಷರ ಗಾತ್ರ

ಮಸ್ಕಿ: ಲಿಂಗಸುಗೂರು ತಾಲ್ಲೂಕಿನಾದ್ಯಂತ ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣಗಳು ಹೆಚ್ಚಾಗಿದ್ದು, ಇದಕ್ಕೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಹನುಮಂತಪ್ಪ ವೆಂಕಟಾಪುರ ದೂರಿದರು.

ಲಿಂಗಸುಗೂರು ತಾಲ್ಲೂಕಿನ ರಾಮತ್ನಾಳ, ತವಗ, ಮೇದನಾಪೂರ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ನಡೆದ ಹಲ್ಲೆ ಖಂಡಿಸಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರು ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಮುದಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿಲಾರಹಟ್ಟಿ ಯಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ‌ಹಾಕಿ ತಳಿಸಿದ ಪ್ರಕರಣ ಇನ್ನೂ ಹಸಿರು ಇರುವಾಗಲೇ ಅದೇ ಠಾಣೆಯ ರಾಮತ್ನಾಳ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನಾಂಗದ ಕೆರೆಗೆ ನುಗ್ಗಿ ಹಲ್ಲೆ ಮಾಡಿರುವುದು ಮುದಗಲ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಢಾಕೇಶ ಅವರ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿಯವರ ಮೇಲೆ‌ ಹಾಕಿರುವ ಸುಳ್ಳು ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು. ತಾಲ್ಲೂಕಿನಾದ್ಯಂತ ಪರಿಶಿಷ್ಟ ಜಾತಿಯ ಜನಾಂಗಕ್ಕೆ ರಕ್ಷಣೆ ಕೊಡಬೇಕು ಎಂದು ಅವರು ಆಗ್ರಹಿಸಿದರು.

ದಲಿತರ ಮೇಲೆ ಹಲ್ಲೆಗಳಂಥ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ, ಪೊಲೀಸ್ ಇಲಾಖೆ ಮೌನ ವಹಿಸುವ ಮೂಲಕ ಬೇಜವಾಬ್ದಾರಿ ತೋರುತ್ತಿದೆ. ಇಂಥ ಘಟನೆಗಳು ಮರುಕಳಿಸಿದರೆ ರಾಜ್ಯಾದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. ಸಂಘಟನೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಮಲ್ಲಯ್ಯ ಬಳ್ಳಾ, ತಾಲ್ಲೂಕು ಸಂಚಾಲಕ ಶರಣಪ್ಪ ಕಟ್ಟ‌ಮನಿ, ಮೌನೇಶ ಸುಲ್ತಾ‌ನಪೂರ, ಸಿದ್ದು ಮುರಾರಿ, ಸೋಮನಾಥ ಬಸವರಾಜ ಉದ್ಬಾಳ, ದೊಡ್ಡಮೌನೇಶ, ಹುಲಗಪ್ಪ ಬೆಲ್ಲದಮರಡಿ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT