ಮುದಗಲ್: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಡಿ ದರ್ಜೆ ನೌಕರ ದುರಗಪ್ಪ ಅಮರಪ್ಪ (27) ಎಂಬಾತ ತನ್ನ ಅಜ್ಜಿ ಮತ್ತು ಹೆಂಡತಿಯನ್ನು ಶುಕ್ರವಾರ ಬೆಳಗಿನ ಜಾವ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವಸತಿಗೃಹದಲ್ಲಿ ದ್ಯಾಮಮ್ಮ (66) ಹಾಗೂ ಹೆಂಡತಿ ಜ್ಯೋತಿ (27) ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ದುರಗಪ್ಪನನ್ನು ಹೊಸದಾಗಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್ ಹತ್ತಿರ ಪೊಲೀಸರು ಬಂಧಿಸಿದ್ದಾರೆ.
ಬೆಳಿಗ್ಗೆ ನಾಲ್ಕು ಗಂಟೆಗೆ ತಮ್ಮ ವಸತಿಗೃಹದ ಎದುರಿನ ಮನೆಯ ನರ್ಸ್ ಹತ್ತಿರ ಮೊಬೈಲ್ ಪಡೆದ ದುರಗಪ್ಪ ತನ್ನ ತಂದೆಗೆ ಕರೆ ಮಾಡಿದ್ದಾನೆ. ಹೆಂಡತಿ ಮತ್ತು ತಾನು ಇಬ್ಬರೂ ಮಾತನಾಡಿದ್ದಾರೆ. ಸಂತೆಕೆಲ್ಲೂರಿನಲ್ಲಿದ್ದ ತಂದೆಗೆ ಬರಲು ತಿಳಿಸಿದ್ದಾರೆ. ತಂದೆ ಮುದಗಲ್‌ಗೆ ಬರುವಷ್ಟರಲ್ಲಿ ದುರಗಪ್ಪ ಕೊಲೆ ಮಾಡಿ ಪರಾರಿಯಾಗಿದ್ದ.
ದುರಗಪ್ಪ ಹಾಗೂ ಜ್ಯೋತಿ 10 ವರ್ಷಗಳ ಹಿಂದೆ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ಅವರಿಗೆ ನಾಲ್ಕು ಜನ ಹೆಣ್ಣುಮಕ್ಕಳು ಇದ್ದಾರೆ. ದುರಗಪ್ಪ ಮದ್ಯವ್ಯಸನಿಯಾಗಿದ್ದರಿಂದ ಇಬ್ಬರ ಮಧ್ಯೆ ಕಲಹಗಳು ನಡೆಯುತ್ತಿದ್ದವು ಎಂಬ ಮಾತುಗಳು ಸ್ಥಳೀಯವಾಗಿ ಕೇಳಿಬಂದವು.
ವಿಷಯ ತಿಳಿದ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬದು ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಸಿಂಧನೂರು ಡಿವೈಎಸ್‌ಪಿ ಬಿ.ಎಸ್.ತಳವಾರ, ಮಸ್ಕಿ ಸಿಪಿಐ ಬಾಲಚಂದ್ರ ಲಕ್ಕಂ, ಪಿಎಸ್‌ಐ ವೆಂಕಟೇಶ, ಇಎಚ್‌ಒ ಅಮರೇಶ ಪಾಟೀಲ ಭೇಟಿ ನೀಡಿ ಪರಿಶೀಲನೆ ಮಾಡಿದರು.