ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ: ಇಂಗ್ಲಿಷ್‌ ಮಾಧ್ಯಮ ಮಕ್ಕಳಿಗೆ ಕನ್ನಡ ಶಿಕ್ಷಕರೇ ಆಸರೆ

ಮಂಜುನಾಥ ಎನ್‌.ಬಳ್ಳಾರಿ
Published 8 ಮಾರ್ಚ್ 2024, 5:39 IST
Last Updated 8 ಮಾರ್ಚ್ 2024, 5:39 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದ ಕನ್ಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭವಾಗಿ ನಾಲ್ಕು ವರ್ಷಗಳಾದರೂ ಶಿಕ್ಷಕರ ನೇಮಕವಾಗಿಲ್ಲ. ಹೀಗಾಗಿ ಕನ್ನಡ ಮಾಧ್ಯಮದ ಶಿಕ್ಷಕರೇ ಇಂಗ್ಲಿಷ್‌ ಮಾಧ್ಯಮದ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

ಇಂಗ್ಲಿಷ್‌ ಮಾಧ್ಯಮದಲ್ಲಿ ಅಂದಾಜು 35 ಮಕ್ಕಳು ಸೇರಿದಂತೆ 1ರಿಂದ 7ನೇ ತರಗತಿಯ ವರೆಗೆ ಒಟ್ಟು 276 ವಿದ್ಯಾರ್ಥಿಗಳು ಕಲಿಯುತ್ತಿರುವ ಈ ಶಾಲೆಯಲ್ಲಿ 12 ಜನ ಶಿಕ್ಷಕ ಹುದ್ದೆಗಳ ಮಂಜೂರಾತಿ ಇದೆ. ಪ್ರಸ್ತುತ 9 ಜನ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.

ಖಾಸಗಿ ಶಾಲೆಗಳ ದುಬಾರಿ ಶುಲ್ಕ ಭರಿಸಲು ಸಾಧ್ಯವಾಗದ ಬಹುತೇಕ ಬಡ ಮತ್ತು ಮಧ್ಯಮ ವರ್ಗದ ಪಾಲಕರು ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿಸಿದ್ದಾರೆ. ಸದ್ಯ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

12 ಕೊಠಡಿಗಳಿದ್ದು ತರಗತಿ ನಡೆಸಲು ಅನುಕೂಲವಿದೆ. ಆದರೆ ಆವರಣ ಇಲ್ಲದ ಕಾರಣ ಮಕ್ಕಳಿಗೆ ಆಟವಾಡಲು ಮತ್ತು ಬೆಳಿಗ್ಗೆ ಪ್ರಾರ್ಥನೆಗೆ ನಿಂತುಕೊಳ್ಳಲೂ ಜಾಗದ ಕೊರತೆ ಇದೆ. ಆಟವಾಡಲು ಆವರಣವೇ ಇಲ್ಲ ಎನ್ನುವ ಕಾರಣಕ್ಕೆ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಯನ್ನೇ ಮಂಜೂರು ಮಾಡಿಲ್ಲ. ಹೀಗಾಗಿ ವೈಯಕ್ತಿಕ ಆಟ ಹೊರತು ಪಡಿಸಿ ಗುಂಪು ಆಟಗಳಲ್ಲಿ ಮಕ್ಕಳು ಭಾಗವಹಿಸುತ್ತಿಲ್ಲ.

ಕುಡಿಯಲು ಯೋಗ್ಯವಿಲ್ಲದ ಕಾರಣ ಕೊಳವೆಬಾವಿ ನೀರನ್ನು ಬಳಕೆಗೆ ಮತ್ತು ಬಿಸಿಯೂಟ ತಯಾರಿಕೆಗೆ ನಲ್ಲಿ ನೀರು ಉಪಯೋಗಿಸಲಾಗುತ್ತಿದೆ. ಶುದ್ಧ ನೀರಿನ ಕೊರತೆಯಿಂದ ಮಕ್ಕಳು ಮನೆಯಿಂದಲೇ ನೀರು ತಂದು ಕುಡಿಯುವಂತ ಪರಿಸ್ಥಿತಿ ಇದೆ.

ಬಿಸಿಯೂಟ ಕೊಠಡಿಯ ಚಾವಣಿ ಸಿಮೆಂಟ್‌ ಕಳಚಿ ಬೀಳುತ್ತಿದೆ. ಆರು ಶೌಚಾಲಯಗಳಲ್ಲಿ ಎರಡು ನಿರುಪಯುಕ್ತವಾಗಿವೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇನ್ನೂ ಎರಡು ಶೌಚಾಲಯಗಳ ಅಗತ್ಯವಿದೆ. ಕಾಂಪೌಂಡ್‌ ಕಿರಿದಾಗಿದ್ದು ಶಾಲಾ ಸಮಯ ಮುಗಿದ ನಂತರ ಕಾಂಪೌಂಡ್‌ ಜಿಗಿದು ಒಳ ಬರುವ ಕಿಡಿಗೇಡಿಗಳು ನೀರಿನ ಪೈಪ್‌ ಮುರಿಯುವುದು, ಬೀಡಿ ಸಿಗರೇಟು, ಗುಟಕಾ ಸೇದಿ ಎಸೆಯುತ್ತಾರೆ ಎನ್ನುವ ದೂರು ಇದೆ.

‘ಪಾಲಕರ ಒತ್ತಾಯದ ಮೇರೆಗೆ ಈಚೆಗೆ ಒಬ್ಬ ಅತಿಥಿ ಶಿಕ್ಷಕಿಯನ್ನು ನೇಮಿಸಿದ್ದಾರೆ. ಇಂಗ್ಲಿಷ್‌ ಮಾಧ್ಯಮಕ್ಕೆ ಪ್ರವೇಶ ಪಡೆದ ಕಾರಣ ಈಗಾಗಲೇ ಕನ್ನಡ ಮಾಧ್ಯಮ ಕೃಪಾಂಕದಿಂದ ವಂಚಿತರಾಗಿದ್ದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವೂ ಸಿಗುತ್ತಿಲ್ಲ. ಪ್ರತ್ಯೇಕ ಶಿಕ್ಷಕರ ನೇಮಕಕ್ಕೆ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಪಾಲಕ ಹಂಪಣ್ಣ ಕಂದಗಲ್‌ ಒತ್ತಾಯಿಸಿದರು.

ಬಿಸಿಯೂಟದ ಅಡುಗೆ ಕೊಠಡಿ ಶೌಚಾಲಯ ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚುಗಳು ಶುದ್ಧ ಕುಡಿಯುವ ನೀರು ಮತ್ತು ಕಾಂಪೌಂಡ್‌ ಎತ್ತರಿಸುವ ಕೆಲಸ ತುರ್ತಾಗಿ ಆಗಬೇಕು
– ಬಲವಂತ ಯಾದವ, ಎಸ್‌ಡಿಎಂಸಿ ಅಧ್ಯಕ್ಷ
- ತಾಲ್ಲೂಕಿನ 15 ಬಹುಭಾಷೆ ಶಾಲೆಗಳಿಗೆ ಸರ್ಕಾರ ಶಿಕ್ಷಕ ಹುದ್ದೆ ಮಂಜೂರು ಮಾಡಿಲ್ಲ. ಹೀಗಾಗಿ ಅತಿಥಿ ಶಿಕ್ಷಕರು ಹಾಗೂ ಕನ್ನಡ ಮಾಧ್ಯಮ ಶಿಕ್ಷಕರ ಸೇವೆ ಪಡೆಯಲಾಗುತ್ತಿದೆ
ಚಂದ್ರಶೇಖರ ದೊಡ್ಮನಿ, ಬಿಇಒ ಮಾನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT