ಗುರುವಾರ , ನವೆಂಬರ್ 26, 2020
19 °C
ಕರ್ನಾಟಕ ರೈತ ಸಂಘದ ವಿಚಾರ ಸಂಕಿರಣದಲ್ಲಿ ಡಾ.ರಝಾಕ್ ಉಸ್ತಾದ್ ಅಭಿಮತ

ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೂತನ ಎಪಿಎಂಸಿ ಹಾಗೂ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೊಳಿಸುವಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಇದೆ’ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ಡಾ.ರಝಾಕ್ ಉಸ್ತಾದ್ ಹೇಳಿದರು.

ಶನಿವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರೈತ ಸಂಘ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು, ‘ಕೃಷಿ ಹಾಗೂ ನೂತನ ಭೂ ಸುಧಾರಣಾ ಕಾಯ್ದೆಗಳ ತಿದ್ದುಪಡಿ’ ಕುರಿತು ಅವರು ವಿಷಯ ಮಂಡಿಸಿದರು.

‘ದೇಶದ ಬೆನ್ನೆಲುಬು ಆಗಿರುವ ರೈತರ ಭೂಮಿಯನ್ನು ಬಂಡವಾಳಶಾಹಿಗಳು ಬೃಹತ್ ಖಾಸಗಿ ಕಂಪೆನಿಗಳಿಗೆ ಹಸ್ತಾಂತರಿಸಲು ಹೊರಟಿರುವುದು ಖಂಡನೀಯ. ಹೊಸ ಕಾಯ್ದೆಗಳಿಂದ ರೈತರು ಬಂಡವಾಳಶಾಹಿಗಳ ಕೈಗೊಂಬೆಯಾಗುವುದು ನಿಶ್ಚಿತ. ಭೂ ಸುಧಾರಣಾ ಕಾಯ್ದೆಯ 79ಎ, 79ಬಿ, 79ಸಿ ನಿಯಮಗಳನ್ನು ಸಂಪೂರ್ಣವಾಗಿ ತೆಗೆದುಹಾಕಿರುವುದರಿಂದ ಕೃಷಿ ಭೂಮಿ ಖರೀದಿಗೆ ನಿರ್ದಿಷ್ಟ ಮಿತಿ ಇಲ್ಲದಾಗಿದೆ. ಇದರಿಂದ ಕೃಷಿ ಹಾಗೂ ರೈತರು ಉಳಿಯುವುದಿಲ್ಲ’ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಬೆಟ್ಟದೂರು ಮಾತನಾಡಿ, ‘1974ರ ಅವಧಿಯಲ್ಲಿ ಮುಖ್ಯ ಮಂತ್ರಿಯಾಗಿದ್ದ ದೇವರಾಜ್ ಅರಸು ಅವರು ಭೂ ಸುಧಾರಣಾ ಕಾನೂನು ಜಾರಿಗೆ ತರುವ ಮೂಲಕ ರೈತರ ಭೂಮಿಯನ್ನು ಉಳಿಸುವ ಕಾರ್ಯ ಮಾಡಿದ್ದರು. ಆದರೆ ಇಂದು ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ರೈತರನ್ನು ಬೀದಿಗೆ ತರುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ. ಕಾರಣ ರೈತರು, ರೈತ ಮುಖಂಡರು ಹೊಸ ಕಾಯ್ದೆಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಇತರರಿಗೆ ಜಾಗೃತಿ ಮೂಡಿಸಬೇಕಿದೆ’ ಎಂದರು.

ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಬೇಕು’ ಎಂದರು.

ಭಗತ್ ಸಿಂಗ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಅಶೋಕ ನಿಲೋಗಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪಿ.ಪರಮೇಶ ಹಾಗೂ ತಾಯಪ್ಪ ಬಿ.ಹೊಸೂರು, ಅಮರೇಶ ಹಿರೇದಿನ್ನು, ಪರಶುರಾಮ ಹಿರೇದಿನ್ನಿ, ಆನಂದ ಭೋವಿ, ರಮೇಶ ಪಾಟೀಲ್, ಉರಕುಂದ ಮತ್ತಿತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.