ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ಸರಿದೂಗಿಸುವುದು ರೈತರಿಂದ ಸಾಧ್ಯ: ರಾಜಸ್ತಾನದ ಜಲತಜ್ಞ ರಾಜೇಂದ್ರ ಸಿಂಗ್

ರೈತ ಸಮ್ಮೇಳನ
Last Updated 28 ಜನವರಿ 2019, 13:39 IST
ಅಕ್ಷರ ಗಾತ್ರ

ರಾಯಚೂರು: ಹವಾಮಾನದಲ್ಲಿನ ವೈಪರಿತ್ಯವನ್ನು ಸರಿ ಮಾಡಲು ರೈತರಿಂದ ಮಾತ್ರ ಸಾಧ್ಯವಿದ್ದು, ಅವರನ್ನು ಬಿಟ್ಟರೆ ಬೇರೆ ಯಾರಿಂದಲೂ ಸರಿ ಮಾಡಲಾಗುವುದಿಲ್ಲ ಎಂದು ರಾಜಸ್ತಾನ ಜಲತಜ್ಞ ರಾಜೇಂದ್ರ ಸಿಂಗ್ ಹೇಳಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ವಿಶ್ವವಿದ್ಯಾಲಯ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಿಂದ ಆಯೋಜಿಸಿರುವ ರೈತ ಸಮ್ಮೇಳನದ ಕೊನೆಯ ದಿನ ಸೋಮವಾರ ‘ನೀರು ಗ್ರಾಮದ ಜೀವನಾಡಿ’ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಭೂಮಿಯಲ್ಲಿ ಸಿಗುವ ಅಂತರ್ಜಲವನ್ನು ಶೇ 72ರಷ್ಟು ಖಾಲಿ ಮಾಡಲಾಗಿದ್ದು, ನೀರಿನ ಬಳಕೆಯ ಜೊತೆಗೆ ಜಲವೃದ್ಧಿ ಮಾಡುವ ಕಾರ್ಯಗಳಿಗೆ ಒತ್ತು ನೀಡಬೇಕು. ಹಸಿರೀಕರಣದಿಂದ ಹವಾಮಾನದಲ್ಲಿ ಉಷ್ಣಾಂಶ ಕಡಿಮೆಯಾಗಲಿದೆ. ಆದ್ದರಿಂದ ಹೆಚ್ಚಾಗಿ ಗಿಡಗಳನ್ನು ಬೆಳೆಸುವ ಮೂಲಕ ಅರಣ್ಯವನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.

ಹವಾಮಾನದಲ್ಲಿ ಉಷ್ಣಾಂಶ ಅಧಿಕಗೊಂಡಿದ್ದರಿಂದ ರೈತರು ಹಲವು ಸಮಸ್ಯೆ ಎದುರಿಸುವಂತಾಗಿದೆ. ಕೃಷಿಯ ವೆಚ್ಚ ಅಧಿಕಗೊಂಡು ಲಾಭವಿಲ್ಲದಂತಾಗಿ ರೈತರು ಶೋಚನೀಯ ಸ್ಥಿತಿಯಲ್ಲಿದ್ದಾರೆ. ನೀರಿನ ಮೂಲ ಹೆಚ್ಚಿಸಿಕೊಳ್ಳಲು ಒತ್ತು ನೀಡಬೇಕು. ನೀರಿನ ಜಾಗೃತಿ ಮೂಡಿಸುವುದು ಕೃಷಿ ವಿಶ್ವವಿದ್ಯಾಲಯದ ಆದ್ಯತೆಯಾಗಬೇಕು ಎಂದರು.

ಮಳೆಗೆ ಅನುಗುಣವಾಗಿ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಕರ್ನಾಟಕದ ಮಣ್ಣು ಚೆನ್ನಾಗಿದ್ದು, ಇಲ್ಲಿಯವರು ಪುಣ್ಯವಂತರು. ರಾಜಸ್ತಾನದಲ್ಲಿನ ಪರಿಸ್ಥಿತಿ ಬಹಳ ಗಂಭೀರವಾಗಿದ್ದರೂ, ಸರ್ಕಾರದ ಸಹಕಾರವಿಲ್ಲದೇ ಬತ್ತಿದ ನದಿಗಳನ್ನು ಜೀವಂತಗೊಳಿಸಿ ಬೆಳೆ ಬೆಳೆಯಲಾಗುತ್ತಿದೆ. 11,800 ಅಧಿಕ ಡ್ಯಾಂಗಳನ್ನು ಕಟ್ಟಲಾಗಿದೆ. ಒಟ್ಟು 12 ನದಿಗಳನ್ನು ಜನರ ಸಹಭಾಗಿತ್ವದಿಂದ ಮರುಪೂರಣಗೊಳಿಸಲಾಗಿದ್ದು, ಉತ್ತಮವಾಗಿ ಬೆಳೆ ಬೆಳೆಯುವುದರಿಂದ ರೈತರು ಗುಳೆ ಹೋಗುವುದು ಕಡಿಮೆಯಾಗಿದೆ ಎಂದು ವಿವರಿಸಿದರು.

ರಾಜಸ್ತಾನದಲ್ಲಿ ಭೂಮಿಯ ಒಳಗಿನ ನೀರಿನ ಬಗ್ಗೆ ಸಂಶೋಧನೆ ಕೈಗೊಂಡು ಯಶಸ್ಸು ಸಾಧಿಸಲಾಗಿದೆ. ಹಸಿರು ಕಂಗೊಳಿಸುತ್ತಿದ್ದು, 49 ಡಿಗ್ರಿ ಸೆಲ್ಸಿಯಸ್‌ ಇರುತ್ತಿದ್ದ ಬಿಸಿಲಿನ ತಾಪಮಾನ ಈಗ 46 ಡಿಗ್ರಿ ಸೆಲ್ಸಿಯಸ್‌ ದಾಟುತ್ತಿಲ್ಲ ಎಂದರು.

ವಿಶ್ವ ವಿದ್ಯಾಲಯಗಳು ಹಾಗೂ ವಿಜ್ಞಾನಿಗಳು ಭೂಮಿಯ ಮೇಲೆ ಹರಿಯುವ ನೀರಿನ ಮೇಲೆಯೇ ಸಂಶೋಧನೆಗಳು ಮಾಡಿದ್ದಾರೆ. ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳು ಬೇರೆ ಮಾರ್ಗದಲ್ಲಿ ಸಾಗಿದ್ದಾರೆ. ದೇಶದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದರೂ, ನೀರು ಲಭ್ಯವಿಲ್ಲ ಎಂದು ತಿಳಿಸಿದರು.

ಅಭಿವೃದ್ಧಿಗೆ ಅಮೇರಿಕಾ ದೇಶವನ್ನು ಮಾದರಿ ಇಟ್ಟುಕೊಂಡು ನೈಸರ್ಗಿಕ ಸಂಪನ್ಮೂಲಗಳನ್ನು ಹಾಳು ಮಾಡಿಕೊಂಡು ಪರಿಸರ ಮಾಲಿನ್ಯಕ್ಕೆ ಅವಕಾಶ ನೀಡಬಾರದು. ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಅವುಗಳ ರಕ್ಷಣೆಯ ಜವಾಬ್ದಾರಿ ನಿರ್ವಹಿಸಬೇಕು ಎಂದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಕೆ.ಎನ್.ಕಟ್ಟಿಮನಿ, ಎಸ್.ಎ.ಪಾಟೀಲ, ಎಸ್.ಕೆ.ಮೇಟಿ, ಆಡಳಿತ ಮಂಡಳಿಯ ಸದಸ್ಯರಾದ ಅಮರೇಶ, ಎಂ.ಶೇಖರಗೌಡ, ಸಿದ್ದಪ್ಪ ಭಂಡಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT