ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ರೈತರ ಕೈಸೇರದ ಜೋಳದ ಹಣ

‌ಮೂರು ತಿಂಗಳಿಂದಲೂ ಹೇಳಿದ್ದೇ ಹೇಳುತ್ತಿರುವ ಅಧಿಕಾರಿಗಳು: ರೈತರಿಗೆ ಬೇಸರ
Last Updated 29 ಜೂನ್ 2021, 19:30 IST
ಅಕ್ಷರ ಗಾತ್ರ

ಸಿಂಧನೂರು: ರಾಜ್ಯ ಸರ್ಕಾರ ಆರಂಭಿಸಿರುವ ಬೆಂಬಲ ಬೆಲೆಯ ಖರೀದಿ ಕೇಂದ್ರಕ್ಕೆ ಜೋಳವನ್ನು ಮಾರಾಟ ಮಾಡಿರುವ ರೈತರು ಕಳೆದ ಮೂರು ತಿಂಗಳಿನಿಂದಲೂ ಬಾಕಿ ಹಣ ಪಾವತಿ ಆಗದಿರುವುದರಿಂದ ಅತಂತ್ರ ಸ್ಥಿತಿಯಲ್ಲಿ ಸಿಲುಕಿ ನಿತ್ಯ ಹಣಕ್ಕಾಗಿ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಬಾದರ್ಲಿ, ಗೋನವಾರ, ರಾಗಲಪರ್ವಿ, ವಲ್ಕಂದಿನ್ನಿ, ದಿದ್ದಿಗಿ, ಸಾಲಗುಂದಾ, ಜವಳಗೇರಾ ಮತ್ತಿತರ ಗ್ರಾಮಗಳು ಅತಿಹೆಚ್ಚು ಜೋಳ ಬೆಳೆಯುವ ಪ್ರದೇಶಗಳಾಗಿವೆ.

ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಿಂದ ಜೋಳ ಖರೀದಿ ನಡೆದಿದೆ. ಅಲ್ಲದೆ ಇದೇ ಪ್ರಥಮ ಬಾರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಜೋಳ ಖರೀದಿಗೆ ಅವಕಾಶ ನೀಡಲಾಗಿತ್ತು. ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳ ಹೈಬ್ರಿಡ್ ಕ್ವಿಂಟಲ್‍ಗೆ ₹ 2620, ಬಿಳಿಜೋಳ ಮಾಲ್ದಂಡಿಗೆ ₹ 2640 ದರ ನಿಗದಿ ಮಾಡಿತ್ತು.

ಮಾರುಕಟ್ಟೆಯಲ್ಲಿ ಕ್ವಿಂಟಲ್ ಜೋಳಕ್ಕೆ ಆರಂಭದಲ್ಲಿ ₹ 1700 ರಿಂದ ₹ 2000 ವರೆಗೆ ಇದ್ದಿದ್ದರಿಂದ ರೈತರೆಲ್ಲರೂ ಖರೀದಿ ಕೇಂದ್ರಕ್ಕೆ ಜೋಳ ಮಾರಾಟ ಮಾಡಿ, ಮಾರುಕಟ್ಟೆ ದರಕ್ಕಿಂತ ₹ 700 ಹೆಚ್ಚಿನ ಲಾಭ ಪಡೆದಿದ್ದಾರೆ.

ಸಿಂಧನೂರು ತಾಲ್ಲೂಕಿನಲ್ಲಿಯೇ 5 ಸಾವಿರಕ್ಕೂ ಅಧಿಕ ರೈತರಿಂದ ಕೆಎಎಫ್‍ಸಿಎಸ್ 1,71,587 ಲಕ್ಷ ಕ್ವಿಂಟಲ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು 2,05,904 ಲಕ್ಷ ಕ್ವಿಂಟಲ್ ಸೇರಿ ಒಟ್ಟು 3,77,491 ಕ್ವಿಂಟಲ್‍ಗೂ ಅಧಿಕ ಜೋಳವನ್ನು ಖರೀದಿ ಮಾಡಲಾಗಿದೆ.

ಮಾರ್ಚ್ 24 ರವರೆಗೆ ಜೋಳ ಖರೀದಿಸಿದ ಹಣವನ್ನು ರೈತರಿಗೆ ಪಾವತಿ ಮಾಡಲಾಗಿದೆ. ಆದರೆ ನಂತರದಿಂದ ಇಲ್ಲಿಯವರೆಗೂ 2800 ರೈತರಿಗೆ ಅಂದಾಜು ₹ 40 ಕೋಟಿ ಹಣವನ್ನು ಕೊಟ್ಟಿಲ್ಲ.

ಪ್ರಸ್ತುತ ಮುಂಗಾರು ಹಂಗಾಮು ಆರಂಭವಾಗಿದ್ದು, ಎಲ್ಲೆಡೆ ಕೃಷಿ ಚಟುವಟಿಕೆ ಶುರುವಾಗಿದೆ. ಬಾಕಿ ಹಣ ಹಾಗೂ ಕೃಷಿ ಚಟುವಟಿಕೆಗೆ ಸಾಲ ಕೊಡುವಂತೆ ರೈತರು ಸಹಕಾರಿ ಸಂಘಗಳಿಗೆ ಒತ್ತಡ ಹಾಕಿದ್ದಾರೆ.

ಭರವಸೆ ಹುಸಿ: ಶಾಸಕ ವೆಂಕಟರಾವ್ ನಾಡಗೌಡರು ಸರ್ಕಾರಕ್ಕೆ ಪತ್ರ ಬರೆದು ಜೋಳ ಖರೀದಿಸಿದ ಬಾಕಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಈಚೆಗೆ ರಾಯಚೂರಿಗೆ ಬಂದಿದ್ದ ಸಂದರ್ಭದಲ್ಲಿ ಜೂನ್ 20 ರೊಳಗೆ ಜೋಳದ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ನೀಡಿದ್ದ ಭರವಸೆಯೂ ಹುಸಿಯಾಗಿದೆ.

ಹೀಗಾಗಿ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಹೇಳುವ ಸುಳ್ಳುಗಳಿಂದ ರೋಸಿ ಹೋಗಿರುವ ರೈತರು ಕೆಎಎಫ್‍ಸಿಎಸ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ದಿನಗಳು ಸನ್ನಿಹಿತವಾಗಿವೆ ಎಂದು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT