ಮಂಗಳವಾರ, ಮಾರ್ಚ್ 9, 2021
31 °C
ರಾಯಚೂರು, ಮಾನ್ವಿ, ದೇವದುರ್ಗ, ಸಿರವಾರ ತಾಲ್ಲೂಕುಗಳ ವ್ಯಾಪ್ತಿ

ಗ್ರಾಪಂ ಮತದಾನಕ್ಕೆ ಮತಗಟ್ಟೆಗಳು ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಡಿಸೆಂಬರ್‌ 22 ರಂದು ನಡೆಯುವ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನಕ್ಕಾಗಿ ಎಲ್ಲ ಕಡೆಗಳಲ್ಲೂ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು.

ನಗರದ ಎಲ್‌ವಿಡಿ ಕಾಲೇಜಿನಲ್ಲಿ ಸೋಮವಾರ ನಡೆಯುತ್ತಿದ್ದ, ವಿವಿಧ ಗ್ರಾಮಗಳಲ್ಲಿನ ಮತದಾನ ಪ್ರಕ್ರಿಯೆ ನಡೆಸುವುದಕ್ಕೆ ಕೈಗೊಂಡಿದ್ದ ಪೂರ್ವತಯಾರಿಯನ್ನು ಸೋಮವಾರ ಪರಿಶೀಲಿಸಿ ಮಾತನಾಡಿದರು.

ಮೊದಲ ಹಂತದ ಮತದಾನ ಪ್ರಕ್ರಿಯೆಗೆ ನಡೆಸುವುದಕ್ಕೆ ಎಲ್ಲವೂ ಸಿದ್ಧತೆ ಆಗಿದೆ. ಒಟ್ಟು 91 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. 1,793 ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 873 ಮತಗಟ್ಟೆಗಳಿವೆ. ಅದರಲ್ಲಿ 77 ಮತಗಟ್ಟೆಗಳು ಅತಿಸೂಕ್ಷ್ಮ, 157 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದರು.

ಈ ಹಿಂದೆ ನಡೆದಿರುವ ಗಲಭೆ, ಮತದಾನ ಬಹಿಷ್ಕಾರ ಸೇರಿದಂತೆ ಚುನಾವಣೆಯಲ್ಲಿ ಅಡಚಣೆ ಘಟನೆಗಳು ನಡೆದಿರುವ ಕಡೆಗಳಲ್ಲಿ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಒಟ್ಟು 40 ಸೆಕ್ಟೆರ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಇವರು ತಾಲ್ಲೂಕು ದಂಡಾಧಿಕಾರಿಗಳೆಂದು ಕಾರ್ಯನಿರ್ವಹಿಸಲಿದ್ದು, ದಂಡಾಧಿಕಾರ ನೀಡಲಾಗಿದೆ ಎಂದು ತಿಳಿಸಿದರು.

ನಾಲ್ಕು ತಾಲ್ಲೂಕುಗಳಲ್ಲಿ 12 ತಂಡಗಳು ಚುನಾವಣೆ ನೀತಿ ಸಂಹಿತೆ ಜಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ನೋಡಲ್‌ ಅಧಿಕಾರಿಗಳಿದ್ದಾರೆ. 1,036 ಮತಗಟ್ಟೆ ಅಧಿಕಾರಿಗಳು, 1036 ಸಹಾಯಕ ಮತಗಟ್ಟೆ ಅಧಿಕಾರಿಗಳು ಹಾಗೂ 2,072 ಪೊಲೀಂಗ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಮತಗಟ್ಟೆಗಳಿಗೆ ತೆರಳುವುದಕ್ಕೆ ನಾಲ್ಕು ತಾಲ್ಲೂಕುಗಳಲ್ಲಿ ಒಟ್ಟು 286 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ತಾಲ್ಲೂಕುಗಳ ಪೈಕಿ ಮೂರು ಕಡೆಗಳಲ್ಲಿ ಮಸ್ಟರಿಂಗ್‌, ಡಿಮಸ್ಟರಿಂಗ್‌ ವ್ಯವಸ್ಥೆ ಇದೆ. ಹೊಸ ತಾಲ್ಲೂಕು ಸಿರವಾರದಲ್ಲಿ ಮೂಲ ಸೌಕರ್ಯಗಳು ಕಡಿಮೆ ಇರುವುದರಿಂದ ಮಾನ್ವಿಯಲ್ಲಿಯೇ ಮತಗಳ ಎಣಿಕೆ ನಡೆಯಲಿದೆ ಎಂದು ಹೇಳಿದರು.

ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 5,99,038 ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಎಲ್ಲೆಡೆಯಲ್ಲೂ ಬಿಗಿ ಬಂದೋಬಸ್ತ್‌ಗೆ ಸಂಬಂಧಿಸಿದಂತೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಈಗಾಗಲೇ ಪ್ರತಿ ಮತಗಟ್ಟೆಯಲ್ಲಿ ಸಮವಸ್ತ್ರ ಧರಿಸಿದ ಕಾನ್ಸ್‌ಟೇಬಲ್‌ ಇರುವಂತೆ, ಸೂಕ್ಷ್ಮ ಮತಗಟ್ಟೆಗಳಲ್ಲಿ ಒಬ್ಬರು ಹೆಡ್‌ಕಾನ್ಸ್‌ಟೇಬಲ್‌ ಮತ್ತು ಕಾನ್ಸ್‌ಟೇಬಲ್‌ ಇರಲಿದ್ದಾರೆ. ಮತದಾನ ಪ್ರಕ್ರಿಯೆ ಅಗತ್ಯ ಪರಿಕರಗಳನ್ನು ಒದಗಿಸಲಾಗಿದೆ. ಮತಪತ್ರಗಳನ್ನು ಮಾಡಿಕೊಡಲಾಗಿದೆ. ಎರಡು ರೀತಿಯಲ್ಲಿ ಕೋವಿಡ್‌ ಕಿಟ್ಸ್‌ಗಳನ್ನು ನೀಡಲಾಗಿದೆ. ಸ್ಯಾನಿಟೈಟಜರ್‌, ಥರ್ಮಲ್‌ ಸ್ಕ್ಯಾನರ್‌, ಮುಖಗವುಸುಗಳನ್ನು ಎಲ್ಲ ಮತಗಟ್ಟೆಗಳಿಗೆ ಕೊಡಲಾಗಿದೆ. ಮತದಾನಕ್ಕೆ ಬರುವವರು ಕಡ್ಡಾಯವಾಗಿ ಮುಖಗವುಸು ಹಾಕಿಕೊಂಡು ಬರಬೇಕು. ಮುಖಗವುಸು ಹಾಕಿಕೊಳ್ಳದಿದ್ದರೆ ಮತದಾನ ಅವಕಾಶ ಇರುವುದಿಲ್ಲ ಎಂದರು.

ತಾಲ್ಲೂಕು ಆಡಳಿತಗಳಿಗೆ ಕೋವಿಡ್‌ಗೆ ಸಂಬಂಧಿಸಿದಂತೆ ಸೂಚನೆ ನೀಡಲಾಗಿದೆ. ಕೋವಿಡ್‌ ದೃಢಪಟ್ಟವರು ಮತದಾನ ಬರುವವರ ಬಗ್ಗೆ ಮೊದಲೇ ಮಾಹಿತಿ ಪಡೆದುಕೊಳ್ಳಲು ತಿಳಿಸಲಾಗಿದೆ. ಅವಿರೋಧ ಆಯ್ಕೆಯಾದ ಬಗ್ಗೆ ವರದಿ ಪಡೆಯಲಾಗುತ್ತಿದೆ. ಅವಿರೋಧ ಆಯ್ಕೆಗೆ ನಿಯಮದ ಪ್ರಕಾರ ಅವಕಾಶವಿದೆ. ಆಮಿಷ ತೋರಿಸಿ ಆಯ್ಕೆಯಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಎಲ್ಲಿಯೂ ಮತದಾನ ಬಹಿಷ್ಕಾರ ಆಗಿಲ್ಲ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು