ರಾಯಚೂರು: ಭಾರತ ಜ್ಞಾನ ವಿಜ್ಞಾನ ಸಮಿತಿ, ಬಾಲಭವನ ಸೊಸೈಟಿ ಬೆಂಗಳೂರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಅರಣ್ಯ ಇಲಾಖೆ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮುದಾಯ ಹಾಗೂ ರಾಯಚೂರು ಹಸಿರು ಬಳಗದಿಂದ 15ನೇ ವರ್ಷದ ಉಚಿತ ಬೇಸಿಗೆ ಶಿಬಿರವನ್ನು ಆರ್‌ಟಿಒ ವೃತ್ತದ ಹತ್ತಿರ ಅರಣ್ಯ ಇಲಾಖೆಯ ನಿಸರ್ಗಧಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಜಾಗತಿಕ ತಾಪಮಾನ, ಪರಿಸರ ಸಂರಕ್ಷಣೆ, ಮಣ್ಣಿನ ರಕ್ಷಣೆ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡಲಾಯಿತು. ನವರಂಗ ದರ್ವಾಜಕ್ಕೆ ಭೇಟಿ ನೀಡಿ ಕೋಟೆ ಇತಿಹಾಸ ಪರಿಚಯ ಮಾಡಲಾಯಿತು. ಪ್ರಾದೇಶಿಕ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಚಟುವಟಿಕೆಗಳಾದ ಸಾವಯವ ಗೊಬ್ಬರ ತಯಾರಿ, ಮಣ್ಣು, ನೀರಿನ ಪರೀಕ್ಷೆಯ ಮಾಹಿತಿ ಒದಗಿಸಲಾಯಿತು. ವೈಜ್ಞಾನಿಕ ಚಿಂತನೆ ಬೆಳೆಸುವ ಮೂಲಕ ಓದಿನ ಬಗ್ಗೆ ಆಸಕ್ತಿ ಹೆಚ್ಚಿಸಲಾಯಿತು.
ಪವಾಡ ಬಯಲು, ಪೇಂಟಿಂಗ್, ಮಣ್ಣಿನಿಂದ ಆಭರಣಗಳ ತಯಾರಿಕೆ, ಮ್ಯಾಜಿಕ್ ಗಣಿತ, ಪರಿಸರ ಜಾಗೃತಿ, ಯೋಗ, ಏರೋಬಿಕ್ಸ್, ಡ್ಯಾನ್ಸ್ ಹಾಗೂ ಮಕ್ಕಳ ಕಥೆ ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕ ಪಿ.ಎನ್. ರಾಘವೇಂದ್ರ ಪುಚ್ಚಲದಿನ್ನಿ. ಎಂ.ಸವಿತಾ, ಮೈತ್ರಾ, ವಿಜ್ಞಾನ ಕೇಂದ್ರದ ಸಂಯೋಜಕ ಅಜಿತ್, ಸಂಚಾರಿ ಠಾಣೆಯ ಶೀಲಾ, ಸಾಹಿತಿ ವೀರ ಹನುಮಾನ, ಎಚ್.ಎಚ್.ಮ್ಯಾದಾರ್, ಶಿಕ್ಷಣ ಇಲಾಖೆಯ ಈರಣ್ಣ ಕೋಸಗಿ, ಕೃಷ್ಣಮೂರ್ತಿ, ಶ್ರೀನಿವಾಸ್, ಲಿಂಗಪ್ಪ, ಪ್ರದೀಪ್ ಕುಮಾರ ಪಾಲ್ಗೊಂಡು ಮಕ್ಕಳಿಗೆ ವಿವಿಧ ತರಬೇತಿಗಳನ್ನು ನೀಡಿದರು.
8ನೇ ತರಗತಿ ವಿದ್ಯಾರ್ಥಿ ವೀರೇಂದ್ರ ಹಾಗೂ 9ನೇ ತರಗತಿ ವಿದ್ಯಾರ್ಥಿ ಕೀರ್ತನಾ ಎಂ.ಪತ್ತಾರ ಶಿಬಿರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ, ಶಿಬಿರದಲ್ಲಿ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದಿದ್ದು, ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಶಿಬಿರದಲ್ಲಿ ಪಾಲ್ಗೊಂಡಿರುವುದು ಬಹಳ ಸಂತೋಷ ಉಂಟುಮಾಡಿದೆ ಎಂದರು.
ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಮುಂದಿನ ಮೂರು ದಿನಗಳವರೆಗೆಗ್ರಾಮೀಣ ಭಾಗದ ಆಯ್ದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಲಾಗುವುದು. ಅಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಸೌರಮಂಡಲದ ಮಾಹಿತಿ ಹಾಗೂ ನೀರಿನ ಸಂರಕ್ಷಣೆಯ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಸಮಿತಿಯ ಸಂಚಾಲಕ ಹಫೀಜ್‌ವುಲ್ಲಾ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.