ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಮನೆಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಇಂದು

ಕೋವಿಡ್‌ ಮಹಾಮಾರಿ ವಿಘ್ನ ವಿನಾಶಕ್ಕಾಗಿ ಗೌರಿಗಣೇಶನಿಗೆ ಮೊರೆ
Last Updated 21 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಕೊರೊನಾ ಸೋಂಕು ಹರಡಲು ಆಸ್ಪದವಾಗದಂತೆ ಗಣೇಶೋತ್ಸವ ಆಚರಿಸುವುದಕ್ಕೆ ಸರ್ಕಾರವು ಹಲವು ಕಟ್ಟಳೆಗಳನ್ನು ಹಾಕಿರುವುದರಿಂದ ಈ ವರ್ಷ ಮನೆಗಳಲ್ಲಿಯೇ ಚತುರ್ಥಿ ದಿನದಂದು ಶನಿವಾರ ಗಣೇಶನನ್ನು ಪ್ರತಿಷ್ಠಾಪಿಸುವುದಕ್ಕೆ ಜನರು ಸಜ್ಜಾಗಿದ್ದಾರೆ.

ಮುನ್ನಾ ದಿನವಾದ ಶುಕ್ರವಾರ ಮಾರುಕಟ್ಟೆಯಲ್ಲಿ ಹಣ್ಣು, ಹೂವು, ಗರಿಕೆ–ಮಾವು, ಬಾಳೆ ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸುವುದಕ್ಕೆ ಜನರು ಬಂದಿದ್ದರು. ಆದರೆ, ಪ್ರತಿ ವರ್ಷದಂತೆ ಜನದಟ್ಟಣೆ ಇರಲಿಲ್ಲ. ಸರಾಫ್‌ ಬಜಾರ್‌ ರಸ್ತೆ, ಭಂಗಿಕುಂಟಾ ರಸ್ತೆ, ಬಟ್ಟೆ ಬಜಾರ್‌, ಮಹಾವೀರ ವೃತ್ತ, ಗಾಂಧಿಚೌಕ್‌, ಶೆಟ್ಟಿಬೌಡಿ, ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ವೃತ್ತ, ಬಸವನಭಾವಿ ವೃತ್ತ, ಗಂಜ್‌ ರಸ್ತೆ, ತೀನ್‌ ಕಂದಿಲ್‌ನಲ್ಲಿ ಜನರು ವಿವಿಧ ಸಾಮಗ್ರಿಗಳ ಖರೀದಿಗಾಗಿ ಬಂದಿದ್ದರು. ಆದರೆ, ಜನರಲ್ಲಿ ಸಂಭ್ರಮ, ಸಡಗರ ಇರಲಿಲ್ಲ.

ಲಾಕ್‌ಡೌನ್‌ ತೆಗೆದು ಹಾಕಿದ್ದರೂ ಜನಜೀವನ ಇನ್ನೂ ಮುದುರಿಕೊಂಡಿದೆ. ಅನಗತ್ಯವಾಗಿ ಮನೆಗಳಿಂದ ಹೊರಬರಲು ಸ್ವಯಂ ನಿಯಂತ್ರಣ ಹಾಕಿಕೊಂಡತಿದೆ. ಸರ್ಕಾರಿ ಬಸ್‌ಗಳು ಆರಂಭವಾದರೂ ನಿರೀಕ್ಷಿತ ಸಂಖ್ಯೆಯಲ್ಲಿ ಪ್ರಯಾಣಿಕರಿಲ್ಲ. ಅದೇ ರೀತಿ ಗಣೇಶೋತ್ಸವ ಮಾಡುವುದಕ್ಕಾಗಿ ಮನೆಗಳಿಂದ ಕುಟುಂಬ ಸಮೇತ ಮಾರುಕಟ್ಟೆಗೆ ಬರಲು ಹಿಂದೇಟು ಹಾಕಿದ್ದಾರೆ. ಈ ವರ್ಷ ಗಣೇಶನ ಹಬ್ಬವು ಸಂಭ್ರಮಕ್ಕಿಂತಲೂ ಸಂಪ್ರದಾಯ ಪಾಲನೆಗಾಗಿ ನಡೆಯುತ್ತಿದೆ.

ವಿವಿಧ ಬಡಾವಣೆಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ, ವೃತ್ತಗಳಲ್ಲಿ, ದೇವಸ್ಥಾನಗಳಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಪ್ರತಿವರ್ಷ ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆ ಮಾಡಿರುವುದು ಗಮನ ಸೆಳೆಯುತ್ತಿದ್ದವು. ಈ ಸಲ ಕೋವಿಡ್‌ ಮಹಾಮಾರಿಯ ದುಷ್ಪರಿಣಾಮದಿಂದ ಅದ್ಧೂರಿ ಗಣೇಶೋತ್ಸವ ಮಾಡುತ್ತಿಲ್ಲ. ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿರುವ ವ್ಯಾಪಾರಿಗಳು ಬೃಹತ್‌ ಗಣೇಶನನ್ನು ಪ್ರತಿಷ್ಠಾಪಿಸುವ ಬದಲು ಸಣ್ಣ ಗಾತ್ರದ ಗಣೇಶನನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಮನೆಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಜಿಲ್ಲಾಡಳಿತ ಕೂಡಾ ದೊಡ್ಡ ಗಾತ್ರದ ವಿಗ್ರಹಗಳ ಪರಿಷ್ಠಾಪನೆಗೆ ಅವಕಾಶ ನೀಡುತ್ತಿಲ್ಲ.

ಪರಿಸರ ಗಣೇಶ: ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ವಿಗ್ರಹಗಳಿಂದ ಪರಿಸರಕ್ಕೆ ಹಾನಿ ಆಗುತ್ತದೆ ಎನ್ನುವುದು ಜನಜನಿತವಾಗಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಪರಿಸರಸ್ನೇಹಿ ಗಣೇಶ ವಿಗ್ರಹಗಳಿಗೆ ಭಾರಿ ಬೇಡಿಕೆ ಬಂದಿದೆ. ಈ ವರ್ಷವೂ ಸಣ್ಣ ಗಾತ್ರದ ಗಣೇಶ ವಿಗ್ರಹಗಳಿಗೆ ಬೇಡಿಕೆ ನಿರ್ಮಾಣವಾಗಿದೆ.

ಮಣ್ಣಿನಿಂದ ಗಣೇಶ ವಿಗ್ರಹಗಳ ತಯಾರಿಕೆ ಸಾಮಾನ್ಯ. ಆದರೆ, ರಾಯಚೂರಿನ ರಘೋತ್ತಮ ದಾಸ್‌ ಗೋಪಿಚಂದನದಿಂದ ನೂರಾರು ಗಣೇಶ ವಿಗ್ರಹಗಳನ್ನು ನಿರ್ಮಿಸಿ ಗಮನ ಸೆಳೆಯುತ್ತಿದ್ದಾರೆ. ಗೋಪಿಚಂದನ ಮೂರ್ತಿಗಳಿಗೆ ಎಲ್ಲ ಕಡೆಯಲ್ಲೂ ಭಾರಿ ಬೇಡಿಕೆ ಇದೆ. ಉತ್ತರ ಪ್ರದೇಶದಿಂದ ಗೋಪಿಚಂದನ ವಿಶೇಷ ಮಣ್ಣನ್ನು ತಂದುಕೊಂಡು ಒಂದು ತಿಂಗಳಿಂದ ಗಣೇಶ ವಿಗ್ರಹಗಳನ್ನು ಸಿದ್ಧಪಡಿಸುತ್ತಾ ಬಂದಿದ್ದಾರೆ. ಕುಟುಂಬದ ಸದಸ್ಯರೆಲ್ಲ ವಿಗ್ರಹಗಳನ್ನು ಸಿದ್ಧಪಡಿಸಿದ್ದಾರೆ.

‘ಗ್ರೀನ್‌ ರಾಯಚೂರು’ ಸೇರಿದಂತೆ ಪರಿಸರಪರ ಅನೇಕ ಸಂಘಟನೆಗಳು ಕೂಡಾ ಪರಿಸರಸ್ನೇಹಿ ಗಣೇಶನನ್ನು ಸಿದ್ಧಪಡಿಸಿ ಉಚಿತವಾಗಿ ವಿತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT