ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ₹ 4 ಕೋಟಿ ವೆಚ್ಚದ ಕಾಮಗಾರಿಗಳಿಗೆ ಒಪ್ಪಿಗೆ

ಸಿಂಧನೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಮ್ಮತದ ತೀರ್ಮಾನ
Last Updated 31 ಡಿಸೆಂಬರ್ 2021, 7:24 IST
ಅಕ್ಷರ ಗಾತ್ರ

ಸಿಂಧನೂರು: 15ನೇಹಣಕಾಸು ಯೋಜನೆಯಡಿ ₹ 4ಕೋಟಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳುವುದು, ಜೊತೆಗೆ ಎಸ್‍ಎಫ್‍ಸಿಯ ₹ 95.72 ಲಕ್ಷ ಬಳಕೆ ಮಾಡಲು ಗುರುವಾರ ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.

15ನೇ ಹಣಕಾಸು ಯೋಜನೆಯಡಿ ವಾರ್ಡ್ ನಂ.17, 25 ರಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಇತರೆ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆಗೆ ಟ್ರ್ಯಾಕ್ಟರ್ ಖರೀದಿ, ಟ್ರ್ಯಾಕ್ಟರ್ ಟ್ರೈಲರ್, ಟಿಪ್ಪರ್ ಖರೀದಿ, ಇಂದಿರಾನಗರ, ಕನಕನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಾರ್ಡ್ 24ರ ಕೋಟೆ ಏರಿಯಾದಲ್ಲಿನ ಸರ್ಕಾರಿ ಶಾಲೆಯ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ನಿರ್ಮಾಣ ಸೇರಿದಂತೆ ಪೈಪ್‍ಲೈನ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಭೆಯಲ್ಲಿ ಮಂಡಿಸಿ ಟೆಂಡರ್ ಕರೆಯಲು ಎಲ್ಲ ಸದಸ್ಯರು ಸರ್ವಾನುಮತದಿಂದ ಅನುಮೋದನೆ ನೀಡಿದರು.

ನಗರಸಭೆ ವ್ಯಾಪ್ತಿಯ ಸರ್ವೆ ನಂ.136 ರಲ್ಲಿ ಬ್ರಾಹ್ಮಣ ಸಮುದಾಯದ ಸಾರ್ವಜನಿಕ ಸ್ಮಶಾನ ಮುಂದುವರೆದ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.6 ರಲ್ಲಿ ರಾಯಚೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸಾರ್ವಜನಿಕ ಶೌಚಾಲಯ ದುರಸ್ತಿ, ವಾರ್ಡ್ ನಂ.23, 31 ರಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ಆರ್‍ಓ ಪ್ಲಾಂಟ್, ಸಿಸಿ ರಸ್ತೆ, ಒಳ ರಸ್ತೆಗಳ ದುರಸ್ತಿ ಸೇರಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ₹ 3.87 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ನಿರ್ಧರಿಸಲಾಯಿತು.

ನಗರದ ಪ್ರವಾಸಿ ಮಂದಿರ ಪಕ್ಕದಲ್ಲಿ ನಗರೋತ್ಥಾನ ಹಂತ-3ರ ಅನುದಾನದಲ್ಲಿ ಈಗಾಗಲೇ ನಿರ್ಮಾಣಗೊಂಡ ವಾಣಿಜ್ಯ ಮಳಿಗೆಗಳ ಕಟ್ಟಡದ ಮೇಲೆ ನೂತನ ಮಳಿಗೆಗಳನ್ನು ನಿರ್ಮಾಣ ಮಾಡಲು ಸದಸ್ಯರ ಒಪ್ಪಿಗೆ ಪಡೆದುಕೊಳ್ಳಲಾಯಿತು.

ನಗರದ ಹಿರೇಹಳ್ಳದ ಪಕ್ಕದಲ್ಲಿ ಹರಿದು ಹೋಗುತ್ತಿರುವ ಚರಂಡಿಗೆ ಅಡ್ಡಲಾಗಿ ಬೂದು ನೀರು ಸಂಸ್ಕರಣೆಯ ಮತ್ತು ಮರುಬಳಕೆಯ ಮಾಡುವ ಅಭಿವೃದ್ಧಿ ಕಾಮಗಾರಿಯನ್ನು ₹ 8.14 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಯಿತು.

ನಗರದ ಕುಡಿಯುವ ನೀರಿನ ದೊಡ್ಡ ಕೆರೆ ಬಂಡ್ ಕುಸಿದು ಹೋಗಿದ್ದು ದುರಸ್ತಿಗಾಗಿ ಜಿಲ್ಲಾಧಿಕಾರಿಯಿಂದ ₹ 98.50 ಲಕ್ಷ ಕ್ರಿಯಾಯೋಜನೆಗೆ ಅನುಮೋದನೆ ಪಡೆದಿದ್ದು ಆಡಳಿತಾತ್ಮಕ ಅನುಮೋದನೆಗೆ ಮಂಡಿಸಲಾಯಿತು.

ಆಗ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ ‘ಈಗ ಲಭ್ಯವಿರುವ ಅನುದಾನದಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳುವುದು, ಬಳಕೆಯಾಗದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ, ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಬೇಕಾಗಿರುವ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು. ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾದೇವಿ ಸುರೇಶ ಜಾದವ್ ಇದ್ದರು.

ಅಕ್ರಮ ಬಡಾವಣೆಗೆ ಅನುಮೋದನೆ: ಸದಸ್ಯರ ಆರೋಪ

ಸರ್ಕಾರದ ನಿಯಮದಂತೆ ಲೇಔಟ್‍ಗಳನ್ನು ಅಭಿವೃದ್ಧಿಪಡಿಸದೆ ಇರುವ ಜೋಳದರಾಶಿ ಲೇಔಟ್‍ನ ಮಾಲೀಕರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರ ಗಮನಕ್ಕೆ ಇಲ್ಲದೆ, ಅನುಮೋದನೆ ಪಡೆದಿರುವ ಬಗ್ಗೆ ನಗರಸಭೆ ನಾಮನಿರ್ದೇಶನ ಸದಸ್ಯ ಮಲ್ಲಿಕಾರ್ಜುನ ಜೀನೂರು ಪ್ರಶ್ನಿಸಿದರು.

ಆಗ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಈ ಲೇಔಟ್ ಅರ್ಜಿ 2019 ರಲ್ಲಿ ಬಂದಿದ್ದು 2020 ಸರ್ಕಾರ ನಿಯಮ ಜಾರಿಗೊಳಿಸಿದ್ದರಿಂದ ಅರ್ಜಿದಾರರು 2019 ಪ್ರಕಾರ ಅನುಮತಿ ಪಡೆದಿದ್ದಾರೆ ಎಂದು ಪ್ರತಿಕ್ರಿಯಿಸಿದರು.

‘ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ’

ನಗರದ ವಿವಿಧ ವಾರ್ಡ್‍ಗಳಲ್ಲಿ ಮನೆಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ನಗರಸಭೆ ವತಿಯಿಂದ ವಾರ್ಡ್‍ಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಈಗಾಗಲೇ ಪೊಲೀಸ್ ಇಲಾಖೆಯವರ ಮನವಿಯಂತೆ ಅವಶ್ಯಕವಿರುವ ಸುಮಾರು 80 ಸಿಸಿ ಟಿವಿ ಕ್ಯಾಮೆರಾಗಳನ್ನು ವಾರ್ಡ್‍ಗಳಲ್ಲಿ ಹಾಕಬೇಕು. ಇದರಿಂದ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ ಎಂದು ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ ಸಭೆಯ ಗಮನ ಸೆಳೆದರು.

ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಪ್ರತಿಕ್ರಿಯಿಸಿ, ‘ಶೀಘ್ರದಲ್ಲಿಯೇ ಎಲ್ಲ ವಾರ್ಡ್‍ಗಳಲ್ಲಿ ಸಿಸಿ ಕ್ಯಾಮೆರಾ ಹಾಕಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT