ರಾಯಚೂರು: ‘ಅಂಗವಿಕಲರಿಗೆ ಜಿಲ್ಲಾ ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ಕಲ್ಪಿಸಬೇಕು’ ಎಂದು ವಿಕಲಚೇತನರ ರಾಜಕೀಯ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಶಿವಶಂಕರ ಬಳೆ ಒತ್ತಾಯಿಸಿದರು.
‘2011ರ ಜನಗಣತಿಯ ಪ್ರಕಾರ ದೇಶದಲ್ಲಿ ಶೇಕಡ 3ರಷ್ಟು ಅಂಗವಿಕಲರ ಜನಸಂಖ್ಯೆ ಇದೆ. ಇದರ ಆಧಾರದ ಮೇಲೆ ಅಂಗವಿಕಲರಿಗೆ ಮೀಸಲಾತಿ ನೀಡಬೇಕು. ಅಂಗವಿಕಲರು ಮತಬ್ಯಾಂಕ್ ಆಗಿ ಪರಿವರ್ತನೆ ಆಗುತ್ತಿಲ್ಲ. ಹೀಗಾಗಿ ಸೌಲಭ್ಯ ಪಡೆಯಲು ಆಗುತ್ತಿಲ್ಲ’ ಎಂದು ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
‘ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ಎಲ್ಲ ರಾಜಕೀಯ ಪಕ್ಷಗಳು ಅಂಗವಿಕಲರಿಗೆ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯ ಸರ್ಕಾರದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೀಸಲಾತಿ ಕಲ್ಪಿಸುವ ಅವಕಾಶ ಇದ್ದು, ಈ ಕುರಿತು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಶಿವಗ್ಯಾನಿ, ಭೀಮಸೇನ, ಡಿ.ಶಂಕರಗೌಡ ಉಪಸ್ಥಿತರಿದ್ದರು.