ಮಂಗಳವಾರ, ಫೆಬ್ರವರಿ 25, 2020
19 °C
7ನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ

ರಾಯಚೂರು: ಗಣತಿದಾರರಿಗೆ ಸಮರ್ಪಕ ಮಾಹಿತಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಜ್ಯ ಸರ್ಕಾರದ ಆದೇಶದ ಮೇರೆಗೆ 7ನೇ ಆರ್ಥಿಕ ಗಣತಿಯನ್ನು ಪ್ರಾರಂಭಿಸಲಾಗಿದ್ದು, ಗಣತಿಯಲ್ಲಿ ಮನೆ ಹಾಗೂ ವಾಣಿಜ್ಯ ಕಟ್ಟಡ, ಸಂಕೀರ್ಣಗಳಲ್ಲಿ ನಡೆಯುತ್ತಿರುವ ವ್ಯಾಪಾರ ವಹಿವಾಟ ಮತ್ತು ಉದ್ಯಮದ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ ಸಾರ್ವಜನಕರಲ್ಲಿ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ 7ನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮನೆಗಳಲ್ಲಿ ನಡೆಯುವ ಹೈನುಗಾರಿಕೆ, ಹೊಲಿಗೆ, ಅಂಗಡಿ ಸೇರಿದಂತೆ ಸಣ್ಣ ಪುಟ್ಟ ವ್ಯಾಪಾರ ಗಣತಿಯೊಂದಿಗೆ ವಾಣಿಜ್ಯ ಕಟ್ಟಡಗಳಲ್ಲಿನ ಉದ್ಯಮಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ. ಇಲಾಖೆಗಳ ಮೂಲಕ ನಿರ್ಧಿಷ್ಠ ಉದ್ಯಮಗಳಿಗೆ ನೀಡಬೇಕಾದ ಸೌಲಭ್ಯ, ಸಹಕಾರ ಬಗ್ಗೆ ಯೋಜನೆ ರೂಪಿಸಲಾಗುತ್ತದೆ. ಸಾರ್ವಜನಿಕರು ಉದ್ಯಮಗಳ ಮಾಹಿತಿಯನ್ನು ನಿಖರವಾಗಿ ನೀಡಬೇಕು ಎಂದು ತಿಳಿಸಿದರು.

ಗಣತಿಯನ್ನು ಮೂಬೈಲ್ ಆಪ್ ಮೂಲಕ ನಡೆಸಲಾಗುವುದು ಹಾಗೂ ಎಲ್ಲ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ಎಲ್ಲ ತಾಲ್ಲೂಕುಗಳ ಸಿಎಸ್‌ಸಿ ಕೇಂದ್ರಗಳ ಮಾಹಿತಿಯನ್ನು ತಹಶೀಲ್ದಾರ್‌ ಅವರಿಗೆ ನೀಡಬೇಕು. ಈಗಾಗಲೇ 6ನೇ ಆರ್ಥಿಕ ಗಣತಿಗಳನ್ನು ಮಾಡಲಾಗಿದೆ. 1977ರಲ್ಲಿ ಪ್ರಥಮ ಗಣತಿ, 1980ರಲ್ಲಿ ಎರಡನೇ ಗಣತಿ, 1990ರಲ್ಲಿ ಮೂರನೇ ಗಣತಿ, 1998ರಲ್ಲಿ 4ನೇ ಗಣತಿ, 2005ರಲ್ಲಿ 5ನೇ ಗಣತಿ ಮತ್ತು 2013ರಲ್ಲಿ 6ನೇ ಗಣತಿ ಮಾಡಲಾಗಿದೆ. ಆರ್ಥಿಕ ಗಣತಿಯ ಅವಧಿ ಮೂರು ತಿಂಗಳದಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ 2019 ನವೆಂಬರ್ 22ರಂದು ಪ್ರಾರಂಭಿಸಲಾಗಿದೆ ಎಂದರು.

ಆರ್ಥಿಕ ಗಣತಿಯನ್ನು ನಿಷ್ಪಕ್ಷಪಾತವಾಗಿ ನಡೆಸಲು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಜಿಲ್ಲಾಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿದ್ದು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ತಹಶೀಲ್ದಾರರು, ನಗರ ಪ್ರದೇಶಗಳಲ್ಲಿ ಪೌರಾಯುಕ್ತರು ಮತ್ತು ಮುಖ್ಯಾಧಿಕಾರಿಗಳು ಇದರ ಮೇಲ್ವಿಚಾರಕರು ಆಗಿರುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)