ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು | ಉತ್ತಮ ಮಳೆ ಮುನ್ಸೂಚನೆ: ಮುಂದಿನ ವಾರ ಬಿತ್ತನೆ

ತಾಲ್ಲೂಕು ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು: ಹೊಲ ಹದಗೊಳಿಸುತ್ತಿರುವ ರೈತರು
Published 30 ಮೇ 2024, 4:55 IST
Last Updated 30 ಮೇ 2024, 4:55 IST
ಅಕ್ಷರ ಗಾತ್ರ

ರಾಯಚೂರು: ಕಲ್ಯಾಣ ಕರ್ನಾಟಕದ ರೈತರು ಕಳೆದ ವರ್ಷ ಬರದಿಂದ ಕಂಗೆಟ್ಟು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಹವಾಮಾನ ಇಲಾಖೆಯು ಈ ವರ್ಷ ಸಮೃದ್ಧ ಮುಂಗಾರಿನ ಮುನ್ಸೂಚನೆ ನೀಡಿರುವ ಪ್ರಯುಕ್ತ ರೈತರು ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ.

ಕಳೆದ ವರ್ಷ ಹವಾಮಾನ ಇಲಾಖೆಯು ಮಳೆ ಕೊರತೆಯಾಗುವ ಮುನ್ಸೂಚನೆ ನೀಡಿತ್ತು. ಆದರೆ, ಜೂನ್‌ನಲ್ಲಿ ಮಳೆಯೇ ಬಂದಿರಲಿಲ್ಲ. ಮಳೆ ನಂಬಿ ಬಿತ್ತನೆ ಮಾಡಿದವರು ಬಿಸಿಲಿನ ಝಳಕ್ಕೆ ಬೀಜ ಮೊಳಕೆ ಒಡೆಯುವ ಮೊದಲೇ ನೆಲದಲ್ಲೇ ಒಣಗಿದ್ದವು. ರೈತರು ನಷ್ಟ ಅನುಭವಿಸಿದ್ದರು. ಮಳೆಗಾಲವೂ ಬೇಸಿಗೆಯಂತೇ ಭಾಸವಾಗಿತ್ತು. ಈ ವರ್ಷ ಮಳೆ ಕೊರತೆ ಇಲ್ಲ. ಆದರೆ, ಜೂನ್‌ ಎರಡನೇ ವಾರದಲ್ಲಿ ನಿಧಾನವಾಗಿ ಮಳೆ ಶುರುವಾಗುವುದರಿಂದ ಬಿತ್ತನೆಗೆ ಸಕಾಲ ಎಂದು ಕೃಷಿ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ರೈತರು ಒಂದು ಅಥವಾ ಎರಡು ಬೆಳೆಗಳನ್ನು ಬಿತ್ತುವ ಬದಲು ಕನಿಷ್ಠ 3ರಿಂದ 4 ಬೆಳೆಗಳನ್ನು ಆಯ್ಕೆ ಮಾಡಿಕೊಂಡು ಬಿತ್ತನೆ ಮಾಡಿಕೊಳ್ಳಬೇಕು ಎಂದು ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಪ್ರಸಕ್ತ ವರ್ಷ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವ ಕಾರಣ ತಗ್ಗು ಪ್ರದೇಶದ ಹೊಲಗಳಲ್ಲಿ ಅಥವಾ ನೀರು ಸರಾಗವಾಗಿ ಹರಿದು ಹೋಗದ ಪ್ರದೇಶಗಳಲ್ಲಿ ಹೆಚ್ಚಿನ ನೀರಿನ ಬೇಡಿಕೆ ಇರುವ ಬೆಳೆಗಳನ್ನು ಬಿತ್ತನೆ ಮಾಡಬೇಕು. ಭತ್ತ, ಕಬ್ಬು ಹಾಗೂ ಗೋವಿನ ಜೋಳ ಬಿತ್ತನೆ ಮಾಡುವುದು ಸೂಕ್ತ ಎಂದು ರೈತರಿಗೆ ಸಲಹೆ ನೀಡಿದ್ದಾರೆ.

ಅತಿಯಾದ ಮಣ್ಣಿನ ತೇವಾಂಶ ತಡೆದುಕೊಳ್ಳದ ಈರುಳ್ಳಿ, ಹೆಸರು, ಮೆಣಸಿನಕಾಯಿ, ತೊಗರಿ ಹಾಗೂ ತರಕಾರಿಯನ್ನು ಇಳಿಜಾರು ಜಮೀನುಗಳಲ್ಲಿ ಅಥವಾ ಸುಲಭವಾಗಿ ಬಸಿದು ಹೋಗುವ ಜಮೀನುಗಳಲ್ಲಿ ಬಿತ್ತನೆ ಮಾಡಬೇಕು ಎಂದು ಸೂಚಿಸಿದ್ದಾರೆ.

ಆಗಸ್ಟ್‌ನಿಂದ ಸೆಪ್ಟೆಂಬರ್‌ನಲ್ಲಿ ಹೆಚ್ಚುವರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಮಣ್ಣಿನ ತೇವಾಂಶ ತಡೆದುಕೊಳ್ಳಲು ಬಹುಬೇಗ ಬಿತ್ತನೆ ಮಾಡುವುದು ಆರ್ಥಿಕ ದೃಷ್ಟಿಯಿಂದ ಒಳ್ಳೆಯದು ಎಂದು ರೈತರಿಗೆ ಮುನ್ಸೂಚನೆ ನೀಡಿದ್ದಾರೆ.

‘ರೈತರು ಈಗಲೇ ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧವಾಗಿರಬೇಕು. ಜೂನ್‌ ಎರಡನೇ ವಾರದಲ್ಲಿ ಹೆಸರು, ಉದ್ದು ಹಾಗೂ ಸೋಯಾ ಅವರೆ ಬಿತ್ತನೆ ಮಾಡಬೇಕು. ಜುಲೈನಲ್ಲಿ ತೊಗರಿ, ಹತ್ತಿ ಬಿತ್ತನೆ ಮಾಡುವುದು ಒಳ್ಳೆಯದು’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಅಜಯಕುಮಾರ ತಿಳಿಸಿದ್ದಾರೆ.

‘ಹೆಸರು, ಉದ್ದು ಹಾಗೂ ಸೋಯಾ ಬಿತ್ತನೆ ಮಾಡಲು ತಡ ಮಾಡಿದರೆ ಮಳೆಗೆ ಹಾಳಾಗುವ ಸಾಧ್ಯತೆ ಇರುತ್ತದೆ. ಆರಂಭಿಕ ಹಂತದಲ್ಲಿ ಬಿತ್ತನೆ ಮಾಡಿದರೆ ಎಷ್ಟೇ ಮಳೆ ಬಂದರೂ ಬೆಳೆಗೆ ತಡೆದುಕೊಳ್ಳುವ ಶಕ್ತಿ ಇರುತ್ತದೆ’ ಎಂದು ಹೇಳಿದ್ದಾರೆ.

ಬಿತ್ತನೆ ಹಂತದಲ್ಲಿ ಬೆಳೆಯ ಶಿಫಾರಸಿನ ಕನಿಷ್ಠ ಶೇಕಡ 50ರಷ್ಟು ಹಾಗೂ ಪೂರ್ತಿ ರಂಜಕ, ಪೊಟ್ಯಾಷ್ ಗೊಬ್ಬರಗಳನ್ನು ಕೊಡಬೇಕು. ಇದರಿಂದ ಬೆಳೆ ಸಮೃದ್ಧವಾಗಿ ಬೆಳೆಯಲಿದೆ ಎಂದು ಸಲಹೆ ನೀಡಿದ್ದಾರೆ.

ವಾಡಿಕೆಗಿಂತ ಹೆಚ್ಚು ಮಳೆ ಸಾಧ್ಯತೆ

ಹವಾಮಾನ ಇಲಾಖೆ ಮೇ 27ರಂದು ಧೀರ್ಘಾವಧಿ ಹವಾಮಾನ ಮನ್ಸೂಚನೆ ಬಿಡುಗಡೆ ಮಾಡಿದೆ. ಮುಂಗಾರು ಹಂಗಾಮಿನಲ್ಲಿ ನಾಲ್ಕು ತಿಂಗಳು ಮಳೆ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ. ಸರಾಸರಿ ಶೇ 106 ದಾಟಲಿದೆ ಎಂದು ಅಂದಾಜಿಸಿದೆ. ಜೂನ್‌ನಲ್ಲೂ ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಅಧಿಕ ಇರಲಿದೆ. ಕನಿಷ್ಠ ಹಾಗೂ ಗರಿಷ್ಠ ತಾಪಮಾನ ದಾಖಲಾಗಲಿದೆ. ಶೇ 16ರಷ್ಟು ಸಾಮಾನ್ಯ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಇದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ಶಾಂತಪ್ಪ ಧುತ್ತರಗಾವಿ ತಿಳಿಸಿದ್ದಾರೆ.

ಮುಂದುವರಿದ ಗರಿಷ್ಠ ಉಷ್ಣಾಂಶ

ರಾಯಚೂರು ದೇವದುರ್ಗ ಸಿರವಾರ ಹಾಗೂ ಮಾನ್ವಿ ತಾಲ್ಲೂಕಿನಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ಮುಂದವರಿದಿದೆ. ಮೇ 30ರಿಂದ ಮತ್ತೆ ಗರಿಷ್ಠ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್‌ಗೆ ಏರಲಿದೆ. ಧಗೆ ಇನ್ನಷ್ಟು ಹೆಚ್ಚಾಗಲಿದೆ. ಜೂನ್‌ ಎರಡನೇ ವಾರ ಮಳೆ ಶುರುವಾದರೆ ಧಗೆ ಕಡಿಮೆಯಾಗುವ ಸಾಧ್ಯತೆ ಇದೆ.

ರೈತರಿಗೆ 385 ಕ್ವಿಂಟಲ್ ತೊಗರಿ ಬೀಜ ವಿತರಣೆ

2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 37 ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ 1092 ಕ್ವಿಂಟಲ್, ಸಜ್ಜೆ 52.14 ಕ್ವಿಂಟಲ್, ಭತ್ತ 606 ಕ್ವಿಂಟಲ್, ಹೆಸರು 15.00 ಕ್ವಿಂಟಲ್, ಮೆಕ್ಕೆಜೋಳ 21 ಕ್ವಿಂಟಲ್ ಹಾಗೂ ಸೂರ್ಯಕಾಂತಿ 38.70 ಕ್ವಿಂಟಲ್ ಸೇರಿ ಒಟ್ಟು 1821.44 ಕ್ವಿಂಟಲ್‍ಗಳಷ್ಟು ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ 385.55 ಕ್ವಿಂಟಲ್ ತೊಗರಿ ಬೀಜ ವಿತರಣೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ತಿಳಿಸಿದ್ದಾರೆ.

ರಾಯಚೂರು ತಾಲ್ಲೂಕಿನಲ್ಲಿ ತೊಗರಿ 110.60 ಕ್ವಿಂಟಲ್, ಭತ್ತ 136.00 ಕ್ವಿಂಟಲ್ ಹಾಗೂ ಹೆಸರು 1.20 ಕ್ವಿಂಟಲ್ ಸೇರಿ ಒಟ್ಟು 247.80 ಕ್ವಿಂಟಲ್‍ಗಳಷ್ಟು ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಭತ್ತ, ತೊಗರಿ ಮತ್ತು ಹೆಸರು ಸೇರಿ 16.65 ಕ್ವಿಂಟಲ್‌ನಷ್ಟು ವಿತರಣೆಯಾಗಿದೆ. ಮಾನ್ವಿ ತಾಲ್ಲೂಕಿನಲ್ಲಿ ತೊಗರಿ 58.80 ಕ್ವಿಂಟಲ್‌, ಭತ್ತ 60.0 ಕ್ವಿಂಟಲ್ ಹಾಗೂ ಹೆಸರು 1.80 ಕ್ವಿಂಟಲ್ ಸೇರಿ ಒಟ್ಟು 120.60 ಕ್ವಿಂಟಲ್‍ಗಳಷ್ಟು ಬಿತ್ತನೆ ಬೀಜ ಸಂಗ್ರಹಿಸಿಡಲಾಗಿದೆ.

ದೇವದುರ್ಗ ತಾಲ್ಲೂಕಿನಲ್ಲಿ ತೊಗರಿ 120.20 ಕ್ವಿಂಟಲ್, ಭತ್ತ-60 ಕ್ವಿಂಟಲ್ ಹಾಗೂ ಹೆಸರು 1.80 ಕ್ವಿಂಟಲ್ ಸೇರಿ ಒಟ್ಟು 191 ಕ್ವಿಂಟಲ್‍ಗಳಷ್ಟು ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ತೊಗರಿ 18.85 ಕ್ವಿಂಟಲ್‌ನಷ್ಟು ವಿತರಣೆಯಾಗಿರುತ್ತದೆ. ಸಿರವಾರ ತಾಲ್ಲೂಕಿನಲ್ಲಿ ತೊಗರಿ 174.6 ಕ್ವಿಂಟಲ್, ಭತ್ತ-80.0 ಕ್ವಿಂಟಲ್ ಹಾಗೂ ಹೆಸರು 1.80 ಕ್ವಿಂಟಲ್ ಸೇರಿ ಒಟ್ಟು 256.40 ಕ್ವಿಂಟಲ್‍ಗಳಷ್ಟು ಬಿತ್ತನೆ ಬೀಜ ಸಂಗ್ರಹ ಮಾಡಿಕೊಳ್ಳಲಾಗಿದೆ. ತೊಗರಿ 113.35 ಕ್ವಿಂಟಲ್‌ನಷ್ಟು ವಿತರಿಸಲಾಗಿದೆ.

ಲಿಂಗಸುಗೂರು ತಾಲ್ಲೂಕಿನಲ್ಲಿ ತೊಗರಿ 214.40 ಕ್ವಿಂಟಲ್, ಸಜ್ಜೆ 8.40 ಕ್ವಿಂಟಲ್, ಸೂರ್ಯಕಾಂತಿ 4.20 ಕ್ವಿಂಟಲ್ ಹಾಗೂ ಹೆಸರು 0.60 ಕ್ವಿಂಟಲ್ ಸೇರಿ ಒಟ್ಟು 227.84 ಕ್ವಿಂಟಲ್‍ಗಳಷ್ಟು ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ತೊಗರಿ 45.30 ಕ್ವಿಂಟಲ್ ವಿತರಿಸಲಾಗಿದೆ. ಮಸ್ಕಿ ತಾಲ್ಲೂಕಿನಲ್ಲಿ ತೊಗರಿ 110.80 ಕ್ವಿಂಟಲ್, ಭತ್ತ 85 ಕ್ವಿಂಟಲ್, ಸಜ್ಜೆ 20.55, ಸೂರ್ಯಕಾಂತಿ 15.00, ಮೆಕ್ಕೆಜೋಳ 4 ಕ್ವಿಂಟಲ್ ಹಾಗೂ ಹೆಸರು 3.60 ಕ್ವಿಂಟಲ್ ಸೇರಿ ಒಟ್ಟು 438.95 ಕ್ವಿಂಟಲ್‍ಗಳಷ್ಟು ಬಿತ್ತನೆ ಬೀಜ ದಾಸ್ತಾನು ಮಾಡಲಾಗಿರುತ್ತದೆ. ತೊಗರಿ 143 ಕ್ವಿಂಟಲ್‌ ವಿತರಣೆಯಾಗಿದೆ.

ಸಿಂಧನೂರು ತಾಲ್ಲೂಕಿನಲ್ಲಿ ತೊಗರಿ 93.60 ಕ್ವಿಂಟಲ್, ಭತ್ ತ185 ಕ್ವಿಂಟಲ್, ಸಜ್ಜೆ 22.95, ಸೂರ್ಯಕಾಂತಿ 19.50, ಮೆಕ್ಕೆಜೋಳ 13.60 ಕ್ವಿಂಟಲ್ ಹಾಗೂ ಹೆಸರು 4.2 ಕ್ವಿಂಟಲ್ ಸೇರಿ ಒಟ್ಟು 338.85 ಕ್ವಿಂಟಲ್‍ಗಳಷ್ಟು ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಭತ್ತ, ತೊಗರಿ, ಸಜ್ಜೆ, ಸೂರ್ಯಕಾಂತಿ ಮತ್ತು ಹೆಸರು ಸೇರಿ 48.40 ಕ್ವಿಂಟಲ್ ವಿತರಣೆಯಾಗಿದೆ.

2024-25ನೇ ಸಾಲಿನಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ರಾಯಚೂರು ಹಾಗೂ ಸಹಕಾರ ಸಂಘಗಳಲ್ಲಿ 10673 ಮೆಟ್ರಿಕ್ ಟನ್ ಹಾಗೂ ಖಾಸಗಿ ಮಾರಾಟಗಾರರಲ್ಲಿ 95215.69 ಮೆಟ್ರಿಕ್ ಟನ್ ಸೇರಿ ಒಟ್ಟು 105888.69 ಮೆಟ್ರಿಕ್ ಟನ್‍ ದಾಸ್ತಾನು ಲಭ್ಯವಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT