ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವದುರ್ಗ: ಸರ್ಕಾರಿ ಬಾಲಕಿಯರ ಕಾಲೇಜಿಗಿಲ್ಲ ಮೂಲಸೌಕರ್ಯ

Published 17 ಜೂನ್ 2024, 6:02 IST
Last Updated 17 ಜೂನ್ 2024, 6:02 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಹೊಂದುವ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೇ ವಿದ್ಯಾರ್ಥಿನಿಯರು ಪರದಾಡುತ್ತಿದ್ದಾರೆ.

ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಶುದ್ಧ ಕುಡಿಯುವ ನೀರು ವ್ಯವಸ್ಥೆ ಇಲ್ಲ. ಕಲಾ ವಿಭಾಗದಲ್ಲಿ ಕನ್ನಡ ಮತ್ತು ಇತಿಹಾಸ ಮತ್ತು ವಾಣಿಜ್ಯ ವಿಭಾಗದಲ್ಲಿ ಒಬ್ಬ ಉಪನ್ಯಾಸಕ ಇದ್ದು ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಇಂಗ್ಲಿಷ್, ಸಮಾಜಶಾಸ್ತ್ರ ಹುದ್ದೆ ಖಾಲಿ ಇದ್ದು ಅಥಿತಿ ಉಪನ್ಯಾಸಕರೇ ಆಸರೆಯಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಫಲಿತಾಂಶದಲ್ಲಿ ಮತ್ತು ದಾಖಲಾತಿ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಸೌಕರ್ಯ ಮತ್ತು ಉಪನ್ಯಾಸಕರ ಕೊರತೆಯಿಂದ 5 ವರ್ಷದ ಹಿಂದೆ ವಿಜ್ಞಾನ ವಿಭಾಗ ಮುಚ್ಚಿದ್ದು ಪ್ರಯೋಗಾಲಯದ ವಸ್ತುಗಳು ತುಕ್ಕು ಹಿಡಿದಿವೆ. ವಾಣಿಜ್ಯ ವಿಭಾಗವು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಲೇಜಿನಲ್ಲಿ ಪ್ರತಿ ವರ್ಷ 350ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದಾಖಲಾತಿ ಹೊಂದುತ್ತಾರೆ. ಪ್ರಸಕ್ತ ಸಾಲಿನಲ್ಲಿ ಪ್ರಥಮ ಪಿಯುಗೆ 110 ಮತ್ತು ದ್ವಿತೀಯ ಪಿಯುಸಿಗೆ 115 ಒಟ್ಟು 225 ವಿದ್ಯಾರ್ಥಿನಿಯರು ದಾಖಲಾಗಿದ್ದಾರೆ. ಈ ಸಂಖ್ಯೆ ಜೂನ್ ಮತ್ತು ಜುಲೈ ತಿಂಗಳಲ್ಲಿ ನಡೆಯಲಿರುವ ಪುನರಾವರ್ತಿತ ಪರೀಕ್ಷೆ ನಂತರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

225 ಮಕ್ಕಳಿಗೆ ಕೇವಲ ಒಂದು ಶೌಚಾಲಯ ಇದೆ. 3 ವರ್ಷದಿಂದ ನೀರಿನ ಕೊರತೆ ಇದೆ. ದುರ್ವಾಸನೆ ಬರುತ್ತದೆ ಎಂದು ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಪ್ರಸ್ತುತ ಶಾಲೆಯ ಹಿಂಭಾಗದ ಗೋಡೆಯೇ ಶೌಚಾಲಯವಾಗಿದೆ.

’ಮನೆಗಳ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಹಾಗಾಗಿ ನಾವು ಸರ್ಕಾರಿ ಕಾಲೇಜುಗಳಲ್ಲಿ ಓದಬೇಕಾದ ಅನಿವಾರ್ಯತೆ ಇದೆ. ಕಾಲೇಜಿನ ಪರಿಸ್ಥಿತಿ ಮನೆಯಲ್ಲಿ ಹೇಳಿದರೆ ನಮ್ಮನ್ನು ಶಿಕ್ಷಣದಿಂದಲೇ ವಂಚಿತರನ್ನಾಗಿ ಮಾಡಿ ಮದುವೆ ಮಾಡಿಸುತ್ತಾರೆ. ಖಾಸಗಿ ಕಾಲೇಜುಗಳಲ್ಲಿ ಓದಿಸುವ ಶಕ್ತಿ ನಮ್ಮ ಕುಟುಂಬಗಳಿಗೆ ಇಲ್ಲ’ ಎಂದು ವಿದ್ಯಾರ್ಥಿನಿಯರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ದೇವದುರ್ಗ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು.
ದೇವದುರ್ಗ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು.
ದೇವದುರ್ಗ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು.
ದೇವದುರ್ಗ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು.
ದೇವದುರ್ಗ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು.
ದೇವದುರ್ಗ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು.
ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶೌಚಾಲಯ ಕೊರತೆ ಇರುವ ಬಗ್ಗೆ ಮಾಹಿತಿ ಇಲ್ಲ. ಕಾಲೇಜಿಗೆ ಭೇಟಿ ನೀಡಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕೆಕೆಆರ್‌ಡಿಬಿ ಅನುದಾನದಲ್ಲಿ ಒದಗಿಸಲಾಗುವುದು
ಕರೇಮ್ಮ ಜಿ ನಾಯಕ ಶಾಸಕಿ
ನಾವು ಗ್ರಾಮೀಣ ಪ್ರದೇಶದ ಬಡ ರೈತರ ಮಕ್ಕಳಾಗಿದ್ದೇವೆ. ಸಮಸ್ಯೆಗಳ ಬಗ್ಗೆ ಮನೆಯಲ್ಲಿ ಹೇಳಿದರೆ. ನಮ್ಮ ಶಿಕ್ಷಣ ಅಲ್ಲಿಗೆ ಮೊಟಕುಗೊಳ್ಳುತ್ತದೆ. ಬಯಲು ಶೌಚಾಲಯ ನಮಗೆ ಮುಜುಗರ ತರುತ್ತದೆ. ಆದರೆ ನಮ್ಮ ಭವಿಷ್ಯದ ದೃಷ್ಟಿಯಿಂದ ಸಹಿಸಿಕೊಂಡಿದ್ದೆವೆ
ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿನಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT