ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಆಶಯಗಳ ಅನುಷ್ಠಾನ ಗುರಿ: ಗಣರಾಜ್ಯೋತ್ಸವದಲ್ಲಿ ಸಚಿವ ವೆಂಕಟರಾವ್‌ ನಾಡಗೌಡ

Last Updated 26 ಜನವರಿ 2019, 12:07 IST
ಅಕ್ಷರ ಗಾತ್ರ

ರಾಯಚೂರು: ಸಂವಿಧಾನದ ಪ್ರಸ್ತಾವನೆಯಲ್ಲಿ ದೇಶದ ಜನಜೀವನದ ಆಶೋತ್ತರಗಳು ಹುದುಗಿವೆ. ಸರ್ಕಾರವು ಅವುಗಳನ್ನು ಸಾಕಾರಗೊಳಿಸುವ ಗುರಿ ಹೊಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

ಗಣರಾಜ್ಯೋತ್ಸವ ನಿಮಿತ್ತ ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸಂವಿಧಾನದ ಅನುಷ್ಠಾನದಿಂದ ಜನರಿಗೆ ಸಿಗಬೇಕಾದ ಫಲ ಸಿಗುತ್ತಿದೆ. ದೇಶದ ಜನರಲ್ಲಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವ ಭಾವನೆ ಕಾಪಾಡಿಕೊಂಡು ಹೋಗಬೇಕಿದೆ. ಧರ್ಮ ನಿರಪೇಕ್ಷತೆಯು ದೇಶದ ನೀತಿಯಾಗಿದೆ ಎಂದರು.

ಸಂವಿಧಾನಾತ್ಮಕವಾಗಿ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನ ಬಂದಿವೆ. ಇದು ದೇಶದ ಸಾರ್ವಭೌಮತ್ವವನ್ನು ಸಾರುತ್ತವೆ. ಅತೀ ಗೌರವನಿಷ್ಠೆಗಳನ್ನು ನಿರೂಪಿಸುತ್ತವೆ. ಇವೆಲ್ಲವೂ ರಾಷ್ಟ್ರದ ಇಡೀ ಹಿನ್ನೆಲೆ, ಕಲ್ಪನೆ ಮತ್ತು ಸಂಸ್ಕೃತಿಯನ್ನು ಪ್ರತಿಪಾದಿಸುತ್ತವೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನಗಳಿಗೆ ಗೌರವ ತೋರುವುದು, ಗೌರವ ದೊರಕಿಸಿಕೊಡುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಭಾವೈಕ್ಯತೆ, ಸಹಬಾಳ್ವೆ ಮತ್ತು ಸೌಹಾರ್ದತೆ ಎಲ್ಲರ ಉಸಿರಾಗಬೇಕು. ದೇಶದಲ್ಲಿ ಅಪಾರ ಯುವಶಕ್ತಿಯ ಸದ್ಬಳಕೆಗಾಗಿ ವಿಪುಲ ಅವಕಾಶ ಒದಗಿಸುವುದು ಅತ್ಯಗತ್ಯವಾಗಿದೆ. ಜನರು ತಮ್ಮ ಹೊಣೆಯನ್ನು ಅರಿತು ಕಾಯಕವೇ ಕೈಲಾಸ ಹಾಗೂ ಕೈ ಕೆಸರಾದರೆ ಬಾಯಿ ಮೊಸರು ಎಂಬ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದುಡಿಮೆಯಲ್ಲಿ ನಿರತರಾಗಬೇಕು ಎಂದು ತಿಳಿಸಿದರು.

ಭಾರತದ ಪ್ರಜಾಪ್ರಭುತ್ವ ಜಗತ್ತಿನ ಅದರಲ್ಲೂ ಆಫ್ರೋ-ಏಷ್ಯನ್ ರಾಷ್ಟ್ರಗಳಿಗೆ ಮಾದರಿಯಾಗಿದೆ. ಎಂತಹ ಸವಾಲುಗಳು ಬಂದರೂ, ನಮ್ಮ ಪ್ರಜಾಪ್ರಭುತ್ವದ ನೆಲೆಗಟ್ಟು ಅಲುಗಾಡದೆ ಗಟ್ಟಿಯಾಗಿ ನಿಂತಿದೆ. ಇಂತಹ ಪ್ರಜಾಪ್ರಭುತ್ವ ಹಾಗೂ ಇದಕ್ಕೆ ಬೆನ್ನೆಲುಬಾಗಿರುವುದು ಸಂವಿಧಾನ ಎಂದು ಹೇಳಿದರು.

ವಿವಿಧತೆಯಲ್ಲಿ ಏಕತೆ ಹೊಂದಿರುವ ಈ ದೇಶದಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಜನರನ್ನು ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವುದು ವೈಶಿಷ್ಟ್ಯವಾಗಿದೆ. ದೇಶದ ಇತಿಹಾಸದಲ್ಲಿ ಜನವರಿ 26 ಅತ್ಯಂತ ಮಹತ್ವದ ದಿನವಾಗಿದೆ. ಈ ದಿನವನ್ನು ರಾಷ್ಟ್ರೀಯ ಹಬ್ಬವಾಗಿ ಸಂಭ್ರಮ, ಸಡಗರದಿಂದ ಆಚರಿಸುತ್ತೇವೆ ಎಂದು ಹೇಳಿದರು.

1950 ರ ಜನವರಿ 26 ರಂದು ಇಡೀ ಸ್ವತಂತ್ರ ಭಾರತವನ್ನು ಗಣರಾಜ್ಯವೆಂದು ಘೋಷಿಸಲಾಯಿತು. ಮಹಾ ಮಾನವತವಾದಿ ಡಾ: ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ಈ ದಿನದಿಂದ ಜಾರಿಗೊಂಡಿತು. ಇದೇ ದಿನದಂದು ಸಾರನಾಥದಲ್ಲಿರುವ ಅಶೋಕನ ಕಾಲದ ಸಿಂಹ-ಶಿಖರವನ್ನು ಸತ್ಯಮೇವ ಜಯತೆ ಎಂಬ ಉಪನಿಷದ್ ವಾಕ್ಯದೊಡನೆ ರಾಷ್ಟ್ರಲಾಂಛನವಾಗಿ ಅಂಗೀಕರಿಸಲಾಯಿತು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಬಿ.ಶರತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಿಶೋರಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್‌ ಅತುಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT