ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಘಟನೆಯಿಂದ ಅಭಿವೃದ್ಧಿ, ಯೋಜನೆಯಿಂದಲ್ಲ'

ಹಾಲುಮತ ಸಂಸ್ಕೃತಿ ಉತ್ಸವಕ್ಕೆ ಸರಳವಾಗಿ ಚಾಲನೆ
Last Updated 12 ಜನವರಿ 2022, 13:31 IST
ಅಕ್ಷರ ಗಾತ್ರ

ಜಾಲಹಳ್ಳಿ: (ರಾಯಚೂರು ಜಿಲ್ಲೆ): ‘ಯಾವುದೇ ಸಮುದಾಯ ಸರ್ಕಾರ ನೀಡುವ ಯೋಜನೆಗಳು, ಸೌಲಭ್ಯಗಳಿಂದ ಪರಿಪೂರ್ಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಸಂಘಟನೆ, ಶಿಕ್ಷಣ ಹಾಗೂ ಕಾಯಕದಿಂದ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಕಾಗಿನೆಲೆ ಕನಕ ಗುರುಪೀಠದ ಮುಖ್ಯಸ್ಥ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ದೇವದುರ್ಗ ತಾಲ್ಲೂಕು ತಿಂಥಣಿ ಬ್ರಿಡ್ಜ್ ಹತ್ತಿರದ ಕನಕಗುರು ಪೀಠದಲ್ಲಿ ಬುಧವಾರದಿಂದ ಆರಂಭವಾದ ಮೂರು ದಿನಗಳ ಹಾಲುಮತ ಸಂಸ್ಕೃತಿಗಳ ಕಾರ್ಯಕ್ರಮದಲ್ಲಿ ‘ರಾಜ್ಯ ಕುರಿಗಾರರ ಮತ್ತು ಉಣ್ಣೆನೇಕಾರರ ಸಮಾವೇಶ’ ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರದ ಯೋಜನೆಗಳು, ಸೌಲಭ್ಯಗಳು ತಾತ್ಕಾಲಿಕ ಮಾತ್ರ. ಕಾಯಕನಿಷ್ಠೆ ಮಾತ್ರ ಶಾಶ್ವತ. ಕುರುಬರು ಕಾಯಕದ ಮಹತ್ವ ಅರಿಯಬೇಕು. ಭಂಡಾರ, ಕಂಬಳಿ, ಕುರಿ ಉಣ್ಣೆ ಮಹತ್ವ ತಿಳಿಯಬೇಕು. ಹಸು ಸಂತತಿ ಕ್ಷೀಣಿಸಬಹುದು. ಕುರಿ ಸಂತತಿ ಕ್ಷೀಣಿಸದು. ಸಂತತಿ ತಡೆದಷ್ಟು ಬೆಳೆಯುತ್ತದೆ. ಹಸು ಸೆಗಣಿಯಲ್ಲಿ ಹುಳು ಇದ್ದರೆ, ಕುರಿಪಿಕ್ಕೆಯಲ್ಲಿ ಹುಳು ಕಾಣದು. ಕುರುಬ ಸುಳ್ಳು ಹೇಳುವುದಿಲ್ಲ, ಕುರಿ ಹೊಲಸೂ ತಿನ್ನುವುದಿಲ್ಲ, ಇದು ಕುರಿ, ಕುರಿಗಾಯಿಗಳ ಶ್ರೇಷ್ಠತೆ ತೋರಿಸುತ್ತದೆ’ ಎಂದು ಹೇಳಿದರು.

‘ದಿನದಿಂದ ದಿನಕ್ಕೆ ಕುರಿಗಾಯಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಕಾಯಕ ನಿಷ್ಠೆಯ ಕೊರತೆ, ಸರ್ಕಾರದ ಅಸಹಕಾರ ಸೇರಿದಂತೆ ಅನೇಕ ಕಾರಣದಿಂದ ಕುರಿಗಾಯಿಯಿಂದ ವಿಮುಖರಾಗುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕೊಡಲಿ ರಹಿತ ಕುರಿಗಾಯಿಗಳಿಗೆ ಮೇಯಿಸಲು ಅನುಮತಿ ನೀಡಿಬೇಕಿದೆ’ ಎಂದರು.

ಹಟ್ಟಿಚಿನ್ನಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ್ ಮಾತನಾಡಿ, ‘ಕುರುಬರ ಮನಸ್ಸು ಹಾಲಿನಷ್ಠೆ ಶ್ರೇಷ್ಠವಾದದ್ದು. ಎಲ್ಲರ ಜತೆ ಸೌಹಾರ್ದದಿಂದ ಬದುಕುವ ಗುಣ ಅವರದ್ದು. ದೇವಸ್ಥಾನ ಮುಖ್ಯರಸ್ತೆಯ ಅಭಿವೃದ್ಧಿಗಾಗಿ ಕಂಪನಿಯಿಂದ ₹16 ಲಕ್ಷ ಹಾಗೂ ಈ ಕಾರ್ಯಕ್ರಮದಲ್ಲಿ ಅನ್ನದಾಸೋಹಕ್ಕೆ ₹2 ಲಕ್ಷ ಸಹಾಯಧನ ನೀಡಲಾಗಿದೆ. ದೇವಸ್ಥಾನ ಅಭಿವೃದ್ಧಿಗೆ ತನು, ಮನ, ಧನದಿಂದ ಸೇವೆ ಮಾಡಲು ಸದಾಸಿದ್ಧ’ ಎಂದರು.

ತಿಂಥಣಿ ಬ್ರಿಡ್ಜ್ ಕನಕಗುರು ಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಹೊಸದುರ್ಗ ದಕನಕಗುರು ಪೀಠದ ಈಶ್ವರನಂದಪುರಿ ಸ್ವಾಮೀಜಿ, ಹಾಲದರ್ತಿ ಶಿವಸಿದ್ದೇಶ್ವರ ಸ್ವಾಮೀಜಿ, ಭೀರಲಿಂಗಪ್ಪ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.

ಹಾಲುಮತ ಸಮಾಜದ ಮುಖಂಡ ಕೆ.ವಿರೂಪಾಕ್ಷಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಾ ಅಮರೇಶ್ವರ ನಾಯಕ, ಉಣ್ಣೆ ನೇಕಾರರ ಮಹಾ ಮಂಡಳಿ ಅಧ್ಯಕ್ಷ ಜಯರಾಜ್, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ರಾಜ್ಯ ಮಹಿಳಾ ಕುರುಬ ಸಂಘದ ಅಧ್ಯಕ್ಷೆ ಪ್ರಭಾವತಿ, ಅಮೃತ್‌ರಾವ್ ಚಿಮ್ಕೋಡೆ, ರಾಮಣ್ಣ, ಬಸವಂತಪ್ಪ, ಶಿವಬಸಪ್ಪ, ಶಂಕರಗೌಡ ಹಟ್ಟಿ ಸೇರಿದಂತೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT