ಭಾನುವಾರ, ಜನವರಿ 19, 2020
25 °C

ಹಾಲುಮತ ಸಂಸ್ಕೃತಿಯ ಜನರು ಪ್ರಕೃತಿಯೊಂದಿಗೆ ಬೆಸೆದುಕೊಂಡಿದ್ದಾರೆ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ‘ಕುರಿ ಸಾಕಾಣಿಕೆ ಹಾಗೂ ಕೃಷಿ ಅವಲಂಬಿಸಿ ಜೀವನ ಸಾಗಿಸುತ್ತಿರುವ ಹಾಲುಮತ ಸಂಸ್ಕೃತಿಯ ಜನರು ಪ್ರಕೃತಿಯೊಂದಿಗೆ ಬೆಸೆದುಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ದೇವದುರ್ಗ ತಾಲ್ಲೂಕಿನ ತಿಂಥಿಣಿ ಬ್ರಿಡ್ಜ್‌ ಪಕ್ಕದಲ್ಲಿರುವ ಕಲಬುರ್ಗಿ ವಿಭಾಗದ ಕನಕ ಗುರುಪೀಠದಲ್ಲಿ ಹಾಲುಮತ ಸಂಸ್ಕೃತಿ ವೈಭವ ನಿಮಿತ್ತ ಸೋಮವಾರ ಆಯೋಜಿಸಿದ್ದ ಆದಿವಾಸಿ ಸಂಸ್ಕೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಹಾಲುಮತ ಸಮುದಾಯಕ್ಕೆ ಸೇರಿದ ಹಕ್ಕ–ಬುಕ್ಕ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದರು. ಹಾಲುಮತ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಹೊಂದಿದ್ದು, ಈ ನಾಡಿನ ಶ್ರೇಷ್ಠ ಸಂತ ಕನಕದಾಸರು ಈ ಸಮುದಾಯಕ್ಕೆ ಸೇರಿದವರು’ ಎಂದರು.

'ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎನ್ನುವ ಕನಕ ಗುರುಪೀಠದ ಸ್ವಾಮೀಜಿ ಅವರ ಬೇಡಿಕೆ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಸದ್ಯ ಹಣಕಾಸು ಪರಿಸ್ಥಿತಿ ಬೇಡಿಕೆಗೆ ಪೂರಕವಾಗಿಲ್ಲ. ಅಭಿವೃದ್ಧಿಗಿಂತಲೂ ಪ್ರವಾಹ ಪರಿಹಾರದತ್ತ ಗಮನ ಕೊಡಬೇಕಾದ ಅನಿವಾರ್ಯತೆ ಇದೆ. ಮಾರ್ಚ್ ಬಜೆಟ್ ಮಂಡನೆ ನಂತರ ಹಣಕಾಸು ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ' ಎಂದರು.

'ಆದಿವಾಸಿಗಳ ಅಭಿವೃದ್ಧಿ ಕುರಿತ ಬೇಡಿಕೆಗಳ ಬಗ್ಗೆ ಶಕ್ತಿಮೀರಿ ಸ್ಪಂದಿಸುತ್ತೇನೆ' ಎಂದು ಭರವಸೆ ನೀಡಿದರು.

ಪ್ರಶಸ್ತಿ ಪ್ರದಾನ: ಗದಗ ಜಿಲ್ಲೆಯ ವಿದ್ಯಾನಿಧಿ ಪ್ರಕಾಶನದ ಜಯದೇವ ಮೆಣಸಗಿ ಅವರಿಗೆ ‘ಹಾಲುಮತ ಭಾಸ್ಕರ್’ ಪ್ರಶಸ್ತಿ, ಕೊಡಗಿನ ಆದಿವಾಸಿಗಳ ಪರ ಹೋರಾಗಾರ್ತಿ ಮುತ್ತಮ್ಮ ಅವರಿಗೆ ’ಸಿದ್ದಶ್ರೀ’ ಪ್ರಶಸ್ತಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆ.ಎಂ.ಮೇತ್ರಿ ಅವರಿಗೆ ’ಕನಕರತ್ನ’ ಪ್ರಶಸ್ತಿ ನೀಡಿ ಗಣ್ಯರು ಸನ್ಮಾನಿಸಿದರು.

ಕೇಂದ್ರ ಉಕ್ಕು ಸಚಿವ ಪಗ್ಗನ್‌ಸಿಂಗ್‌ ಕುಲಸ್ತೆ, ಮಾಜಿ ಶಾಸಕ ಎಚ್‌.ವಿಶ್ವನಾಥ ಮಾತನಾಡಿದರು. ಶಾಸಕರಾದ ಡಾ.ಶಿವರಾಜ ಪಾಟೀಲ, ಶಿವನಗೌಡ ನಾಯಕ, ಮುಖಂಡರಾದ ಕೆ.ವಿರೂಪಾಕ್ಷಪ್ಪ, ಮಾನಪ್ಪ ವಜ್ಜಲ್‌, ಪ್ರತಾಪಗೌಡ ಪಾಟೀಲ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು