ಸಿಂಧನೂರು: ‘ಖಾಸಗಿ ಶಾಲಾ-ಕಾಲೇಜುಗಳ ವಾಹನಗಳ ಚಾಲಕರು ಸಾರಿಗೆ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಲಕ್ಷ್ಯತನದಿಂದ ವಾಹನ ಚಲಾಯಿಸಿದ್ದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗವುದು’ ಎಂದು ಡಿವೈಎಸ್‍ಪಿ ಬಿ.ಎಸ್.ತಳವಾರ ಎಚ್ಚರಿಕೆ ನೀಡಿದರು.
ಸ್ಥಳೀಯ ಶಹರ ಪೊಲೀಸ್ ಠಾಣೆಯಲ್ಲಿ ಈಚೆಗೆ ನಡೆದ ಶಾಲಾ-ಕಾಲೇಜುಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
‘ಹೇವಿ, ಬ್ಯಾಡ್ಜ್ ಪರವಾನಿಗೆ ಇರುವ ಅನುಭವ ಇರುವವರನನ್ನು ಶಾಲಾ ವಾಹನಗಳ ಚಾಲಕರನ್ನಾಗಿ ನೇಮಿಸಿಕೊಳ್ಳಬೇಕು. ಮದ್ಯ ಸೇವಿಸಿ, ಅಲಕ್ಷ್ಯತನದಿಂದ ವಾಹನಗಳು ಸಂಚರಿಸದಂತೆ ಮುಖ್ಯಸ್ಥರು ಸೂಚಿಸಬೇಕು. ಅಂತಹ ಚಾಲಕರಿದ್ದರೆ ಕೆಲಸದಿಂದ ತೆಗೆದು ಹಾಕಬೇಕು. ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ತಿಳಿಸಿದರು.
‘ಶಾಲಾ ವಾಹನಗಳಲ್ಲಿ ಮಿತಿಗಿಂತ ಹೆಚ್ಚು ಮಕ್ಕಳನ್ನು ಕೂರಿಸುವಂತಿಲ್ಲ. ಸ್ಪೀಡ್ ಗೌರ್ನರ್‌ನ್ನು ತಪ್ಪದೇ ಅಳವಡಿಸಬೇಕು. ಹಳದಿ ಬಣ್ಣವನ್ನು ಬಳಿಸಬೇಕು. ವಾಹನದ ನಾಲ್ಕು ಕಡೆಗಳಲ್ಲಿ ಶಾಲಾ ವಾಹನ ಎಂದು ಬೋರ್ಡ್ ಬರೆಸಬೇಕು. ಸಿಸಿ ಟಿವಿ ಕ್ಯಾಮೆರಾ, ಅಗ್ನಿಶಾಮಕ ಉಪಕರಣ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು. ತುರ್ತು ನಿರ್ಗಮನಕ್ಕೆ ಅನುಕೂಲಕರ ಡೋರ್ ಇರಬೇಕು’ ಎಂದು ಹೇಳಿದರು.
‘ನಿಯಮಗಳನ್ನು ಪಾಲಿಸದ ಚಾಲಕರು ಮತ್ತು ಸಂಸ್ಥೆಗಳಿಗೆ ಮೊದಲು ದಂಡ ವಿಧಿಸುತ್ತೇನೆ. ತಪ್ಪುಗಳು ಪುನರಾವರ್ತನೆಯಾದಲ್ಲಿ ಬಿಎನ್‍ಎಸ್ ಮತ್ತು ಮೋಟಾರು ವಾಹನ ಕಾಯ್ದೆ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು.
ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ವೈ.ನರೇಂದ್ರನಾಥ ಮಾತನಾಡಿ, ‘ಶಾಲಾ ವಾಹನಗಳಂತೆ ಕೆಎಸ್‍ಆರ್‌ಟಿಸಿ ಬಸ್, ಕ್ರೂಷರ್ ಸೇರಿದಂತೆ ಎಲ್ಲ ವಾಹನಗಳ ಚಾಲಕರ ಸಭೆ ನಡೆಸಿ ಕಟ್ಟುನಿಟ್ಟಾಗಿ ಸೂಚನೆ ನೀಡಬೇಕು. ಮಖ್ಯರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಲೋಕೋಪಯೋಗಿ ಮುಚ್ಚಬೇಕು. ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕಾಗಿ ನಗರಸಭೆ ಕ್ರಮವಹಿಸಬೇಕು’ ಎಂದು ಹೇಳಿದರು.
ನೋಬೆಲ್ ಟೆಕ್ನೋ ಸ್ಕೂಲ್‍ನ ಕಾರ್ಯದರ್ಶಿ ತನವೀರ್, ಯುವ ಮುಖಂಡ ವೆಂಕೋಬ ನಾಯಕ ಮಾತನಾಡಿದರು. ಸರ್ಕಲ್ ಇನ್ಸ್‌ಪೆಕ್ಟರ್ ವೀರಾರೆಡ್ಡಿ, ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ದುರುಗಪ್ಪ ಡೊಳ್ಳಿನ್, ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ವೆಂಕಟೇಶ ಚವ್ಹಾಣ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.