ರಾಯಚೂರು: ‘ಖಾಸಗಿ ಶಾಲೆಗಳ ಸಮಸ್ಯೆಗಳ ಬಗ್ಗೆ ತಾಲ್ಲೂಕು, ಜಿಲ್ಲಾ ಹಾಗೂ ವಿಭಾಗೀಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರದ ಗಮನಕ್ಕೆ ತಂದು ಪರಿಹರಿಸಲಾಗುವುದು’ ಎಂದು ರಾಜ್ಯ ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಶನಿವಾರ ‘ರಾಯಚೂರು ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ರುಸ್ಮಾ)ದಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಇಂದಿನ ವಿದ್ಯಾರ್ಥಿಗಳಿಗೆ ನಾಳಿನ ಉಜ್ವಲ ಭವಿಷ್ಯದ ದಾರಿದೀಪವಾಗಿ ಶಿಕ್ಷಕರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಇದರಿಂದ ರಾಜ್ಯ, ದೇಶದ ಪ್ರಗತಿ ಸಾಧ್ಯವಾಗಲಿದೆ’ ಎಂದು ಹೇಳಿದರು.
‘ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ ₹5,000 ಕೋಟಿ ಅನುದಾನ ನೀಡಲಿದೆ. ಈ ಅನುದಾನದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ಸರ್ಕಾರ ಬದ್ಧತೆ ತೋರಿದೆ. ಈಗಾಗಲೇ ಈ ಭಾಗಕ್ಕೆ ₹1,250 ಕೋಟಿ ಅನುದಾನ ನೀಡಲಾಗಿದೆ. ಅನುದಾನ ರಹಿತ ಖಾಸಗಿ ಶಾಲೆಗಳ ಅಗತ್ಯ ಸೌಲಭ್ಯಕ್ಕಾಗಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಮಾತನಾಡಿದರು. ರುಸ್ಮಾದ ಅಧ್ಯಕ್ಷ ರಾಜಾ ಶ್ರೀನಿವಾಸ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ರುಸ್ಮಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪತ್ರಿಕಾ ಕ್ಷೇತ್ರದ ಅರವಿಂದ ಕುಲಕರ್ಣಿ, ವೈದ್ಯಕೀಯ ಕ್ಷೇತ್ರದ ಡಾ.ವಿ.ಶ್ರೀಧರರೆಡ್ಡಿ, ಸಾಹಿತ್ಯ ಕ್ಷೇತ್ರದ ಬಾಬು ಬಂಡಾರಿಗಲ್, ಗಾಯನ ಕ್ಷೇತ್ರದ ಶೇಷಗಿರಿ ದಾಸ್ ಹಾಗೂ ಶಾಂತಿ ಸೌಹಾರ್ದತೆಗಾಗಿ ಸಿಪಿಐ ಉಮೇಶ ಕಾಂಬ್ಳೆ ಅವರಿಗೆ ರುಸ್ಮಾ ಪ್ರಶಸ್ತಿ ನೀಡಲಾಯಿತು. ಅಲ್ಲದೇ 100ಕ್ಕೂ ಹೆಚ್ಚು ಶಿಕ್ಷಕರಿಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರಸಭೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಉಪಾಧ್ಯಕ್ಷ ಸಾಜೀದ್ ಸಮೀರ್, ನಿವೃತ್ತ ಶಿಕ್ಷಣಾಧಿಕಾರಿ ನರಸಪ್ಪ, ನಗರಸಭೆ ಸದಸ್ಯ ಜಯಣ್ಣ, ಬಿ.ರಮೇಶ, ರುದ್ರಪ್ಪ ಅಂಗಡಿ, ನರಸಿಂಹಲು ಮಾಡಗಿರಿ, ಸುಧಾಮ, ರುಸ್ಮಾ ಒಕ್ಕೂಟದ ಚಂದ್ರಮೋಹನರೆಡ್ಡಿ, ಎಚ್.ವೆಂಕಟೇಶಲು, ಮೋಹಿನುದ್ದೀನ್, ಶೇಖರ ರಾಂಪೂರಿ, ಎಸ್.ಕೆ.ನಾಗಿರೆಡ್ಡಿ, ಕೆ.ಮಲ್ಲೇಶ, ಗಿರೀಶ ಆಚಾರ್ಯ, ಮೊಹ್ಮದ್ ಅಬ್ದುಲ್ ಹೈಫಿರೋಜ್, ಎಂ.ಸುರೇಶಬಾಬು, ಮಲ್ಲೇಶ ಮೋಸಿನ್ ಜಮಾಲ್, ಸೈಯ್ಯದ್ ಜಹರಾ ಬತುಲ್, ಶರಣಯ್ಯ ಸ್ವಾಮಿ, ಮೆಹಬೂಬ್ ಮಲಿಯಾಬಾದ್, ಸಿದ್ದಣ್ಣ, ಶೇಖ್ ಮೆಹಬೂಬ್, ಅಭಿಲಾಷ್, ಲಕ್ಷ್ಮೀದೇವಿ, ಶಾರದಾ, ವನಜಾ, ಶಿರೀಷಾ, ವೀಣಾ, ಲತಾ ಹಾಗೂ ಪ್ರಣಯರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.