ಶನಿವಾರ, ಫೆಬ್ರವರಿ 27, 2021
30 °C
ಪೊಲೀಸರ ನೆರವಿನೊಂದಿಗೆ ಕೆಲವು ಟಿನ್‌ ಶೆಡ್‌ಗಳ ನೆಲಸಮ

ಶೆಡ್‌ ತೆರವು ಕಾರ್ಯಾಚರಣೆಗೆ ಜನಾಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ಚಂದ್ರಬಂಡಾ ಮಾರ್ಗದ ಸರ್ಕಾರಿ ಜಾಗದಲ್ಲಿ ನಿರ್ಮಿಸಿಕೊಂಡಿರುವ ತಾತ್ಕಾಲಿಕ ಶೆಡ್‌ಗಳನ್ನು ಮತ್ತು ಮನೆಗಳನ್ನು ತೆರವು ಮಾಡಲು ಜಿಲ್ಲಾಡಳಿತದಿಂದ ಸೋಮವಾರ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಜನರು ಆಕ್ರೋಶದಿಂದ ಪ್ರತಿಭಟನೆ ನಡೆಸಿದರು.

ಸ್ಥಳದಲ್ಲಿ ಪ್ರಕ್ಷುಬ್ಧ ಸ್ಥಿತಿ ಸೃಷ್ಟಿಯಾಗಿದ್ದರಿಂದ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ವಾಪಸಾದ ಪ್ರಸಂಗ ನಡೆಯಿತು.
ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಜೆಸಿಬಿ ಯಂತ್ರದಿಂದ ನಾಲ್ಕಾರು ಮನೆಗಳ ಶೆಡ್‌ಗಳನ್ನು ಕಿತ್ತುಹಾಕಲಾಯಿತು. ಶೆಡ್‌ಗಳಲ್ಲಿ ವಾಸಿಸುತ್ತಿದ್ದ ಜನರು ಗಾಬರಿಯಿಂದ ಕಣ್ಣೀರು ಹಾಕುತ್ತಾ ಕಾರ್ಯಾಚರಣೆ ನಿಲ್ಲಿಸುವಂತೆ ಬೇಡಿಕೊಳ್ಳುತ್ತಿರುವುದು ಕಂಡುಬಂತು. ಕೂಡಲೇ ಸುತ್ತಮುತ್ತಲಿನ ಮನೆಗಳು ಮತ್ತು ಗುಡಿಸಲುಗಳಿಂದ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು. ಮಹಿಳೆಯರ ಗುಂಪೊಂದು ಆತಂಕದಲ್ಲಿಯೇ ಧರಣಿ ಆರಂಭಿಸಿದರು.

ತೆರವು ಕಾರ್ಯಾಚರಣೆ ಯಂತ್ರದ ಬಳಿ ಕೆಲವು ಜನರು ಆಕ್ರೋಶಕೊಂಡು ನೆಲದ ಮೇಲೆ ಉರುಳಿ ಅಡ್ಡಿಪಡಿಸಿದರು. ನೆಲಕ್ಕೆ ಉರುಳಿದವರನ್ನು ಪೊಲೀಸರು ಕೈ ಮತ್ತು ಕಾಲು ಹಿಡಿದು ಎತ್ತಿ ಬೇರೆ ಕಡೆಗೆ ಕಳುಹಿಸಿದರು. ಕಣ್ಣೀರು ಹಾಕುತ್ತಾ ನಿಂತಿದ್ದ ಮಹಿಳೆಯರನ್ನು ಸ್ಥಳದಿಂದ ದೂರ ಕಳುಹಿಸುವುದಕ್ಕೆ ಮಹಿಳಾ ಪೊಲೀಸರು ಹರಸಾಹಸ ಪಟ್ಟರು.

ಗುಂಪು ಚದುರಿಸುವುದಕ್ಕಾಗಿ ಪೊಲೀಸರು ಲಘೂಲಾಠಿ ಪ್ರಹಾರ ಮಾಡಿದರು. ಸುತ್ತಮುತ್ತಲೂ ಸುಮಾರ 1,200 ಕ್ಕೂ ಹೆಚ್ಚು ಶೆಡ್‌ಗಳನ್ನು ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂಬುದು ಅಧಿಕಾರಿಗಳ ವಿವರಣೆ. ಆಶ್ರಯ ಕಾಲನಿ ಮನೆಗಳನ್ನು ನಿರ್ಮಿಸುವುದಕ್ಕಾಗಿ ಮೀಸಲಿರುವ ಜಾಗದಲ್ಲಿ ಅನಧಿಕೃತವಾಗಿ ಶೆಡ್‌ ಹಾಕಲಾಗಿದೆ. ಹಕ್ಕಪತ್ರ ಪಡೆದುಕೊಳ್ಳದೆ ಮನೆಗಳನ್ನು ನಿರ್ಮಿಸಿಕೊಂಡಿರುವುದನ್ನೆಲ್ಲ ತೆರವು ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದರು.

ಪ್ರಭಾವಿಗಳ ದರ್ಬಾರ್‌: ಬಡವರಿಗಾಗಿ ನಿವೇಶನಗಳನ್ನು ಅಭಿವೃದ್ಧಿ ಮಾಡಿರುವುದನ್ನು ಅವಕಾಶ ಮಾಡಿಕೊಂಡಿರುವ ಕೆಲವು ಪ್ರಭಾವಿಗಳು ಕೂಡಾ ಹಲವು ನಿವೇಶನಗಳನ್ನು ವಶದಲ್ಲಿಟ್ಟುಕೊಂಡಿದ್ದಾರೆ. ಜಾಗದ ಸುರಕ್ಷತೆಗಾಗಿ ಅವರೇ ಟಿನ್‌ಶೆಡ್‌ಗಳನ್ನು ನಿರ್ಮಿಸಿ ಬಾಡಿಗೆ ರೂಪದಲ್ಲಿ ಬಡವರಿಗೆ ನೀಡಿದ್ದಾರೆ ಎನ್ನುವ ಆರೋಪವಿದೆ.

‘ಪ್ರಭಾವಿಗಳನ್ನು ಹಣಿಯುವುದಕ್ಕಾಗಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರೆ, ದಶಕಗಳಿಂದ ಗುಡಿಸಲು ನಿರ್ಮಾಣ ಮಾಡಿಕೊಂಡು ಉಪಜೀವನ ಸಾಗಿಸಲು ಸಂಕಷ್ಟ ಅನುಭವಿಸುತ್ತಿರುವ ನಿಜವಾದ ಬಡವರು ಬೀದಿಗೆ ಬೀಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಟಿನ್‌ ಶೆಡ್‌ಗಳಲ್ಲಿ ಇರುವವರ ದುಃಸ್ಥಿತಿಯನ್ನು ನೋಡಿಯಾದರೂ ಕಾರ್ಯಾಚರಣೆ ಸ್ಥಗಿತ ಮಾಡಬೇಕು. ಆಶ್ರಯ ಕಾಲನಿಯಲ್ಲಿ ಹಕ್ಕುಪತ್ರ ಪಡೆದುಕೊಳ್ಳದೆ ಪಕ್ಕಾಮನೆಗಳನ್ನು, ಬಹುಅಂತಸ್ತಿನ ಮನೆಗಳನ್ನು ನಿರ್ಮಿಸಿಕೊಂಡಿರುವುದನ್ನು ಮೊದಲು ತೆರವು ಮಾಡುವ ಧೈರ್ಯವನ್ನು ಅಧಿಕಾರಿಗಳು ತೋರಿಸಬೇಕು. ಬಡವರ ಮೇಲೆ ಬಲಪ್ರಯೋಗ ಮಾಡುವುದನ್ನು ನಿಲ್ಲಿಸಬೇಕು’ ಎಂದು ಎಲ್‌ಬಿಎಸ್‌ ನಗರ ನಿವಾಸಿ ಮೆಹಬೂಬ್‌ ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ಹೊತ್ತಿನ ಬಳಿಕ ಯುವ ಕಾಂಗ್ರೆಸ್‌ ಮುಖಂಡ ರವಿ ಬೋಸರಾಜು ಸೇರಿದಂತೆ ಮುಖಂಡರು ಸ್ಥಳಕ್ಕೆ ಆಗಮಿಸಿದರು. ಧರಣಿ ನಡೆಸುತ್ತಿದ್ದ ಮಹಿಳೆಯರ ಸಂಕಷ್ಟ ಆಲಿಸಿದರು. ಜನರಿಂದ ಸಮಸ್ಯೆಗಳನ್ನು ತಿಳಿದುಕೊಂಡರು.

ಕಾರ್ಯಾಚರಣೆಯನ್ನು ಸದ್ಯಕ್ಕೆ ನಿಲ್ಲಿಸಲು ಮನವಿ ಮಾಡಿದರು. ಸ್ವಯಂ ತೆರವು ಮಾಡಿಕೊಳ್ಳಲು ಕಾಲಾವಕಾಶ ನೀಡಲಾಗಿದೆ. ಜನರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಸ್ಥಗಿತ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು