ಬುಧವಾರ, ಆಗಸ್ಟ್ 4, 2021
22 °C

ರಾಯಚೂರು | ನದಿಯಿಂದ ನೇರ ಮರಳು ಸಾಗಣೆ; ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮರಳು ಗಣಿಗಾರಿಕೆ ಗುತ್ತಿಗೆ ಪಡೆದವರು ಕಾಯ್ದೆ ಪ್ರಕಾರ ವರ್ಷಕ್ಕೆ ಒಂಟು ಬ್ಲಾಕ್‌ನಿಂದ 50 ಸಾವಿರ ಮೆಟ್ರಿಕ್‌ ಟನ್‌ ಮರಳು ಹೊರತೆಗೆಯಬೇಕಿತ್ತು. ವಾಸ್ತವದಲ್ಲಿ 5 ಲಕ್ಷ ಟನ್‌ವರೆಗೂ ಮರಳು ಗಣಿಗಾರಿಕೆ ಮಾಡಿ, ವ್ಯಾಪಕವಾಗಿ ಅಕ್ರಮ ಮಾಡಲಾಗುತ್ತಿದೆ. ಇದರಲ್ಲಿ ಇಡೀ ವ್ಯವಸ್ಥೆ ಶಾಮೀಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹಣಮಂತ ಭಂಗಿ ಜಿಲ್ಲಾಧಿಕಾರಿಗೆ ಸೋಮವಾರ ದೂರು ಸಲ್ಲಿಸಿದರು.

ಅಕ್ರಮ ಮರಳುಗಾರಿಕೆ ಮಾಡಬಾರದು ಎಂದು 2019 ರ ಜುಲೈನಲ್ಲಿ ಹೈಕೋರ್ಟ್‌ ಆದೇಶ ನೀಡಿತ್ತು. ಆದರೂ ಅಕ್ರಮ ಸಾಗಣೆ ನಿಂತಿಲ್ಲ. ಹೀಗಾಗಿ ನ್ಯಾಯಾಂಗ ನಿಂದನೆ ಪ್ರಕರಣವೊಂದನ್ನು ದಾಖಲಿಸಲಾಗಿದ್ದು, ಅದರ ಇನ್ನೂ ವಿಚಾರಣೆಗೆ ಬಂದಿಲ್ಲ. ನದಿಯಿಂದ ಸ್ಟಾಕ್‌ ಯಾರ್ಡ್‌ಗೆ ಸಾಗಿಸುವ ಬದಲು, ಗುತ್ತಿಗೆದಾರರು ನೇರವಾಗಿ ನದಿಯಿಂದಲೇ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕೃಷ್ಣಾನದಿ ಭಾಗದ ಜೋಳದಡಗಿ, ನಿಲವಂಜಿ, ಚಿಕ್ಕರಾಯನಕುಂಪಿ, ಕರ್ಕಿಹಳ್ಳಿ, ಅಪ್ಪರಾಳ, ಚಿಂಚೋಡಿ, ಪರ್ತಾಪುರ, ಬಾಗೂರ, ಅರಿಷಿಣಗಿ, ಮ್ಯಾದರಗೋಳ, ಮದ್ಲಾಪುರ, ಉಮಳಿಪನ್ನೂರು, ಎನ್‌.ಮಲ್ಕಾಪುರ ಗ್ರಾಮಗಳಲ್ಲಿ 18 ಸ್ಟಾಕ್‌ ಯಾರ್ಡ್‌ಗಳಿವೆ. ಎಲ್ಲಿಯೂ ರಾಯಲ್ಟಿ ಪಡೆದುಕೊಂಡಷ್ಟೇ ಮರಳು ಸಾಗಣೆ ಮಾಡುತ್ತಿಲ್ಲ. ಟಿಪ್ಪರ್‌ನಲ್ಲಿ 15 ಟನ್‌ ತುಂಬಿಸಿ ವೇ ಬ್ರಿಡ್ಜ್‌ನಲ್ಲಿ ನಿಲ್ಲಿಸುತ್ತಾರೆ. ಆನಂತರ ಮತ್ತೆ 20 ಟನ್‌ವರೆಗೂ ಭರ್ತಿ ಮಾಡಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ,

ಕೋಟ್ಯಂತರ ರೂಪಾಯಿ ಸರ್ಕಾರಕ್ಕೆ ಹಾನಿ ಮಾಡಲಾಗುತ್ತಿದೆ. 15 ಟನ್‌ ಮರಳು ಪಡೆಯಲು ಲಾರಿ ಮಾಲೀಕರು ₹26 ಸಾವಿರ ರಾಯಲ್ಟಿ ಪಾವತಿಸುತ್ತಾರೆ. ಅದರಲ್ಲಿ ಸರ್ಕಾರದ ಪಾಲಿಗೆ ಉಳಿಯುವುದು ₹10 ಸಾವಿರ ಮಾತ್ರ. ಇನ್ನುಳಿದ ₹16 ಸಾವಿರದಲ್ಲಿ ಗುತ್ತಿಗೆದಾರರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್‌, ಸಿಪಿಐ, ಪಿಎಸ್‌ಐ, ಡಿಎಸ್‌ಪಿ ಹಾಗೂ ಆರ್‌ಟಿಓಗಳಲ್ಲಿ ಹಂಚಿಕೆ ಆಗುತ್ತಿದೆ. ಅಕ್ರಮವನ್ನು ತಡೆಯಲು ಯಾರೂ ಮುಂದೆ ಬರುವುದಿಲ್ಲ ಎಂದು ಆರೋಪಿಸಿದರು.

ತಿಂಥಣಿ ಬ್ರಿಡ್ಜ್‌, ಗೂಗಲ್‌ ಬ್ರಿಡ್ಜ್‌, ಹತ್ತಿಗೂಡುರು ಹಾಗೂ ಹೂವಿನಹೆಡ್ಗಿ ಚೆಕ್‌ಪೋಸ್ಟ್‌ಗಳಲ್ಲಿ ಸಮರ್ಪಕವಾಗಿ ರಾಯಲ್ಟಿ ತಪಾಸಣೆ ಮಾಡುವುದಿಲ್ಲ. ಒಂದೇ ರಾಯಲ್ಟಿ ಚೀಟಿ ತೋರಿಸಿ ಹಲವು ಲಾರಿಗಳು ಹೋಗುತ್ತಿವೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ಮುಖಂಡರೇ ಈ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು