ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು| ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ: ಬಿ.ಎಸ್‌. ಯಡಿಯೂರಪ್ಪ

ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಬಿ.ಎಸ್‌. ಯಡಿಯೂರಪ್ಪ ವಿಶ್ವಾಸ
Last Updated 12 ಮಾರ್ಚ್ 2023, 7:40 IST
ಅಕ್ಷರ ಗಾತ್ರ

ಲಿಂಗಸುಗೂರು: ‘ರಾಜ್ಯ ವಿಧಾನಸಭೆಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಇಲ್ಲಿ ಶನಿವಾರ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ಷೇತ್ರದಲ್ಲಿ ಯಾರೆ ಅಭ್ಯರ್ಥಿಯಾಗಿ ಸ್ಪರ್ಧಿಸಲಿ ನೂರಕ್ಕೆ ನೂರರಷ್ಟು ಬಿಜೆಪಿ ಅಭ್ಯರ್ಥಿ 35 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲವು ಸಾಧಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಆಡಳಿತಾವಧಿಯಲ್ಲಿನ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನ ಮಾಡಬೇಕು. ಕಾಂಗ್ರೆಸ್‍ ಗೆಲ್ಲುತ್ತೆ ಎಂಬ ಭ್ರಮನಿರಸನದಲ್ಲಿ ಇರುವವರಲ್ಲಿ ಜಾಗೃತಿ ಮೂಡಿಸಿರಿ’ ಎಂದು ಸಲಹೆ ನೀಡಿದರು.

‘ಅಧಿಕಾರದ ಚುಕ್ಕಾಣಿ ಹಿಡಿದಾಕ್ಷಣ ಹಿಂದೂ– ಮುಸ್ಲಿಂ ಬೇಧ ಭಾವ ಮರೆತು ಯೋಜನೆಗಳನ್ನು ನೀಡಲಿದ್ದೇವೆ. ಕಾಗಿನೆಲೆ ಸಂಸ್ಥಾನ ಪೀಠಕ್ಕೆ ₹ 40 ಕೋಟಿ ನೀಡಿದ್ದು ಸಿದ್ದರಾಮಯ್ಯ ಅಲ್ಲ. ನಾನು’ ಎಂದರು.

ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ ಮಾತನಾಡಿ, ‘ಬಿಜೆಪಿ ಅಧಿಕಾರಕ್ಕೆ ಬಂದಾಕ್ಷಣ ಮುದಗಲ್ಲ ಕೋಟೆ ಉತ್ಸವ ಹಾಗೂ ತಾಲ್ಲೂಕು ಕೇಂದ್ರ ಘೋಷಿಸಬೇಕು. ಮಹಿಳೆಯರಿಗಾಗಿ ಗಾರ್ಮೆಂಟ್‍ ಫ್ಯಾಕ್ಟರಿ ಸ್ಥಾಪನೆ, ತಾಂಡಾ ದೊಡ್ಡಿ ಪ್ರದೇಶಗಳಲ್ಲಿ ಪ್ರೌಢಶಾಲೆ, ವಸತಿ ನಿಲಯಗಳ ಮಂಜೂರು, ಮುದಗಲ್ಲ, ಲಿಂಗಸುಗೂರು, ಹಟ್ಟಿ ಪಟ್ಟಣಗಳಲ್ಲಿ ದಿನದ 24 ಗಂಟೆ ಕುಡಿಯುವ ನೀರು, ರೈತರ ಪಂಪಸೆಟ್‍ಗೆ ನಿತ್ಯ 8 ತಾಸು ವಿದ್ಯುತ್‍ ಪೂರೈಕೆ ಮಾಡಬೇಕು’ ಎಂದು ಮನವಿ ಮಾಡಿದರು.

ಸಾರಿಗೆ ಸಚಿವ ಶ್ರೀರಾಮುಲು, ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ‘ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಸಾಕಷ್ಟು ಯೋಜನೆಗಳನ್ನು ನೀಡಲಾಗಿದೆ. 2018ರ ಚುನಾವಣೆಯಲ್ಲಿ ಮಾನಪ್ಪ ವಜ್ಜಲ ಗೆದ್ದಿದ್ದರೆ ಸಚಿವರಾಗುತ್ತಿದ್ದರು. ಮುಂದೆ ಕಾಂಗ್ರೆಸ್‍ ಗೆಲುವು ಸಾಧ್ಯವಿಲ್ಲ ಎಂಬುದು ಮನಗಂಡು ಮತದಾರ ಬಂಧುಗಳಿಗೆ ಗ್ಯಾರಂಟಿ ಕಾರ್ಡ್‌ ಮೂಲಕ ಭರವಸೆ ಮೂಡಿಸಲು ಮುಂದಾಗಿದ್ದಾರೆ’ ಎಂದು ಟೀಕಿಸಿದರು.

ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಡಾ.ಶಿವಬಸಪ್ಪ, ಮುಖಂಡರಾದ ಸಿದ್ದೇಶ ಯಾದವ, ನಾಗಪ್ಪ ವಜ್ಜಲ, ವೀರನಗೌಡ ಲೆಕ್ಕಿಹಾಳ, ಶೂಭಾ ಕಾಟವೆ, ಅಮರನಾಥ ಪಾಟೀಲ, ಪ್ರತಾಪಗೌಡ ಪಾಟೀಲ ಇದ್ದರು.

ಕ್ಷೇತ್ರದ ಅಭ್ಯರ್ಥಿ ಯಾರು?

ಬಿಜೆಪಿ ವರಿಷ್ಠ ಬಿ.ಎಸ್‍. ಯಡಿಯೂರಪ್ಪ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಲಿಂಗಸುಗೂರು ಕ್ಷೇತ್ರದ ಅಭ್ಯರ್ಥಿ ಯಾರು? ಎಂಬುದನ್ನು ಮರೆಮಾಚಿ ಯಾರೇ ಸ್ಪರ್ಧಿಸಲಿ. ಬಿಜೆಪಿ ಅಭ್ಯರ್ಥಿ ಗೆಲವು ನಿಶ್ಚಿತ ಎಂಬ ಸಂದೇಶ ಕುರಿತು ಪ್ರೇಕ್ಷಕ ಕಾರ್ಯಕರ್ತ ಸಮೂಹದಿಂದ ಭಾರಿ ಚರ್ಚೆಗಳು ಕೇಳಿ ಬಂದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT