ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕೋವಿಡ್ ಭತ್ಯೆ ನೀಡಲು ಒತ್ತಾಯ

Last Updated 1 ಡಿಸೆಂಬರ್ 2021, 7:16 IST
ಅಕ್ಷರ ಗಾತ್ರ

ರಾಯಚೂರು: ‘ಕೋವಿಡ್ ವೇಳೆ ಕೆಲಸ ಮಾಡಿದ ಕಿರಿಯ ವೈದ್ಯರಿಗೆ ಭತ್ಯೆ ನೀಡಬೇಕು’ ಎಂದು ಒತ್ತಾಯಿಸಿ ರಿಮ್ಸ್ ಕಿರಿಯ ಸ್ಥಾನಿಕ ವೈದ್ಯರ ಸಂಘದ ನೇತೃತ್ವದಲ್ಲಿ ಕಿರಿಯ ವೈದ್ಯರು (ತುರ್ತು ಸೇವೆ ಹೊರತುಪಡಿಸಿ) ಕೆಲಸ ಸ್ಥಗಿತಗೊಳಿಸಿ ಮಂಗಳವಾರ ರಿಮ್ಸ್ ಆಸ್ಪತ್ರೆ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

‘ಒಂದು ವರ್ಷದಿಂದ ನಿರಂತರವಾಗಿ ಆರೋಗ್ಯ ರಕ್ಷಣೆಯಲ್ಲಿ ಕೆಲಸ ಮಾಡಿದ ಮತ್ತು ಕೋವಿಡ್ ನಿರ್ಮೂಲನೆಗೆ ಅವಿರತ ಪ್ರಯತ್ನಿಸಿದ ಕಾರಣ ಸರ್ಕಾರ ನಮ್ಮನ್ನು ಕೊರೊನಾ ವಾರಿಯರ್ಸ್ ಎಂದು ಗುರುತಿಸಿದೆ. ಆದರೆ, ಭತ್ಯೆ ನೀಡದೇ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ್ದು ಖಂಡನೀಯ. ಎಲ್ಲಾ ವೈದ್ಯರಿಗೆ ಕಳೆದ ಏಪ್ರಿಲ್ ತಿಂಗಳಿನಿಂದ ಸರಿಯಾಗಿ ವೇತನ ನೀಡಿಲ್ಲ. ಪ್ರತಿ ತಿಂಗಳಿಗೆ ₹10 ಸಾವಿರ ಕೋವಿಡ್ ಭತ್ಯೆಯನ್ನು ಘೋಷಿಸಿದೆ. 6 ತಿಂಗಳು ಕಳೆದರೂ ವೈದ್ಯರಿಗೆ ಭತ್ಯೆ ನೀಡಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಸ್ನಾತಕೋತ್ತರ ಶುಲ್ಕ ₹30 ಸಾವಿರದಿಂದ ₹1.50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಶುಲ್ಕ ಪಾವತಿಗೆ ಸಮಸ್ಯೆ ಆಗುತ್ತಿದೆ. ಅನೇಕರು ಆರ್ಥಿಕ ಸಮಸ್ಯೆಗೆ ಈಡಾಗಿದ್ದಾರೆ. ವೈದ್ಯಕೀಯ ಓದುವ ಮಕ್ಕಳು ಎಲ್ಲರೂ ಶ್ರೀಮಂತರಲ್ಲ. ಸರ್ಕಾರ ಅರ್ಥಮಾಡಿಕೊಂಡು ಶುಲ್ಕವನ್ನು ಕಡಿಮೆ ಮಾಡಬೇಕು. ಕೋವಿಡ್ ವೇಳೆ ತರಗತಿ ನಡೆಯದಿದ್ದರು ವೃದ್ಯಕೀಯ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿ ಮಾಡಿಕೊಳ್ಳಲಾಗಿದೆ. ಕೂಡಲೇ ಶುಲ್ಕ ವಾಪಸ್ ನೀಡಬೇಕು’ ಎಂದು ಅವರು ತಿಳಿಸಿದರು.

‘ಸ್ನಾತಕೋತ್ತರ ಕೌನ್ಸಿಲಿಂಗ್ ವಿಳಂಬ ಮಾಡಲಾಗುತ್ತಿದೆ. ಈ ಹಿಂದೆ 6 ತಿಂಗಳು ಮುಂದೂಡಲಾಗಿತ್ತು. ಈಗ ಪುನಃ ಒಂದು ವರ್ಷ ಮುಂದೂಡಲಾಗಿದ್ದು, ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಸಕಾಲದಲ್ಲಿ ಭತ್ಯೆ ಪಾವತಿಸಿ ವೈದ್ಯರ ಕುಂದು ಕೊರತೆ ಆಲಿಸಬೇಕು’ ಎಂದು ಅವರು ಆಗ್ರಹಿಸಿದರು.

ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ನಂತರ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.

ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ.ಶೌರಫ್, ಡಾ.ಸಂತೋಶ, ಡಾ.ಸೂರಜ್, ಅರುಣಾ, ಮೋನಿಕಾ, ಡಾ. ತೇಜಸ್, ಡಾ.ದೀಪಾ, ಡಾ.ರಮೇಶ, ಡಾ. ಸತ್ಯ, ಡಾ.ವಿಜಯ ಕುಮಾರ, ಡಾ.ಮಹಾಲಿಂಗ, ಡಾ.ನಿಖಿಲ್ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT