ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ | ಕಾರಹುಣ್ಣಿಮೆ ಕರಿ ಆಚರಣೆ: ಮಕ್ಕಳ ಸಂಭ್ರಮ

Published 22 ಜೂನ್ 2024, 14:19 IST
Last Updated 22 ಜೂನ್ 2024, 14:19 IST
ಅಕ್ಷರ ಗಾತ್ರ

ಕವಿತಾಳ: ಕಾರಹುಣ್ಣಿಮೆಯ ಮರುದಿನ ಶನಿವಾರ ಕರಿಯನ್ನು ಮಕ್ಕಳು ಸಂಭ್ರಮದಿಂದ ಆಚರಿಸಿದರು. ಪಟ್ಟಣ ಸೇರಿದಂತೆ ಸಮೀಪದ ಹಿರೇಹಣಿಗಿ, ಹುಸೇನಪುರ, ಸೈದಾಪುರ, ಮಲ್ಕಾಪುರ ಮತ್ತು ಬಸಾಪುರ ಮತ್ತಿತರ ಹಳ್ಳಿಗಳಲ್ಲಿ ಮಕ್ಕಳು ಸಸಿಗಳನ್ನು ಕೈಯಲ್ಲಿ ಹಿಡಿದುಕೊಂಡು ಬಾಯಿ ಬಡಿದುಕೊಂಡು ಸಂಭ್ರಮಿಸಿದರು.

ಮನೆಯಲ್ಲಿ ತೆಂಗಿನ ಚಿಪ್ಪು, ಪ್ಲಾಸ್ಟಿಕ್‌ ಡಬ್ಬಾಗಳಲ್ಲಿ 15 ದಿನಗಳ ಹಿಂದೆ ಸಜ್ಜೆ, ಜೋಳ, ಗೋಧಿ, ಭತ್ತ ಮತ್ತಿತರ ಬಿತ್ತನೆ ಬೀಜ ಹಾಕಿದ್ದ ಮಕ್ಕಳು ಮೊಳಕೆಯೊಡೆದ ಸಸಿ ಹಿಡಿದುಕೊಂಡು ಹೊಲಕ್ಕೆ ತೆರಳಿದರು. ದೊಡ್ಡವರಂತೆ ಸೀರೆ ಧರಿಸಿ ತಲೆಗೆ ಹೂವು ಮುಡಿದ ಬಾಲಕಿಯರು ಕೈಯಲ್ಲಿ ಸಸಿಗಳ ಬಟ್ಟಲು ಹಿಡಿದುಕೊಂಡು ವೈಯಾರದಿಂದ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಸಮೀಪದ ಹಿರೇಹಣಿಗಿ ಗ್ರಾಮದಲ್ಲಿ ಕಂಡುಬಂತು.

ಹೊಲದಲ್ಲಿನ ಗಿಡದ ಕೆಳಗೆ ಜಮಾಯಿಸಿದ ಮಕ್ಕಳು ಸಸಿಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ನಂತರ ತಮ್ಮಲ್ಲಿಯೇ ಇಬ್ಬರನ್ನು ಗಂಡು ಹೆಣ್ಣು ಮಾಡಿ ಅವರಿಗೆ ಮದುವೆ ಮಾಡುವ ಶಾಸ್ತ್ರ ಮಾಡಿ ಖುಷಿ ಪಟ್ಟರು. ಮನೆಯಿಂದ ತಂದ ಬುತ್ತಿ ಊಟ ಮಾಡುವ ಮೂಲಕ ಸಂಭ್ರಮಿಸಿದರು.

ಕವಿತಾಳ ಸಮೀಪದ ಹಿರೇಹಣಿಗಿ ಗ್ರಾಮದಲ್ಲಿ ಮಕ್ಕಳು ಶನಿವಾರ ಕರಿ ಆಚರಣೆಗೆ ಹೊಲಕ್ಕೆ ತೆರಳುತ್ತಿರುವುದು.
ಕವಿತಾಳ ಸಮೀಪದ ಹಿರೇಹಣಿಗಿ ಗ್ರಾಮದಲ್ಲಿ ಮಕ್ಕಳು ಶನಿವಾರ ಕರಿ ಆಚರಣೆಗೆ ಹೊಲಕ್ಕೆ ತೆರಳುತ್ತಿರುವುದು.

‘ರೈತರು ಬಿತ್ತನೆ ಪೂರ್ವದಲ್ಲಿ ಮನೆಯಲ್ಲಿ ಸಸಿ ನಾಟಿ ಮಾಡಿ ಅವುಗಳ ಬೆಳವಣಿಗೆಯನ್ನು ಆಧರಿಸಿ ಅದರಂತೆ ಹೊಲದಲ್ಲಿ ಬಿತ್ತನೆ ಮಾಡುವುದು ಪ್ರಾಯೋಗಿಕ ಸಂಪ್ರದಾಯ. ಗ್ರಾಮೀಣ ಭಾಗದ ಕೃಷಿ ಕುಟುಂಬದಲ್ಲಿ ಈಗಲೂ ಮಕ್ಕಳು ಸಸಿ ಬೆಳೆಸಿ ಆಟವಾಡುತ್ತಾರೆ’ ಎಂದು ರೈತ ಹನುಮಂತ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT