ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘೋಷಣೆ ವಿಳಂಬ: ಲಿಂಗಸುಗೂರು ಕಾಂಗ್ರೆಸ್‌, ಬಿಜೆಪಿಯಲ್ಲಿ ದ್ವಂದ್ವ

ಟಿಕೆಟ್‌ ತಪ್ಪುವ ಸಾಧ್ಯತೆಯಿಂದ ಅನ್ಯ ಪಕ್ಷದತ್ತ ಪ್ರಭಾವಿಗಳ ಚಿತ್ತ
Last Updated 21 ಮಾರ್ಚ್ 2023, 6:07 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಏಕೈಕ ವಿಧಾನಸಭೆ ಕ್ಷೇತ್ರವಾಗಿರುವ ಲಿಂಗಸುಗೂರಿನಲ್ಲಿ ದಿನ ಕಳೆದಂತೆ ರಾಜಕೀಯ ಬೆಳವಣಿಗೆಗಳು ಕುತೂಹಲ ಕೆರಳಿಸುತ್ತಿವೆ.

ಮುಖ್ಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಇನ್ನೂ ಅಧಿಕೃತವಾಗಿ ಘೋಷಿಸದಿರುವುದು ಉಭಯ ಪಕ್ಷಗಳ ಆಕಾಂಕ್ಷಿಗಳಲ್ಲಿ ದ್ವಂದ್ವ ಹುಟ್ಟು ಹಾಕಿದೆ.

ಅದೇ ರೀತಿ, ಪಕ್ಷನಿಷ್ಠೆಯಿಂದ ಕೆಲಸ ಮಾಡುತ್ತಿರುವ ಕಾರ್ಯಕರ್ತರು ಕೂಡಾ ಗೊಂದಲಕ್ಕೀಡಾಗಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಸಿದ್ದು ಬಂಡಿ ಅವರು ಈಗಾಗಲೇ ಅಬ್ಬರದ ಪ್ರಚಾರದೊಂದಿಗೆ ಮತಯಾಚನೆ ಮಾಡುತ್ತಿದ್ದು, ಇದುವರೆಗೂ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಇಂಥವರನ್ನೇ ಗೆಲ್ಲಿಸಿ ಎಂದು ಸ್ಪಷ್ಟವಾಗಿ ಮತದಾರರ ಎದುರು ಹೇಳಿಕೊಳ್ಳದಂತಹ ಸ್ಥಿತಿ ನಿರ್ಮಾಣವಾಗಿದೆ.

ಕಾಂಗ್ರೆಸ್‌ನಿಂದ ಡಿ.ಎಸ್‌.ಹುಲಗೇರಿ ಅವರಿಗೆ ಟಿಕೆಟ್‌ ದೊರೆಯುವುದು ನಿಶ್ಚಿತ ಹಾಗೂ ಬಿಜೆಪಿಯಿಂದ ಮಾನಪ್ಪ ವಜ್ಜಲ ಅವರಿಗೇ ಟಿಕೆಟ್‌ ಕೊಡಬಹುದು ಎನ್ನುವ ಮಾತುಗಳೇ ಮುಂದುವರಿದಿವೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿರುವ ಶಾಸಕ ಡಿ.ಎಸ್‌.ಹುಲಗೇರಿ ಸೇರಿದಂತೆ ನಿವೃತ್ತ ಎಂಜಿನಿಯರ್‌ ಆರ್‌.ರುದ್ರಯ್ಯ, ಎಚ್‌.ಬಿ.ಮುರಾರಿ ಹಾಗೂ ಹನುಮಂತಪ್ಪ ಆಲ್ಕೋಡ್‌ ಅವರು ತಮ್ಮನ್ನು ಬೆಂಬಲಿಸುವಂತೆ ಮತದಾರರಿಗೆ ಪ್ರತ್ಯೇಕವಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಟಿಕೆಟ್‌ ಘೋಷಣೆ ಆಗದೆ ಇರುವ ಕಾರಣ ಕಾಂಗ್ರೆಸ್‌ ತಾಲ್ಲೂಕು ಘಟಕವು ಒಕ್ಕೊರೊಲಿನಿಂದ ಇಂಥವರನ್ನೇ ಬೆಂಬಲಿಸುವಂತೆ ಮತದಾರರ ಗಮನ ಸೆಳೆಯುವುದಕ್ಕೆ ಸಾಧ್ಯವಾಗುತ್ತಿಲ್ಲ.

ಬಿಜೆಪಿಯಿಂದಲೂ ಅಭ್ಯರ್ಥಿ ಘೋಷಣೆ ಆಗದ ಕಾರಣ, ಟಿಕೆಟ್‌ ಆಕಾಂಕ್ಷಿ ಮಾನಪ್ಪ ವಜ್ಜಲ ಸೇರಿದಂತೆ ಕಾರ್ಯಕರ್ತರೆಲ್ಲರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನೇ ಜನರಿಗೆ ಮನವರಿಕೆ ಮಾಡುತ್ತಿದ್ದಾರೆ. ಪಕ್ಷದ ತಾಲ್ಲೂಕು ಘಟಕದ ನಾಯಕರು ಯಾವ ಅಭ್ಯರ್ಥಿಯ ಪರ ಅಭಿಮತವನ್ನು ವರಿಷ್ಠರಿಗೆ ಹೇಳಿಕೊಂಡಿದ್ದಾರೆ ಎನ್ನುವುದು ಕೂಡಾ ಬಹಿರಂಗವಾಗುತ್ತಿಲ್ಲ. ಇದ್ದಕ್ಕಿದ್ದಂತೆ ವರಿಷ್ಠರೇ ಹೊಸ ಅಭ್ಯರ್ಥಿಯನ್ನು ಘೋಷಿಸಬಹುದು ಎನ್ನುವ ನಿರೀಕ್ಷೆ ಕೂಡಾ ಬಿಜೆಪಿ ಕಾರ್ಯಕರ್ತರಲ್ಲಿ ಮನೆಮಾಡಿದೆ.

ಅಬ್ಬರದ ಪ್ರಚಾರ ಮಾಡುವುದಕ್ಕೆ ಟಿಕೆಟ್‌ ಘೋಷಣೆ ವಿಳಂಬವೂ ಒಂದು ಕಾರಣವಾಗಿದೆ. ಪಕ್ಷ ಸೂಚಿತ ಕಾರ್ಯಕ್ರಮಗಳ ಜಾರಿಗೆ, ಕಾರ್ಯಕರ್ತರ ಖರ್ಚು ಭರಿಸುವುದಕ್ಕೆ ಅಧಿಕೃತ ಅಭ್ಯರ್ಥಿ ಇಲ್ಲದಿರುವುದು ಕೂಡಾ ಒಂದು ಅಡಚಣೆಯಾಗಿದೆ ಎನ್ನುವುದು ‍ಪಕ್ಷದ ಮೂಲಗಳು ತಿಳಿಸಿವೆ.

ಅನ್ಯ ಪಕ್ಷದತ್ತ ಲಕ್ಷ್ಯ: ಕಾಂಗ್ರೆಸ್‌ನಿಂದ ಮೊದಲ ಸಲ ಶಾಸಕರಾಗಿರುವ ಡಿ.ಎಸ್‌.ಹೂಲಗೇರಿ ಅವರಿಗೇ ಮತ್ತೆ ಟಿಕೆಟ್ ನೀಡಲು ಪರಿಶೀಲಿಸಲಾಗುತ್ತಿದೆ ಎನ್ನುವ ಮಾತು ಪಕ್ಷದಲ್ಲಿ ಚಾಲ್ತಿಯಲ್ಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿ.ಎಸ್‌.ಹುಲಗೇರಿ ಅವರು ‘ಪರ್ಯಾಯವಾಗಿ ಆಲೋಚಿಸುವುದು ಅನಿವಾರ್ಯ’ ಎಂದು ಹೇಳಿದ್ದಾರೆ. ಈ ಮೂಲಕ ಅವರು ಪಕ್ಷಾಂತರದ ಸುಳಿವು ನೀಡಿದಂತಾಗಿದೆ. ಕಾಂಗ್ರೆಸ್‌ ಟಿಕೆಟ್‌ ತಪ್ಪಿದರೆ, ಬಿಜೆಪಿ ಟಿಕೆಟ್‌ಗೆ ಬೇಡಿಕೆ ಇಡಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಬಿಜೆಪಿ ಟಿಕೆಟ್‌ ದೊರೆಯುವ ವಿಶ್ವಾಸದಲ್ಲಿರುವ ಮಾನಪ್ಪ ವಜ್ಜಲ್‌ ಅವರಿಗೆ ಒಂದು ವೇಳೆ ಟಿಕೆಟ್‌ ತಪ್ಪಿದರೆ ಬೇರೆ ಪಕ್ಷದಿಂದ ಸ್ಪರ್ಧಿಸುವುದನ್ನು ಅಲ್ಲಗಳೆಯಲಾಗದು.

ಈ ಹಿಂದೆ ಎರಡು ಬಾರಿ ಬೇರೆಬೇರೆ ಪಕ್ಷಗಳಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದರು. ಒಟ್ಟಾರೆ ಲಿಂಗಸುಗೂರು ಕ್ಷೇತ್ರದಲ್ಲಿ ಟಿಕೆಟ್‌ ವಿಳಂಬವು ಹಲವು ರಾಜಕೀಯ ವಿಶ್ಲೇಷಣೆಗೆ ಎಡೆಮಾಡಿದೆ.

*
ಮಾತೃಪಕ್ಷ ಕಾಂಗ್ರೆಸ್‌ಗೆ ದ್ರೋಹ ಬಗೆಯುವುದಿಲ್ಲ. ನನಗೆ ಟಿಕೆಟ್‌ ದೊರೆಯದಿದ್ದರೆ ಪರ್ಯಾಯವಾಗಿ ಆಲೋಚಿಸುವುದು ಅನಿವಾರ್ಯ. ಪಕ್ಷ ಕೈ ಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ
–ಡಿ.ಎಸ್‌.ಹೂಲಗೇರಿ, ಲಿಂಗಸುಗೂರು ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT