ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 40 ಅಧಿಕ ಮಳೆ

ಗೊರೆಬಾಳ, ಜಾಲಳ್ಳಿ, ತುರ್ವಿಹಾಳ, ಸಾಲಗುಂದಾದಲ್ಲಿ ಮಳೆ ಕೊರತೆ
Last Updated 18 ಜುಲೈ 2020, 16:23 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಹಂಗಾಮಿನಲ್ಲಿ ವರುಣನ ಕೃಪೆ ಸಮರ್ಪಕವಾಗಿದ್ದು, ಜೂನ್ 1 ರಿಂದ ಜುಲೈ 18 ರವರೆಗೂ ವಾಡಿಕೆ ಮಳೆಗಿಂತ ಶೇ 40 ರಷ್ಟು ಅಧಿಕ ಮಳೆಯಾಗಿದೆ.

ಹವಾಮಾನ ಇಲಾಖೆಯ ಅಂಕಿಅಂಶದ ಪ್ರಕಾರ ಈ ಅವಧಿಯಲ್ಲಿ ಒಟ್ಟು 134 ಮಿಲಿಮೀಟರ್ ವಾಡಿಕೆ ಮಳೆ ಆಗಬೇಕಿತ್ತು. ವಾಸ್ತವದಲ್ಲಿ 179 ಮಿಲಿಮೀಟರ್ ಮಳೆ ಸುರಿದಿದೆ. ಜಿಲ್ಲಾ ಮಟ್ಟದ ಸರಾಸರಿ ಅಧಿಕ ಮಳೆ ಪ್ರಮಾಣಕ್ಕಿಂತಲೂ ಮಸ್ಕಿ ತಾಲ್ಲೂಕಿನಲ್ಲಿ ಶೇ 50 ಹಾಗೂ ಸಿರವಾರ ತಾಲ್ಲೂಕಿನಲ್ಲಿ ಶೇ 81 ರಷ್ಟು ಹೆಚ್ಚು ಮಳೆ ಸುರಿದಿದೆ. ಅದರಲ್ಲೂ ಮಸ್ಕಿಯ ಬಾಗಲೂರು, ಗುಡದೂರು ಮತ್ತು ಸಿರವಾರ, ಮಲ್ಲಟ, ಕವಿತಾಳ ಹೋಬಳಿಗಳಲ್ಲಿ ಅಧಿಕ ಮಳೆ ಬಿದ್ದಿದೆ. ಜಿಲ್ಲೆಯಲ್ಲೆ ದಾಖಲೆ ಪ್ರಮಾಣ 104 ಮಿಲಿಮೀಟರ್ ಮಳೆ ರಾಯಚೂರಿನ ಗಿಲ್ಲೇಸುಗೂರಿನಲ್ಲಿ ದಾಖಲಾಗಿದೆ.

ಜೂನ್ನಲ್ಲಿ ಮಸ್ಕಿ ತಾಲ್ಲೂಕಿನ ಲಿಂಗಸುಗೂರು ಮತ್ತು ಸಿರವಾರದ ಕಲ್ಲೂರು ಹೋಬಳಿ ಎರಡನ್ನು ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲೂ ವಾಡಿಕೆ ಮಳೆ ಬಿದ್ದಿದೆ. ಜುಲೈ 1 ರಿಂದ ಇವರೆಗೂ ಸಿಂಧನೂರು ತಾಲ್ಲೂಕಿನ ಜಾಲಳ್ಳಿ, ಸಾಲಗುಂದಾ, ಗೊರೆಬಾಳ ಹಾಗೂ ತುರ್ವಿಹಾಳ ಹೋಬಳಿಗಳಲ್ಲಿ ಮಾತ್ರ ವಾಡಿಕೆಗಿಂತಲೂ ಶೇ 30 ರಷ್ಟು ಕಡಿಮೆ ಮಳೆಯಾಗಿದೆ.

ಜಿಲ್ಲೆಯಲ್ಲಿ ಜೂನ್ ಸರಾಸರಿ ವಾಡಿಕೆ ಮಳೆ 85 ಮಿಲಿಮೀಟರ್, ವಾಸ್ತವದಲ್ಲಿ 115 ಮಿಲಿಮೀಟರ್ ಶೇ 35 ರಷ್ಟು ಅಧಿಕ ಮಳೆಯಾಗಿದೆ. ಜುಲೈ ಮೂರು ವಾರಗಳಲ್ಲಿ ಸರಾಸರಿ 49 ಮಿಲಿಮೀಟರ್ ವಾಡಿಕೆ ಮಳೆ, ವಾಸ್ತವದಲ್ಲಿ 72 ಮಿಲಿಮೀಟರ್ ಮಳೆಯಾಗಿದೆ. ಎರಡು ತಿಂಗಳು ಸರಾಸರಿ ಶೇ 40 ರಷ್ಟು ಹೆಚ್ಚು ಮಳೆ ಸುರಿದಿದೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಭತ್ತ ಬಿತ್ತನೆ ಮಾಡಲಿರುವ ಶೇ 40 ಪ್ರದೇಶ ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಬಿತ್ತನೆ ಆಗಿದೆ. 3.56 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ ಶೇ 50 ರಷ್ಟು ಜಮೀನುಗಳಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಹತ್ತಿ ಹಾಗೂ ತೊಗರಿ ಬಿತ್ತನೆ ‌ಎಂದಿನಂತೆ ಈ‌ ವರ್ಷವೂ ಅಧಿಕ ಪ್ರಮಾಣದಲ್ಲಿ ಆಗಿದೆ.

ಕಾಲುವೆ ನೀರು ನಿರೀಕ್ಷೆ: ನಾರಾಯಣಪುರ ಜಲಾಶಯ ಹಾಗೂ ತುಂಗಭದ್ರಾ ಜಲಾಶಯಗಳಲ್ಲಿ ನೀರು ಸಂಗ್ರಹ ಇದ್ದರೂ ಸಮರ್ಪಕ ಮಳೆ ಕಾರಣದಿಂದ ಕಾಲುವೆಗಳಿವೆ ಇನ್ನೂ ಹರಿಸಿಲ್ಲ. ಆದರೆ, ಭತ್ತ ಬಿತ್ತನೆ ಮಾಡುವ ಪ್ರದೇಶದ ರೈತರು ಕಾಲುವೆ ನೀರಿಗಾಗಿ ಕಾಯುತ್ತಿದ್ದಾರೆ. ಜುಲೈ 15 ರ ಬಳಿಕ ನೀರು ಹರಿಸುವಂತೆ ರೈತ ಮುಖಂಡರು ಒತ್ತಾಯಿಸುತ್ತಾ ಬಂದಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಪ್ರಕಾರ ಪ್ರಗತಿಯಲ್ಲಿದ್ದು, ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿ ಕಾಲುವೆ ನೀರು ಹರಿಸಲು ಸಿದ್ಧತೆ ಮಾಡಲಾಗುತ್ತಿದೆ.‌ ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜಗಳನ್ನು ಮತ್ತು ರಸಾಯನಿಕ ಗೊಬ್ಬರ ಒದಗಿಸುವ ಕಾರ್ಯವನ್ನು ಕೃಷಿ ಇಲಾಖೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT