ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ: ಸಾಧಾರಣ ಮಳೆ, ಚುರುಕು ಪಡೆದ ಕೃಷಿ ಚಟುವಟಿಕೆ

ಕೆಲವೆಡೆ ತೊಗರಿ ಮರು ಬಿತ್ತನೆಗೆ ವೇಗ
ಮಂಜುನಾಥ ಎನ್.ಬಳ್ಳಾರಿ
Published 19 ಮೇ 2024, 4:44 IST
Last Updated 19 ಮೇ 2024, 4:44 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಆಗಾಗ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕು ಪಡೆದಿವೆ.

ಹತ್ತಿ ಮತ್ತು ತೊಗರಿ ಬಿತ್ತನೆ ಮಾಡಿದ ರೈತರು ಕಳೆ ತೆಗೆಯುವುದು ಮತ್ತು ಮಳೆ ವಿಳಂಬದಿಂದ ಸರಿಯಾಗಿ ನಾಟಿಯಾಗದ ಕಡೆ ಮರು ಬಿತ್ತನೆಯಲ್ಲಿ ತೊಡಗಿದ್ದಾರೆ.

ಕಳೆದ 20 ದಿನಗಳ ಹಿಂದೆ ಬಿತ್ತನೆ ಮಾಡಿದ್ದ ಹತ್ತಿ ಇದೀಗ ಒಂದು ಅಡಿ ಎತ್ತರಕ್ಕೆ ಬೆಳೆದಿದೆ. ಜಿಟಿಜಿಟಿ ಮಳೆ ಸುರಿಯುತ್ತಿರುವ ಕಾರಣ ಕಳೆ ಬೆಳೆಯುತ್ತಿದ್ದು, ರೈತರು ಕಿರು ಕುಂಟೆ ಹೊಡೆದು ಕಳೆ ತೆಗೆಯುತ್ತಿದ್ದ ದೃಶ್ಯ ಕಂಡುಬರುತ್ತಿದೆ.

‘ಮಳೆ ವಿಳಂಬವಾಗಿದ್ದರೂ ಹತ್ತಿ ನಾಟಿಯಾಗಿದೆ. ಇದೀಗ ಮಳೆಯಿಂದ ಜಮೀನು ಹಸಿಯಾಗಿ ಕಸ ಕಾಣಿಸಿಕೊಂಡಿದೆ. ಕಳೆ ತೆಗೆದು ರಸಗೊಬ್ಬರ ಹಾಕಬೇಕಿದೆ’ ಎಂದು ಗೊಲ್ದಿನ್ನಿ ಗ್ರಾಮದ ರೈತ ಹನುಮೇಶ ಹೇಳಿದರು.

‘ಹತ್ತು ದಿನಗಳ ಹಿಂದೆ ತೊಗರಿ ಬಿತ್ತನೆ ಮಾಡಲಾಗಿತ್ತು. ಮಳೆ ಬಾರದ ಕಾರಣ ಬಹುತೇಕ ಐದು ಎಕರೆ ಜಮೀನಿನಲ್ಲಿ ತೊಗರಿ ಮೊಳಕೆ ಒಡೆದಿಲ್ಲ. ಈಗ ಭೂಮಿ ಹಸಿಯಾಗಿದ್ದು ಮರು ನಾಟಿ ಮಾಡುತ್ತಿದ್ದೇವೆ’ ಎಂದು ಹಣಿಗಿ ಗ್ರಾಮದ ರೈತ ಬಸವರಾಜ ಹೇಳಿದರು.

‘ಇನ್ನೂ ಸಾಕಷ್ಟು ಮಳೆಯ ಅಗತ್ಯವಿದೆ. ನೀರು ಇಂಗಿಸಿಕೊಳ್ಳದ ಕೆಲ ಜಮೀನುಗಳಲ್ಲಿ ಮುಂಚಿತವಾಗಿ ಬಿತ್ತನೆ ಮಾಡಿದ ತೊಗರಿ ನಾಟಿಯೇ ಇಲ್ಲ. ಈಗ ಮಳೆ ಬರುತ್ತಿದ್ದು, ಮತ್ತೊಮ್ಮೆ ತೊಗರಿ ಬಿತ್ತನೆ ಮಾಡಿದ್ದೇವೆ. ಬಿತ್ತನೆ ಬೀಜ, ಕೂಲಿ ಕಾರ್ಮಿಕರು ಸೇರಿದಂತೆ ಬರೀ ಬಿತ್ತನೆಗೆ ಪ್ರತಿ ಎಕರೆಗೆ ₹10-₹15 ಸಾವಿರ ಖರ್ಚು ಮಾಡಿದ್ದೇವೆ. ಈಗಲಾದರೂ ಸಮೃದ್ಧ ಮಳೆಯಾದರೆ ಅನುಕೂಲವಾಗುತ್ತದೆ’ ಎಂದು ರೈತ ಹಂಪಣ್ಣ ಹೇಳಿದರು.

ಕವಿತಾಳ ಸಮೀಪದ ಗೊಲ್ದಿನ್ನಿ ಹತ್ತಿರ ಶನಿವಾರ ಹತ್ತಿ ಬೆಳೆಯಲ್ಲಿ ರೈತ ಕಳೆ ನಿವಾರಣೆಗೆ ಕಿರು ಕುಂಟೆ ಹೊಡೆದರು
ಕವಿತಾಳ ಸಮೀಪದ ಗೊಲ್ದಿನ್ನಿ ಹತ್ತಿರ ಶನಿವಾರ ಹತ್ತಿ ಬೆಳೆಯಲ್ಲಿ ರೈತ ಕಳೆ ನಿವಾರಣೆಗೆ ಕಿರು ಕುಂಟೆ ಹೊಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT