ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಪಕ್ಷಗಳಲ್ಲಿ ಸಮನ್ವಯ ಕೊರತೆ

ಮಾನ್ವಿ: ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ಪ್ರತ್ಯೇಕ ಚುನಾವಣಾ ಸಭೆ
ಬಸವರಾಜ ಭೋಗಾವತಿ
Published 28 ಏಪ್ರಿಲ್ 2024, 5:08 IST
Last Updated 28 ಏಪ್ರಿಲ್ 2024, 5:08 IST
ಅಕ್ಷರ ಗಾತ್ರ

ಮಾನ್ವಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳಿಂದ ಪ್ರತ್ಯೇಕವಾಗಿ ಪ್ರಚಾರ ಮತ್ತು ಕಾರ್ಯಕರ್ತರ ಸಭೆಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.

ಲೋಕಸಭಾ ಚುನಾವಣೆಯ ಮತದಾನ ದಿನ ಸಮೀಪಿಸುತ್ತಿದ್ದರೂ ತಾಲ್ಲೂಕಿನಲ್ಲಿ ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಜಂಟಿಯಾಗಿ ಅಭ್ಯರ್ಥಿ ಪರವಾಗಿ ಪ್ರಚಾರ, ಮತಯಾಚನೆಯಲ್ಲಿ ತೊಡಗದಿರುವುದು ಅಚ್ಚರಿ ಮೂಡಿಸಿದೆ.

ಜೆಡಿಎಸ್ ತಾಲ್ಲೂಕು ಘಟಕದ ವತಿಯಿಂದ ಏ.16ರಂದು ಮಾನ್ವಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶಿವರಾಜ ಪಾಟೀಲ ಹಾಗೂ ಬಿಜೆಪಿಯ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎನ್.ಶಂಕ್ರಪ್ಪ ಹಾಗೂ ಮತ್ತಿತರರು ಭಾಗವಹಿಸಿದ್ದರು.

ಏ.25ರಂದು ಮಾನ್ವಿಯಲ್ಲಿ ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಬಿಜೆಪಿಯ ಮಾಜಿ ಶಾಸಕ ಗಂಗಾಧರ ನಾಯಕ ಸೇರಿ ಇತರರು ಭಾಗವಹಿಸಿದ್ದರು. ಆದರೆ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿರಲಿಲ್ಲ.

ಚುನಾವಣಾ ಪ್ರಚಾರದ ಅಂಗವಾಗಿ ಬಿಜೆಪಿ ಮಾನ್ವಿ ಮಂಡಲದ ವತಿಯಿಂದ ಮಾನ್ವಿ, ಹಿರೇಕೊಟ್ನೆಕಲ್, ನೀರಮಾನ್ವಿ, ಪೋತ್ನಾಳ ಪಟ್ಟಣಗಳಲ್ಲಿ ಬಹಿರಂಗ ಪ್ರಚಾರ ಸಭೆಗಳನ್ನು ನಡೆಸಲಾಗಿದ್ದು, ಈ ಸಭೆಗಳಲ್ಲಿ ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರ ಗೈರು ಎದ್ದು ಕಾಣುತ್ತಿತ್ತು. ಏ.25ರಂದು ಮಾನ್ವಿಯಲ್ಲಿ ನಡೆದ ಬಿಜೆಪಿ ಬಹಿರಂಗ ಪ್ರಚಾರ ಸಭೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಸೇರಿದಂತೆ ಬಿಜೆಪಿ ಪಕ್ಷದ ಮಾಜಿ ಸಂಸದರು, ಮಾಜಿ ಶಾಸಕರು, ಪದಾಧಿಕಾರಿಗಳು ಹಾಗೂ ಹಿರಿಯ ಮುಖಂಡರು ಮಾತ್ರ ಭಾಗವಹಿಸಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲ ಎದುರಾಳಿಗಳಾಗಿದ್ದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು ಈ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಅಭ್ಯರ್ಥಿ ಪರವಾಗಿ ಹೆಚ್ಚಿನ ಮತಗಳಿಕೆಗೆ ಅನುಕೂಲ ಎಂಬುದು ಎರಡೂ ಪಕ್ಷಗಳ ಕಾರ್ಯಕರ್ತರ ಅಭಿಪ್ರಾಯ.

ಬಿಜೆಪಿ-ಜೆಡಿಎಸ್ ಪಕ್ಷಗಳ ಸ್ಥಳೀಯ ಮುಖಂಡರ ನಡುವೆ ಸಮನ್ವಯ ಮೂಡಿಸುವ ನಿಟ್ಟಿನಲ್ಲಿ ಪಕ್ಷಗಳ ವರಿಷ್ಠರು ಕೈಗೊಳ್ಳುವ ತೀರ್ಮಾನದ ಬಗ್ಗೆ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ.

ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ
ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT