ಶನಿವಾರ, ಜನವರಿ 28, 2023
14 °C
3 ವಾರ್ಡ್‌ಗಳಿದ್ದರೂ ಸೌಲಭ್ಯಗಳ ಕೊರತೆ

ಗೌಡೂರು: ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆ, ಮೂಲಸೌಕರ್ಯ ಮರೀಚಿಕೆ

ಅಮರೇಶ ನಾಯಕ Updated:

ಅಕ್ಷರ ಗಾತ್ರ : | |

Prajavani

ಹಟ್ಟಿ ಚಿನ್ನದಗಣಿ: ಇಲ್ಲಿನ ಗೌಡೂರು ಗ್ರಾಮವು ಅಮೃತ ಯೋಜನೆಗೆ ಆಯ್ಕೆಯಾಗಿದ್ದರೂ ಗ್ರಾಮದಲ್ಲಿ ಮಾತ್ರ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಸ್ಥಳೀಯರಿಗೆ ಮೂಲಸೌಕರ್ಯಗಳು ಮರೀಚಿಕೆಯಾಗಿವೆ.

ಗೌಡೂರು ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆ ಇದೆ. 3 ವಾರ್ಡ್‌ಗಳಿವೆ. 18 ಜನ ಸದಸ್ಯರಿದ್ದಾರೆ. ಆದರೆ, ಕನಿಷ್ಠ ಮೂಲಸೌಕರ್ಯಗಳಿಲ್ಲದ ಗ್ರಾಮಸ್ಧರು ಹೈರಾಣಾಗಿದ್ದಾರೆ. ಇರುವ ಕನಿಷ್ಠ ಸೌಲಭ್ಯಗಳಲ್ಲಿಯೇ ಬದುಕು ನಡೆಸುವ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಇಲ್ಲಿನ ಜನರು.

ಗ್ರಾಮದಿಂದ ಪಟ್ಟಣಕ್ಕೆಸಕಾಲಕ್ಕೆ ಸಾರಿಗೆ ಬಸ್ ವ್ಯವಸ್ಧೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಖಾಸಗಿ ವಾಹನಗಳಲ್ಲಿ ಹೆಚ್ಚು ಹಣ ಕೊಟ್ಟು ಓಡಾಡುತ್ತಾರೆ. ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಇಲ್ಲದಂತಾಗಿದೆ. ಯಂತ್ರಗಳಸರಿಯಾಗಿ ಕಾರ್ಯನಿರ್ವಹಿಸದೇ ಸ್ಧಗಿತಗೊಂಡಿದೆ.

ಚರಂಡಿ ವ್ಯವಸ್ಧೆ ಇಲ್ಲದೆ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದ್ದು, ಸ್ಧಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಶಾಲೆ ಪಕ್ಕದಲ್ಲಿ ತಿಪ್ಪಿಗುಂಡಿ ಇದ್ದು ಸ್ವಚ್ಛತೆ ಆದ್ಯತೆ ನೀಡಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯದಿಂದ ಚರಂಡಿ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ, ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಕೆಮ್ಮು ನೆಗಡಿ, ಜ್ವರ, ಸಣ್ಣ ಪುಟ್ಟು ರೋಗಗಳಿಗೂ ಹಟ್ಟಿ ಪಟ್ಟಣ ಇಲ್ಲವೆ, ಗುರುಗುಂಟಾ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇದ್ದು, ಮಕ್ಕಳು ಹಿರಿಯರಿಗೆ ರಾತ್ರಿ ಸಮಯದಲ್ಲಿ ಆರೋಗ್ಯ ತೊಂದರೆ ಉಂಟಾದರೆ, ತಕ್ಷಣ ಆಸ್ಪತ್ರೆಗೆ ಹೋಗಲು ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ಹಾವು ಕಚ್ಚಿದರಂತೂ, ಅವರಿಗೆ ತಕ್ಷಣ ಪ್ರಥಮ ಚಿಕಿತ್ಸೆ ಸಿಗದೇ ಅವರ ಪ್ರಾಣಹಾನಿಯಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಸ್ಥಳೀಯರು.

ಪಶು ಆಸ್ಪತ್ರೆಗಳಿಲ್ಲ. ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ರೈತರು ಪರದಾಡುವ ಸ್ಥಿತಿ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆ ನಿರ್ಮಾಣಕ್ಕೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದಿಗೂ ಕಾರ್ಯಗತವಾಗಿಲ್ಲ. 

ಜೆಜೆಎಂ ಯೋಜನೆ ಅಡಿಯಲ್ಲಿ ಪೈಪ್‌ಲೈನ್‌ ಅಳವಡಿಸಲು ರಸ್ತೆ ಅಗೆದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಸರ್ಕಾರದ ಅನುದಾನದಲ್ಲಿ ಕುಡಿವ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿ ಕೈಗೊಂಡರೂ ಅದು ಕೂಡ ಪೂರ್ಣವಾಗಿ ಮುಗಿದಿಲ್ಲ ಎಂದು ರೈತ ಹೋರಾಟಗಾರ ಗ್ರಾಮಸ್ಧ ಮಲ್ಲಣ್ಣ ಹಾಗೂ ಸಿದ್ದೇಶ ಮಾಸರೆಡ್ಡಿ ದೂರುತ್ತಾರೆ.

ಶೌಚಾಲಯವಿಲ್ಲ: ಮಹಿಳೆಯರು ಶೌಚಕ್ಕೆ ಇಂದಿಗೂ ಬಯಲು ಪ್ರದೇಶವನ್ನೆ ಅವಲಂಬಿಸಿದ್ದಾರೆ. ಮನೆಯಲ್ಲಿ ಸ್ಧಳವಕಾಶದ ಕೊರತೆಯಿಂದ ಶೌಚಾಲಯ ನಿರ್ಮಿಸಿಕೊಳ್ಳದ ಮಹಿಳೆಯರ ಸಮಸ್ಯೆಯನ್ನು ಯಾರೂ ಕೇಳುವುದಿಲ್ಲ ಎನ್ನುತ್ತಾರೆ ಗ್ರಾಮದ ಅಮರಮ್ಮ, ಗುಂಡಪ್ಪ ಲಚಮವ್ವ. 

ಫಲಾನುಭವಿಗಳ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಅನುದಾನವನ್ನು ಸರ್ಕಾರ ಬಿಡುಗಡೆಗೆ ಮಾಡಿದರೂ ಸ್ಥಳೀಯ ಅಧಿಕಾರಿಗಳು ಆ ಹಣವನ್ನು ಯಾವುದಕ್ಕೆ ಬಳಸಿದ್ದಾರೆ ಎನ್ನುವುದನ್ನೂ ತಿಳಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು