ಸೋಮವಾರ, ನವೆಂಬರ್ 30, 2020
26 °C
ಮೂರು ಎಕರೆಯಲ್ಲಿ ತೋಟಗಾರಿಕೆ ಬೆಳೆ ಬೆಳೆದ ರೈತ ಸುಧನ್ ಸಿಕ್ದರ್

ಸಿಂಧನೂರು: ಬದುಕಿಗೆ ಆಸರೆಯಾದ ಎಲೆಬಳ್ಳಿ

ಡಿ.ಎಚ್.ಕಂಬಳಿ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ತಾಲ್ಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳತ್ತ ರೈತರು ಒಲವು ತೋರಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಅದರಲ್ಲೂ ಪುನರ್ವಸತಿ ಕ್ಯಾಂಪ್ 3 ರಲ್ಲಿ ಎಲೆಬಳ್ಳಿಯನ್ನೇ ರೈತರು ತಮ್ಮ ಬದುಕಿಗೆ ಆಸರೆ ಮಾಡಿಕೊಂಡಿರುವುದು ವಿಶೇಷವಾಗಿದೆ.

ಕೊಲ್ಕತ್ತಾದಿಂದ ಕೇವಲ 10 ಎಲೆಬಳ್ಳಿಯನ್ನು ತಂದು ನಾಟಿ ಮಾಡಿದ್ದ ಸುಧನ್ ಸಿಕ್ದರ್ ಅದೇ ಬಳ್ಳಿಯಿಂದಲೇ ಈಗ 10 ಗುಂಟೆಗೂ ಹೆಚ್ಚು ಜಮೀನಿನಲ್ಲಿ ಎಲೆಬಳ್ಳಿ ವೃದ್ದಿಸಿದ್ದಾರೆ.

₹30ಕ್ಕೆ ಒಂದರಂತೆ ₹ 300 ಖರ್ಚು ಮಾಡಿದ್ದ ಅವರೀಗ ಪ್ರತಿನಿತ್ಯ 400 ಎಲೆ ಮಾರಾಟವಾಗುತ್ತಿದ್ದು, ಅದರಿಂದ ₹ 200 ಸಂಪಾದಿಸುತ್ತಿದ್ದಾರೆ. ಕಳೆದ ವರ್ಷದಿಂದಲೇ ಇಳುವರಿ ಪ್ರಾರಂಭವಾಗಿದ್ದು, ಇದೇ ರೀತಿ 15 ವರ್ಷದವರೆಗೆ ಮುಂದುವರೆಯಲಿದೆ ಎನ್ನುವುದು ಸಿಕ್ದರ್ ಅವರ ವಿಶ್ವಾಸ.

ಕೇವಲ 10 ಗುಂಟೆ ಜಮೀನಿನಲ್ಲಿ ತಿಂಗಳಿಗೆ ₹ 6 ಸಾವಿರ ಗಳಿಸುವ ಈ ರೈತ ಎಲೆಬಳ್ಳಿಗೆ ತಿಪ್ಪೆ ಗೊಬ್ಬರ, ತಮ್ಮ ತೋಟದಲ್ಲಿಯೇ ಸಿಗುವ ವಿವಿಧ ಮರಗಳ ಕಟ್ಟಿಗೆಗಳಿಂದ ಒಂದಷ್ಟು ಚಪ್ಪರ ಹಾಕಿದ್ದು ಹೊರತು ಪಡಿಸಿದರೆ ಏನು ಖರ್ಚು ಮಾಡಿಲ್ಲ. ಅದಕ್ಕೆ ನೀರಾವರಿ ಅಳವಡಿಸಲಾಗಿದ್ದು, ಶೇ 90 ರಷ್ಟು ಹಣವನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿ ಗಳೇ ನೆರವು ನೀಡಿದ್ದಾರೆ ಎಂದರು.

ಸುಧನ್ ಸಿಕ್ದಾರ್ ಅವರಿಗೆ ಒಟ್ಟು 3 ಎಕರೆ ಜಮೀನಿದ್ದು, ಅದರಲ್ಲಿ ಬಾಳೆ, ಪೇರಲ, ಪಪ್ಪಾಯಿ, ಸೀತಾಫಲ, ತೆಂಗು, ಮಾವು, ನುಗ್ಗಿಕಾಯಿ, ಕರಿಬೇವು, ನಿಂಬೆ, ಬಸಳೆಸೊಪ್ಪು, ಬೀನ್ಸ್, ಬದನೆಕಾಯಿ, ನವಲಕೋಸ್, ಮೂಲಂಗಿ, ಕೋತಂಬರಿ, ಪುದಿನಾ ಹೀಗೆ ಹಲವು ವಿವಿಧ ಹಣ್ಣು ಮತ್ತು ಸೊಪ್ಪಿನ ಗಿಡಗಳನ್ನು ಹಾಕಿದ್ದಾರೆ. ಇದೇ ಜಮೀನಿನಲ್ಲಿಯೇ ಕೆರೆ ತೋಡಲಾಗಿದ್ದು, ಅದರಲ್ಲಿ ಸುಮಾರು ಒಂದು ಸಾವಿರ ಮೀನು ಸಾಕಣೆ ಮಾಡಲಾಗಿದೆ. ಹಣ್ಣು, ತರಕಾರಿ, ಸೊಪ್ಪು ಹೀಗೆ ತೋಟದಲ್ಲಿ ಬೆಳೆದ ವಿವಿಧ ಉತ್ಪಾದನೆಗಳನ್ನು ಪ್ರತಿನಿತ್ಯ ಅದೇ ಕ್ಯಾಂಪಿನಲ್ಲಿ ನಡೆಯುವ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಅದರಿಂದ ಪ್ರತಿನಿತ್ಯ ₹ 1 ಸಾವಿರ ಲಭಿಸುತ್ತಿದೆ. ಈ ಹಣದಿಂದ ಸುಲಭವಾಗಿ ಸಂಸಾರ ನಡೆಸುವುದಾಗಿ ಅತ್ಯಂತ ಸಂತೋಷದಿಂದ ಸುಧನ್ ಸಿಕ್ದರ್ ಹೇಳುತ್ತಾರೆ.

********

ತೋಟಗಾರಿಕೆ ಮಾಡಲು ಹನಿನೀರಾವರಿ ಮತ್ತು ಟ್ರ್ಯಾಫ್‍ಗಳನ್ನು ಇಲಾಖೆಯಿಂದ ಒದಗಿಸಿದ್ದು, ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಕಡಿಮೆ ಭೂಮಿಯಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ.
- ಬಿ.ಟಿ.ನಂದಿಬೇವೂರು, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ಮೂರು ಎಕರೆ ಭೂಮಿಯಲ್ಲಿ ತೋಟಗಾರಿಕೆ ಬೆಳೆ ಬೆಳೆದ ಸುಧನ್ ಸಿಕ್ದರ್ ಅವರು ಇತರ ರೈತರಿಗೆ ಮಾದರಿಯಾಗಿದ್ದಾರೆ. ಇತರ ರೈತರು ತೋಟಗಾರಿಕೆಯತ್ತ ಗಮನ ಹರಿಸಿದರೆ, ಹಣಕಾಸು ಸಂಸ್ಥೆಗಳು ನೆರವು ನೀಡಲು ಮುಂದೆ ಬರುತ್ತವೆ.
-ಬುದ್ದೆಪ್ಪ ನಿವೃತ್ತ, ವ್ಯವಸ್ಥಾಪಕರು ಸಿಂಡಿಕೇಟ್ ಬ್ಯಾಂಕ್ ಸಿಂಧನೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು