ಶುಕ್ರವಾರ, ಅಕ್ಟೋಬರ್ 22, 2021
29 °C
ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಪ್ರಾಧ್ಯಾಪಕಿ ವಸುಂಧರಾ ಪಾಟೀಲ ಅಭಿಮತ

ಮಹಿಳಾ ದೌರ್ಜನ್ಯ ತಡೆಗೆ ಕಾನೂನು ಅರಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಲೈಂಗಿಕ ಕಿರುಕುಳ ಹಾಗೂ ಇತರೆ ದೌರ್ಜನ್ಯಗಳಿಂದ ರಕ್ಷಣೆ ಪಡೆದುಕೊಳ್ಳಬೇಕಾದರೆ ಮಹಿಳೆಯರಿಗಾಗಿ ಇರುವ ಕಾನೂನಿನ ಅರಿವು ಹೊಂದಬೇಕಾದುದು ಅತ್ಯವಶ್ಯ ಎಂದು ಎಂಸಿಎಬಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ವಸುಂಧರಾ ಪಾಟೀಲ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಪನಾ ಚಾವ್ಲಾ ಮಹಿಳಾ ಕೇಂದ್ರ, ಲೈಂಗಿಕ ಕಿರುಕುಳ ತಡೆಗಟ್ಟುವ ಕೇಂದ್ರ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಗುರುವಾರ ಏರ್ಪಡಿಸಿದ್ದ 'ಹೆಣ್ಣುಮಕ್ಕಳ ಮೇಲೆ ಆಗುವ ಲೈಂಗಿಕ ಕಿರುಕುಳಗಳನ್ನು ತಡೆಗಟ್ಟುವ ಬಗೆ' ವಿಷಯದ ಮೇಲೆ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಪರಾಧಗಳು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಯಾವುದೇ ಸಂದರ್ಭದಲ್ಲಿ ಕಿರುಕುಳ ಎದುರಾದರೆ ಸಂಬಂಧಪಟ್ಟ ರಕ್ಷಣೆ ಕೊಡುವ ಸಮಿತಿಗಳಿಗೆ ದೂರು ಕೊಡುವುದರ ಮುಖಾಂತರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಮಹಿಳೆಯರ ರಕ್ಷಣೆಗಾಗಿ ಸರ್ಕಾರ ರೂಪಿಸಿರುವ ಕಾನೂನುಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದರ ಮೂಲಕ ಸ್ವಯಂ ರಕ್ಷಣೆಯನ್ನು ಹೊಂದಬೇಕು ಎಂದು ಹೇಳಿದರು.

ಕಲ್ಪನಾ ಚಾವ್ಲಾ ಕೇಂದ್ರದ ಸಂಚಾಲಕಿ ಪುಷ್ಪ ಅವರು ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಉನ್ನತವಾಗಿದ್ದರೂ ಕಾಲ ಬದಲಾದಂತೆ ಹೆಣ್ಣನ್ನು ಭೋಗದ ವಸ್ತುವಾಗಿ ನೋಡುವ ಕೀಳು ಮನಸ್ಥಿತಿ ಬೆಳೆಯುತ್ತಿದೆ. ನಮ್ಮತನವನ್ನು ಮರೆತು ನಾವು ಪರಕೀಯ ಸಂಸ್ಕೃತಿಗಳಿಗೆ ಮಾರುಹೋಗುತ್ತಿರುವುದೇ ಇದಕ್ಕೆಲ್ಲ ಕಾರಣ ಎಂದು ತಿಳಿಸಿದರು.

ಅಧ್ಯಕ್ಷ ಸ್ಥಾನ ವಹಿಸಿದ್ದ ಪ್ರಾಂಶುಪಾಲ ಆರ್.ಮಲ್ಲನಗೌಡ ಮಾತನಾಡಿ, ವಿದ್ಯಾರ್ಥಿನಿಯರಿಗೆ ಯಾವುದೇ ಕಿರುಕುಳ ಅಥವಾ ತೊಂದರೆಯಾದರೆ ನಿರ್ಭಯವಾಗಿ ದೂರನ್ನು ಸಲ್ಲಿಸುವುದರ ಮುಖಾಂತರ ತಮ್ಮ ಹಕ್ಕು ಮತ್ತು ರಕ್ಷಣೆಯನ್ನು ಪಡೆದುಕೊಳ್ಳುವಂತಾಗಬೇಕು. ಹೆಣ್ಣುಮಕ್ಕಳಿಗಾಗೇ ಅನೇಕ ರಕ್ಷಣಾ ಕಾನೂನುಗಳಿವೆ, ಹಾಗಾಗಿ ಹೆದರಿಕೊಂಡು ಬದುಕುವ ಅವಶ್ಯಕತೆ ಇಲ್ಲ ಕಿವಿಮಾತು ಹೇಳಿದರು.

ಐಕ್ಯೂಎಸಿ ಸಂಚಾಲಕ ಡಾ. ಮಹಾಂತೇಶ ಅಂಗಡಿ, ಸಹ ಸಂಚಾಲಕರಾದ ಇಶ್ರತ್ ಬೇಗಂ, ಕ್ಯಾಶ್ ಸಂಚಾಲಕಿ ಸ್ವಪ್ನ, ಸಹಾಯಕ ಪ್ರಾಧ್ಯಾಪಕರಾದ ಪದ್ಮಾವತಿ, ಸುಜಾತ ಮಾಕಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.