ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಮೋಡಗಳಿಂದ ಮರೆಯಾದ ಸೂರ್ಯ

ಮಳೆ ಸುರಿಯುವ ಸಾಧ್ಯತೆಯಿಂದ ಆತಂಕಗೊಂಡ ರೈತರು
Last Updated 6 ಜನವರಿ 2021, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಹವಾಮಾನ ದಿಢೀರ್‌ ಬದಲಾವಣೆಯಾಗಿ ತಂಪು ಆವರಿಸಿದ್ದರಿಂದ ಬುಧವಾರ ದಿನಪೂರ್ತಿ ಸೂರ್ಯ ದರ್ಶನ ಆಗಲೇ ಇಲ್ಲ!

ಸೂರ್ಯನು ಮೋಡಗಳಿಂದ ಮರೆಯಾಗಿದ್ದರಿಂದ ಬಿಸಿಲಿನ ಕಿರಣಗಳು ಭೂಮಿಗೆ ತಲುಪದೆ ತಂಪು ಆವರಿಸಿಕೊಂಡಿತ್ತು. ಬೆಳಗಿನ ಜಾವ ಕೆಲವು ಕಡೆಗಳಲ್ಲಿ ಅಲ್ಪಕಾಲ ತುಂತುರು ಮಳೆ ಕೂಡಾ ಸುರಿಯಿತು. ಚಳಿ ಹಾಗೂ ಮಳೆ ಎರಡೂ ಇದ್ದುದರಿಂದ ಜನರು ಮೈಮುದುರಿಕೊಂಡು ಮನೆಯಿಂದ ಹೊರಬರದೆ ಉಳಿದುಕೊಂಡಿದ್ದರು. ದಿನವಿಡೀ ಶಿತಗಾಳಿಯ ಬಾಧೆ ಮುಂದುವರಿದಿತ್ತು.

ಮುಂಗಾರಿನಲ್ಲಿ ಅತಿವೃಷ್ಟಿಯ ಸಂಕಷ್ಟ ಅನುಭವಿಸಿದ್ದ ರೈತರು, ಹಿಂಗಾರಿನ ಬೆಳೆಯಾದರೂ ಕೈ ಹಿಡಿಯುತ್ತದೆ ಎನ್ನುವ ನಿರೀಕ್ಷೆಯೊಂದಿಗೆ ಕಡಲೆ, ಜೋಳ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಸದ್ಯಕ್ಕೆ ಬೆಳೆಗಳಿಗೆ ಚಳಿಗಾಲದ ಚಳಿಯೇ ಸಾಕಾಗುತ್ತದೆ. ಇದೀಗ ರೈತರಲ್ಲಿ ಮಳೆ ಬೀಳುವ ಆತಂಕ ಆವರಿಸಿಕೊಂಡಿದ್ದು,ಮಳೆಯಾದರೆ ಬೆಳೆಗಳು ಹಾನಿ ಆಗುತ್ತವೆ ಎಂಬುದು ರೈತರು ಅಳಲು.

ದೇವದುರ್ಗ ತಾಲ್ಲೂಕು ಹಾಗೂ ಸಿರವಾರ ತಾಲ್ಲೂಕಿನ ಬಹಳಷ್ಟು ಕಡೆಗಳಲ್ಲಿ ಮೆಣಸಿನಕಾಯಿ ಕೊಯ್ಲು ಮಾಡಿರುವುದನ್ನು ಬಯಲಿನಲ್ಲಿ ಒಣಹಾಕಿದ್ದಾರೆ. ಬಿಸಿಲು ಸಮರ್ಪಕವಾಗಿದ್ದರೆ ಮೆಣಸಿನಕಾಯಿ ಒಣಗುತ್ತದೆ. ಅಲ್ಲದೆ, ಭತ್ತ ಕೊಯ್ಲು ಮಾಡಿಕೊಂಡಿರುವುದು ಜಮೀನುಗಳಲ್ಲೇ ಇದೆ. ಮಳೆ ಸುರಿದರೆ ಅಂದುಕೊಂಡಿದ್ದೆಲ್ಲ ತಲೆಕೆಳಗಾಗುತ್ತದೆ. ತೊಗರಿ ಬೆಳೆಯು ಕೊಯ್ಲು ಹಂತದಲ್ಲಿದ್ದು, ಮಳೆನೀರಿನಲ್ಲಿ ತೊಯ್ದರೆ ಕಾಳು ಬಣ್ಣ ಕಳೆದುಕೊಳ್ಳುತ್ತದೆ; ಇದರಿಂದ ಯೋಗ್ಯ ದರ ಸಿಗುವುದಿಲ್ಲ. ಕಡಲೆಗಿಡ ಹೂವು ಬಿಟ್ಟಿದ್ದು, ಕಾಯಿ ಕಟ್ಟುವ ಹಂತದಲ್ಲಿದೆ. ಈಗ ಮಳೆಯಾದರೆ ಹೂವು ಉದುರಿಹೋಗುತ್ತದೆ. ಅಲ್ಲದೆ, ವ್ಯಾಪಕವಾಗಿ ಬೆಳೆದಿರುವ ಜೋಳವು ಮಳೆಯಿಂದಾಗಿ ತೆನೆ ಕಟ್ಟುವುದಿಲ್ಲ. ಬೆಳೆಯೆಲ್ಲವೂ ಕುಂಠಿತವಾಗುತ್ತದೆ. ಅಕಾಲಿಕ ಮಳೆಯಿಂದಾಗಿ ಬೆಳೆಗಳಲ್ಲಿ ಹುಳುಗಳ ಕಾಟ ವಿಪರೀತವಾಗುತ್ತದ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಹವಾಮಾನ ಮುನ್ಸೂಚನೆ ಪ್ರಕಾರ ಗುರುವಾರವೂ ಅಲ್ಲಲ್ಲಿ ತುಂತುರು ಮಳೆ ಬೀಳುವ ಸಾಧ್ಯತೆ ಇದೆ. ಈಗಾಗಲೇ ಕೆಲವು ಬೆಳೆಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಮಳೆಯಿಂದಾಗಿ ಸಮಸ್ಯೆ ಉಲ್ಭಣಿಸಬಹುದು. ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಈಚೆಗೆ ಹಲವು ಸಲಹೆಗಳನ್ನು ನೀಡಲಾಗಿದೆ. ತೇವಾಂಶ ಕಾಯ್ದುಕೊಳ್ಳುವುದಕ್ಕಾಗಿ ಬೆಳೆಗಳಲ್ಲಿ ಎಡೆ–ಕುಂಟೆ ಹೊಡೆಯುವುದು ಮತ್ತು ಕಸದ ಹೊದಿಕೆ ಮಾಡಿಕೊಳ್ಳುವುದಕ್ಕೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

‘ಎಲ್ಲ ಕಡೆಗಳಲ್ಲಿ ಕೋವಿಡ್‌ ಆತಂಕ ಇದ್ದರೂ ರೈತರು ಕೃಷಿ ಮಾಡುವುದನ್ನು ನಿಲ್ಲಿಸಿಲ್ಲ. ಈ ಕಾರಣದಿಂದ ಎಲ್ಲರಿಗೂ ಸರಿಯಾಗಿ ಆಹಾರ ಸಿಗುತ್ತಿದೆ. ಪ್ರಕೃತಿಯು ರೈತರೊಂದಿಗೆ ಸಹಕರಿಸುವುದು ತುಂಬಾ ಮುಖ್ಯ. ಮುಂಗಾರಿನಲ್ಲಿ ಅತಿಯಾದ ಮಳೆ ಸುರಿದರೂ ತಕ್ಕಮಟ್ಟಿಗೆ ಹತ್ತಿ ಹಾಗೂ ಭತ್ತದ ಬೆಳೆಗಳು ಕೈ ಸೇರಿವೆ. ಇದರಿಂದ ಆರ್ಥಿಕವಾಗಿ ಸ್ವಲ್ಪ ಚೇತರಿಕೆ ಬಂದಿದೆ. ಹಿಂಗಾರು ಬೆಳೆಗಳು ಹಾನಿಯಾದರೆ, ಮುಂಗಾರಿನಲ್ಲಿ ಬಂದಿದ್ದ ಲಾಭವೆಲ್ಲ ಕೈಬಿಟ್ಟು ಹೋಗುತ್ತದೆ. ಎಲ್ಲವೂ ಪ್ರಕೃತಿಯನ್ನು ಅವಲಂಬಿಸಿದೆ’ ಎಂದು ಲಿಂಗಸುಗೂರು ತಾಲ್ಲೂಕು ಅಮಿನಗಡ ರೈತ ದೇವಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT