ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು | 'ನೂತನ ಕಮಿಟಿಗೆ ಅಧಿಕಾರ ಮಹತ್ವದ ಆದೇಶ'

Published 7 ಜುಲೈ 2024, 16:19 IST
Last Updated 7 ಜುಲೈ 2024, 16:19 IST
ಅಕ್ಷರ ಗಾತ್ರ

ಲಿಂಗಸುಗೂರು: ‘ತಾಲ್ಲೂಕಿನ ಮುದಗಲ್‌ ಪಟ್ಟಣದ ಹುಸೇನಿ ಆಲಂ ಆಶೂರ್‌ ಖಾನಾ ನೂತನ ಸಮಿತಿಯು ಮೊಹರಂನ ಸಾಂಪ್ರದಾಯಿಕ ಆಚರಣೆ ನಡೆಸಲು ಅಧಿಕಾರ ಹೊಂದಿದೆ’ ಎಂದು ಉಪ ವಿಭಾಗೀಯ ದಂಡಾಧಿಕಾರಿ ಶಿಂಧೆ ಅವಿನಾಶ ಸಂಜೀವನ್ ಆದೇಶ ಹೊರಡಿಸಿದ್ದಾರೆ.

ಭಾನುವಾರ ಆದೇಶ ಹೊರಡಿಸಿದ ದಂಡಾಧಿಕಾರಿಗಳು, ‘ನೂತನ ಸಮಿತಿ ಅಧ್ಯಕ್ಷ ಎಸ್.ಎ.ನಯೀಮ್ ಜುನೈದಿ ಅವರಿಗೆ ಹಳೆಯ ಸಮಿತಿ ಅಧ್ಯಕ್ಷ ಅಮೀರಬೇಗ್ ಉಸ್ತಾದ್‌ ಹಾಗೂ ಪದಾಧಿಕಾರಿಗಳು ಭಾನುವಾರವೇ ಅಧಿಕಾರ ಹಸ್ತಾಂತರಿಸಬೇಕು. ಅಧಿಕಾರ ಹಸ್ತಾಂತರ ಮಾಡುವಲ್ಲಿ ವಿಫಲರಾದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಹಳೆಯ ಸಮಿತಿಯನ್ನು 2020ರ ಸೆ‍ಪ್ಟೆಂಬರ್‌ ತಿಂಗಳಲ್ಲಿ ರಾಜ್ಯ ವಕ್ಫ್ ಬೋರ್ಡ್ ಮಂಡಳಿ ನೇಮಿಸಿ ಆದೇಶ ಹೊರಡಿಸಿತ್ತು. ಈ ಸಮಿತಿ ಮುಂದುವರಿಸಿದ ಆದೇಶವಿಲ್ಲ. ಹೀಗಾಗಿ ಹಳೆಯ ಸಮಿತಿಯು ಅಸ್ತಿತ್ವದಲ್ಲಿ ಇಲ್ಲವೆಂದೇ ಅರ್ಥವಾಗುತ್ತದೆ. ಹೀಗಾಗಿ ರಾಜ್ಯ ವಕ್ಫ್ ಮಂಡಳಿಯು 2024ರ ಜೂನ್ ತಿಂಗಳಲ್ಲಿ ಹುಸೇನಿ ಆಲಂ ಆಶೂರ ಖಾನಾ ಕಮಿಟಿಗೆ ನೂತನ ಅಧ್ಯಕ್ಷ, ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ. ಕಾರಣ ಮೊಹರಂ ಆಚರಣೆ ಭಾನುವಾರ ಆರಂಭವಾಗುತ್ತಿರುವುದನ್ನು ಅರ್ಜಿದಾರರು ಮತ್ತು ಪ್ರತಿವಾದಿಗಳು ಒಪ್ಪಿದ್ದರಿಂದ ಈ ಆದೇಶ ಪ್ರಕಾರ ಹಳೆಯ ಸಮಿತಿಯವರು ತಕ್ಷಣವೇ ಅಧಿಕಾರ ಹಸ್ತಾಂತರಿಸಬೇಕು ಎಂದು ಸೂಚಿಸಲಾಗಿದೆ.

ಹಿನ್ನೆಲೆ: ‘ಮುದಗಲ್ ಹುಸೇನಿ ಆಲಂ ಆಶೂರ್‌ ಖಾನಾ ಆಡಳಿತಕ್ಕೆ 2020ರ ಸೆಪ್ಟೆಂಬರ್‌ನಲ್ಲಿ ಹಳೆಯ ಸಮಿತಿ ವಕ್ಫ್‌ ಬೋರ್ಡ್‌ ನೇಮಿಸಿ ಆದೇಶಿಸಿತ್ತು. ಈ ಸಮಿತಿಯ ಏಳು ಸದಸ್ಯರು 2023ರ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು. ಹಳೆಯ ಕಮಿಟಿ ಆಡಳಿತ ಅವಧಿ 2023ರ ಆಗಸ್ಟ್ ತಿಂಗಳಲ್ಲಿಯೆ ಮುಕ್ತಾಯಗೊಂಡಿದ್ದರೂ ಈ ತನಕ ಅಕ್ರಮ ಆಡಳಿತ ನಡೆಸಿದ್ದಾರೆ’ ಎಂದು ಅರ್ಜಿದಾರ ದೂರು ಸಲ್ಲಿಸಿದ್ದರು.

‘ಹಳೆಯ ಸಮಿತಿಯಲ್ಲಿ ಕೋರಂ ಇಲ್ಲದೆ ಹೋಗಿದ್ದರಿಂದ ಜಿಲ್ಲಾ ವಕ್ಫ್ ಸಮಿತಿ ಭೇಟಿ ನೀಡಿ ಲೆಕ್ಕಪತ್ರ, ದಾಖಲೆ ಸರಿಯಾಗಿ ಇಡದಿರುವ ಹಾಗೂ ಅವಧಿ ಪೂರ್ಣಗೊಂಡಿದ್ದರಿಂದ ಪಂಚ ಕಮಿಟಿಯು ಪುನಃ ಹೆಸರುಗಳನ್ನು ಶಿಫಾರಸು ಮಾಡಿತ್ತು. ಅದರ ಆಧಾರದಲ್ಲಿ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಲು ಆದೇಶ ನೀಡುವಂತೆ ನೂತನ ಸಮಿತಿ ಅಧ್ಯಕ್ಷ ಎಸ್.ಎ.ನಯೀಮ್ ಅರ್ಜಿ ಸಲ್ಲಿಸಿದ್ದರು.

ಪ್ರತಿವಾದಿ ಹಳೆ ಕಮಿಟಿ ಅಧ್ಯಕ್ಷ ಅಮೀರಬೇಗ ಉಸ್ತಾದ ಬೇಗ್ ಹಾಗೂ ಪದಾಧಿಕಾರಿಗಳು, ‘ತಮ್ಮನ್ನು ವಕ್ಫ್ ಬೋರ್ಡ್ ತೆಗೆದು ಹಾಕಿಲ್ಲ. ಈ ಕುರಿತು ವಕ್ಫ್ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದೇವೆ. ಕಾರಣ ಹಳೆಯ ಕಮಿಟಿ ಇನ್ನೂ ಅಧಿಕಾರದಲ್ಲಿ ಮುಂದುವರಿದಿದ್ದು ಅಧಿಕಾರ ಹಸ್ತಾಂತರದ ಪ್ರಶ್ನೆಯೇ ಉದ್ಭವಿಸದು’ ಎಂದು ವಾದ ಮಂಡಿಸಿದ್ದರು

ಬರುವ ಆದೇಶಕ್ಕೆ ಒಳಪಟ್ಟು... ಅರ್ಜಿದಾರರು ಮತ್ತು ಪ್ರತಿವಾದಿಗಳ ವಾದ ಆಲಿಸಿದ ದಂಡಾಧಿಕಾರಿ ಶಿಂದೆ ಐತಿಹಾಸಿಕ ಭಾವೈಕ್ಯದಿಂದ ಆಚರಿಸುವ ಮೊಹರಂಗೆ ದೇಶ ವಿದೇಶಗಳಿಂದ ಆಗಮಿಸುವ ಭಕ್ತರಿಗೆ ತೊಂದರೆ ಆಗದಂತೆ ನಡೆದುಕೊಳ್ಳಲು ವಕ್ಫ್ ಬೋರ್ಡ್ ಕಾಯ್ದೆಯಡಿ ನೂತನ ಕಮಿಟಿ ಪರ ಆದೇಶ ಹೊರಡಿಸಿದ್ದಾರೆ. ಜೊತೆಗೆ ಕಲಬುರಗಿಯಲ್ಲಿ ವಕ್ಫ್ ಟ್ರಿಬ್ಯುನಲ್‌ನಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಬರುವ ಆದೇಶಕ್ಕೆ ಎರಡೂ ಕಡೆಯುವರು ಬದ್ಧರಾಗಿರಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT