ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು ಲೋಕಸಭಾ ಚುನಾವಣೆ: ರಾಜರ ಮಣಿಸಿದ ನಿವೃತ್ತ ಐಎಎಸ್‌ ಅಧಿಕಾರಿ

ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆ: ಆಡಳಿತ ವಿರೋಧಿ ಅಲೆಗೆ ಮುದುಡಿದ ಕಮಲ
Published 5 ಜೂನ್ 2024, 6:57 IST
Last Updated 5 ಜೂನ್ 2024, 6:57 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಎಸ್‌ಟಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರ ನಾಯಕ 80 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರನ್ನು ಸೋಲಿಸಿದರು.

ಲೋಕಸಭಾ ಚುನಾವಣೆ ಪೂರ್ವದಲ್ಲಿ ಜಿಲ್ಲಾ ಕಾಂಗ್ರೆಸ್‌ ಒಡೆದ ಮನೆಯಾಗಿತ್ತು. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನವೂ ಖಾಲಿ ಇತ್ತು. ವಿಧಾನ ಪರಿಷತ್‌ ಮಾಜಿ ಸದಸ್ಯ, ದೇವದುರ್ಗ ತಾಲ್ಲೂಕಿನ ಲಿಂಗಾಯತ ಸಮುದಾಯದ ಮುಖಂಡ ಬಸವರಾಜ ಪಾಟೀಲ ಇಟಗಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಎರಡು ಬಣಗಳಿದ್ದರೂ ಮುಖಂಡರು ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಿನಿಂದ ಪ್ರಚಾರ ಮಾಡಿದರು.

ಕಾಂಗ್ರೆಸ್ ಯುವ ನಾಯಕ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಚಾರ ಮಾಡಿದ್ದರು. ಕಾಂಗ್ರೆಸ್‌ನ ಹಾಲಿ ಹಾಗೂ ಮಾಜಿ ಶಾಸಕರು ಸಹ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಚುನಾವಣೆ ಅಧಿಸೂಚನೆ ಪ್ರಕಟಗೊಳ್ಳುತ್ತಿದ್ದಂತೆಯೇ ಬಿರುಸಿನ ಪ್ರಚಾರ ಮಾಡಿದ್ದರು.

ಜಿ.ಕುಮಾರ ನಾಯಕ ಅವರು ರಾಯಚೂರು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರಿಂದ ಜಿಲ್ಲೆಯ ಸಮಸ್ಯೆಗಳ ಅರಿವು ಇರುವುದನ್ನು ಪ್ರಚಾರ ಸಂದರ್ಭದಲ್ಲಿ ಮತದಾರರಿಗೆ ಮನವರಿಕೆ ಮಾಡಿದ್ದರು. ರಾಯಚೂರಿಗೆ ಏಮ್ಸ್‌ ತರುವ ಭರವಸೆ ಕೊಡುವ ಜತೆಗೆ ‘ನಾನು ಹೊರ ಜಿಲ್ಲೆಯವನಲ್ಲ. ನಿಮ್ಮ ಮನೆಯ ಮಗ’ ಎಂದು ಪ್ರಚಾರ ಸಭೆಗಳಲ್ಲಿ ಕೈಮುಗಿದು ಮನವಿ ಮಾಡಿಕೊಂಡಿದ್ದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಬಹುಮಟ್ಟಿಗೆ ನೆರವಾದವು. ಮಹಿಳೆಯರ ಮತದಾನದ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು. ಫಲಾನುಭವಿಗಳು ಸಹಜವಾಗಿಯೇ ಕಾಂಗ್ರೆಸ್‌ಗೆ ಬೆಂಬಲ ನೀಡಿದರು.

ಸೋಲಿಗೆ ಕಾರಣವಾದ ಕಾರ್ಯಕರ್ತರ ಅಸಮಾಧಾನ

ಬಿಜೆಪಿಯ ಹಾಲಿ ಸಂಸದರಾಗಿದ್ದ ರಾಜಾ ಅಮರೇಶ್ವರ ನಾಯಕ ಈ ಬಾರಿಯೂ ಮೋದಿ ಅಲೆಯಲ್ಲೇ ಗೆಲುವಿನ ದಡ ಸೇರುವ ಅತಿಯಾದ ವಿಶ್ವಾಸದಲ್ಲಿ ಇದ್ದರು. ಮಾಜಿ ಸಂಸದ ಬಿ.ವಿ.ನಾಯಕ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರಿಂದ ರಾಜಾ ಅಮರೇಶ್ವರ ನಾಯಕ ಅವರಿಗೆ ಟಿಕೆಟ್‌ ಕೊಡಲು ವಿಳಂಬ ಮಾಡಲಾಯಿತು.

ಬಿಜೆಪಿ ಕಾರ್ಯಕರ್ತರು ಸಹ ರಾಜಾ ಅಮರೇಶ್ವರ ನಾಯಕ ಅವರಿಗೆ ಟಿಕೆಟ್‌ ಕೊಡದಂತೆ ವಿರೋಧ ವ್ಯಕ್ತಪಡಿಸಿದ್ದರು. ಗೋ ಬ್ಯಾಕ್‌ ಅಮರೇಶ್ವರ ನಾಯಕ ಎಂದು ನಗರದ ಡಾ.ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೂ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್‌ ಅಗರವಾಲ್‌ ಅವರು ರಾಯಚೂರಿಗೆ ಬಂದು ಬಿ.ವಿ.ನಾಯಕ ಕೈಯಿಂದಲೇ ರಾಜಾ ಅಮರೇಶ್ವರ ನಾಯಕ ಅವರಿಗೆ ‘ಬಿ’ ಫಾರಂ ಕೊಡಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಪೂರ್ವನಿಗದಿಯಂತೆ ಪ್ರಚಾರಕ್ಕೆ ಬರಲೇ ಇಲ್ಲ.

ರಾಜ್ಯಮಟ್ಟದ ಕೆಲ ನಾಯಕರು ಬಂದಾಗ ಮಾತ್ರ ಜಿಲ್ಲೆಯ ಕೆಲ ನಾಯಕರು ವೇದಿಕೆ ಮೇಲೆ ಕುಳಿತು ನಂತರ ಹೊರಟು ಹೋಗುತ್ತಿದ್ದರು. ಬಿಜೆಪಿ ಅಭ್ಯರ್ಥಿಯ ಪರವಾಗಿ ಆಸಕ್ತಿಯಿಂದ ಬಿರುಸಿನ ಪ್ರಚಾರ ಮಾಡಲೇ ಇಲ್ಲ. ರಾಜಾ ಅಮರೇಶ್ವರ ನಾಯಕ ಸೋಲು ಖಚಿತ ಎಂದು ಕಾರ್ಯಕ್ರಮಗಳಲ್ಲೇ ಪಕ್ಷದ ಕಾರ್ಯಕರ್ತರು ಆಡಿಕೊಳ್ಳುತ್ತಿದ್ದರು.

ಕೈಕೊಟ್ಟ ಬಿಜೆಪಿ–ಜೆಡಿಎಸ್ ಮೈತ್ರಿ

ಬಿಜೆಪಿ–ಜೆಡಿಎಸ್‌ ಮೈತ್ರಿ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿದರೆ ಬಿಜೆಪಿಗೆ ಮುಳುವಾಯಿತು. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌–ಬಿಜೆಪಿ ಅಭ್ಯರ್ಥಿಗಳ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿತ್ತು. ಬಿಜೆಪಿ ಮುಖಂಡರ ಮೇಲೆ ಜೆಡಿಎಸ್‌ ಕಾರ್ಯಕರ್ತರ ಮುನಿಸು ಇತ್ತು. ಮೇಲ್ಮಟ್ಟದಲ್ಲಿ ನಾಯಕರು ಒಂದಾದರೂ ತಳಮಟ್ಟದಲ್ಲಿ ಕಾರ್ಯಕರ್ತರು ಒಗ್ಗೂಡಲಿಲ್ಲ.

ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡರೂ ಮತ ಹಕ್ಕು ಚಲಾಯಿಸುವ ಸಂದರ್ಭದಲ್ಲಿ ಕೈಕೊಟ್ಟರು. ಜೆಡಿಎಸ್‌ನಲ್ಲಿರುವ ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಬಹುತೇಕ ಕಾರ್ಯಕರ್ತರು ಬಿಜೆಪಿ ವಿರುದ್ಧ ಮತ ಚಲಾಯಿಸಿದರು. ಇದು ಕಾಂಗ್ರೆಸ್‌ಗೆ ಪ್ಲಸ್‌ ಪಾಯಿಂಟ್‌ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT