ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: 4ರಂದು ಮತ ಎಣಿಕೆಗೆ ಸಕಲ ಸಿದ್ಧತೆ

ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆ
Published 31 ಮೇ 2024, 13:57 IST
Last Updated 31 ಮೇ 2024, 13:57 IST
ಅಕ್ಷರ ಗಾತ್ರ

ರಾಯಚೂರು: ಜೂನ್ 4ರಂದು ನಡೆಯುವ ಲೋಕಸಭಾ ಚುನಾವಣೆಯ ಮತ ಎಣಿಕೆಯ ಕಾರ್ಯಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ ನಾಯಕ ತಿಳಿಸಿದರು.

ನಗರದ  ಸೇಟ್ ರಿಖಬ್ ಚಂದ್ ಪಾರಸಮಲ್ ಸುಖಾಣಿ (ಎಸ್ ಆರ್ ಪಿಎಸ್) ಹಾಗೂ ಲಕ್ಷ್ಮಿ ವೆಂಕಟೇಶ್ವರ ದೇಸಾಯಿ (ಎಲ್ ವಿಡಿ) ಕಾಲೇಜಿನಲ್ಲಿ 159 ಮತ ಎಣಿಕೆ ಮೇಲ್ವಿಚಾರಕರು, 168 ಸೂಕ್ಷ್ಮ ವೀಕ್ಷಕರು ಹಾಗೂ 159 ಮತ ಎಣಿಕೆ ಸಹಾಯಕರನ್ನು ನೇಮಕ ಮಾಡಲಾಗಿದೆ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಂಗಳವಾರ ಬೆಳಿಗ್ಗೆ 7ಕ್ಕೆ ಭದ್ರತಾ ಕೊಠಡಿ ತೆರೆಯಲಾಗುವುದು. 8ಕ್ಕೆ ಅಂಚೆ ಮತ ಎಣಿಕೆ ಹಾಗೂ ಇವಿಎಂ ಮತಗಳ ಎಣಿಕೆ ಆರಂಭವಾಗಲಿದೆ. ಶೋರಾಪುರ,ಶಹಪುರ ಯಾದಗಿರಿ ಹಾಗೂ ದೇವದುರ್ಗ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಎಲ್ ವಿಡಿ ಕಾಲೇಜಿನಲ್ಲಿ ಹಾಗೂ ರಾಯಚೂರು ನಗರ, ರಾಯಚೂರು ಗ್ರಾಮೀಣ, ಮಾನ್ವಿ, ಲಿಂಗಸೂಗೂರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಎಸ್ ಆರ್ ಪಿಎಸ್ ಕಾಲೇಜಿನ ಒಟ್ಟು 14 ಟೇಬಲ್ ಗಳಲ್ಲಿ ನಡೆಯಲಿದೆ ಎಂದರು.

ಶೋರಾಪುರ ಕ್ಷೇತ್ರದ ಮತ ಎಣಿಕೆ 23 ಸುತ್ತುಗಳಲ್ಲಿ, ಮಾನ್ವಿ, ದೇವದುರ್ಗ, ಯಾದಗಿರಿ, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರಗಳನ್ನು ತಲಾ 20 ಸುತ್ತುಗಳಲ್ಲಿ ಹಾಗೂ ಶಹಪುರ 19 ಸುತ್ತು, ರಾಯಚೂರು ನಗರ18 ಮತ್ತು ಲಿಂಗಸೂಗೂರು ವಿಧಾನಸಭಾ ಕ್ಷೇತ್ರ 285 ಮತಗಟ್ಟೆಗಳ ಮತ ಎಣಿಕೆ 21 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ಮಾಧ್ಯಮ ಕೇಂದ್ರ ಸ್ಥಾಪನೆ: ಒಬ್ಬ ಅಭ್ಯರ್ಥಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಸೇರಿ ಒಟ್ಟು ಗರಿಷ್ಠ 123 ಏಜೆಂಟರನ್ನು ನೇಮಿಸಬಹುದು. ಚುನಾವಣಾಧಿಕಾರಿಗಳಿಂದ ನೀಡಿದ ಮತ ಎಣಿಕೆ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಮತ ಎಣಿಕೆಯ ಮಾಹಿತಿ ಪ್ರತಿ ಸುತ್ತು ಮುಕ್ತಾಯದ ನಂತರ ನೀಡಲಾಗುವುದು. ಪ್ರತಿ ಟೇಬಲ್ ಗೆ 3 ಜನ ಸಿಬ್ಬಂದಿ ಇರುತ್ತಾರೆ. ಪ್ರತಿ ಟೇಬಲ್ ಗೆ ವೆಬ್ ಕಾಸ್ಟಿಂಗ್ ಅಳವಡಿಸಲಾಗಿದೆ. ಪ್ರತಿ ಸಹಾಯಕ ಚುನಾವಣಾಧಿಕಾರಿ ಒಬ್ಬ ವಿಡಿಯೊಗ್ರಾಫರ್ ನೇಮಕ ಮಾಡಿಕೊಂಡಿದ್ದಾರೆ. ಮತ ಎಣಿಕೆ ಕೇಂದ್ರಗಳಲ್ಲಿ ಮಾಧ್ಯಮ ಕೇಂದ್ರ ಹಾಗೂ ಪ್ರತಿ ಸುತ್ತಿನ ಫಲಿತಾಂಶ ಪ್ರದರ್ಶನಕ್ಕಾಗಿ ಟಿ.ವಿ ಅಳವಡಿಸಲಾಗಿದೆ ಎಂದು ಹೇಳಿದರು.

ಮತ ಎಣಿಕೆ ಕೊಠಡಿಗೆ ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆ ಸಹಾಯಕರು, ಸೂಕ್ಷ್ಮ ವೀಕ್ಷಕರು, ಚುನಾವಣೆ ಆಯೋಗವು ಸೂಚಿಸಿರುವ ಅಧಿಕೃತ ವ್ಯಕ್ತಿಗಳು, ಚುನಾವಣೆಗೆ ಸಂಬಂಧಿಸಿದ ಕರ್ತವ್ಯದ ಮೇಲಿರುವ ಸರ್ಕಾರಿ ನೌಕರರು, ಅಭ್ಯರ್ಥಿಗಳು, ಅವರ ಚುನಾವಣಾ ಏಜೆಂಟರು ಮತ್ತು ಮತ ಎಣಿಕೆ ಏಜೆಂಟರು ಮಾತ್ರ ಅನುಮತಿ ಇದೆ ಎಂದು ತಿಳಿಸಿದರು.

ಫಸಲ್ ಭೀಮಾ ಯೋಜನೆಯ ಅವ್ಯವಹಾರದ ಕುರಿತಂತೆ ಸಿರವಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಸಿಐಡಿ ತನಿಖೆ ವಹಿಸಲಾಗಿದೆ . ಜಾಲಹಳ್ಳಿಯ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಬಂದೋಬಸ್ತ್ : ಮತ ಎಣಿಕೆ ನಡೆಯುವ ಸ್ಥಳ ಹಾಗೂ ನಗರದ ವಿವಿಧ ವೃತ್ತಗಳಲ್ಲಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 4 ಡಿಎಸ್ ಪಿ, 17 ಸರ್ಕಲ್ ಇನ್ಸ್ ಪೆಕ್ಟರ್, 388 ಕಾನ್ ಸ್ಟೆಬಲ್ ಸೇರಿ ಒಟ್ಟು 645 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ನೇಮಿಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ತಿಳಿಸಿದರು.

ಜತೆಗೆ 200 ಹೋಮ್ ಗಾರ್ಡ್, ಕೆಎಸ್‌ಆರ್‌ಪಿ, ಸಿಆರ್‌ಪಿಎಫ್ ಹಾಗೂ ಜಿಲ್ಲಾ ಸಶಸ್ತ್ರದಳ ಪಡೆ ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ನೇಮಿಸಲಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕೆಲ ಗ್ರಾಮಗಳಲ್ಲಿ ಗಲಾಟೆ, ಕಲಹವಾಗಿದ್ದನ್ನು ಗಮನಿಸಿ ಅಂತಹ ಗ್ರಾಮಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT