ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ ಪುರಸಭೆ: ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

Published 8 ಆಗಸ್ಟ್ 2024, 5:27 IST
Last Updated 8 ಆಗಸ್ಟ್ 2024, 5:27 IST
ಅಕ್ಷರ ಗಾತ್ರ

ಮಸ್ಕಿ: ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸುತ್ತಿದ್ದಂತೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.

23 ಸದಸ್ಯ ಬಲದ ಪುರಸಭೆಯಲ್ಲಿ 14 ಬಿಜೆಪಿ, 9 ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದಾರೆ. 3ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಸದಸ್ಯೆಯೊಬ್ಬರು ನಿಧನ ಹೊಂದಿದ್ದರಿಂದ ಪುರಸಭೆಯಲ್ಲಿ ಕಾಂಗ್ರೆಸ್‌ ಬಲ 8ಕ್ಕೆ ಇಳಿದಿದೆ.

ಅಧ್ಯಕ್ಷ ಸ್ಥಾನ ಬಿಸಿಎಗೆ ಮೀಸಲಾಗಿದ್ದರಿಂದ ಬಿಜೆಪಿಯಲ್ಲಿ 12 ವಾರ್ಡ್‌ನ ಮಲ್ಲಯ್ಯ ಅಂಬಾಡಿ, 16ನೇ ವಾರ್ಡ್‌ನ ಸುರೇಶ ಹರಸೂರು ನಡುವೆ ಪೈಪೋಟಿ ನಡೆದಿದೆ. 19ನೇ ವಾರ್ಡ್‌ನ ರೇಣುಕಾ ಉಪ್ಪಾರ ಹಾಗೂ 23ನೇ ವಾರ್ಡ್‌ನ ಶಾಕೀರಾ ಮಸೂದ್ ಅಧ್ಯಕ್ಷ ಸ್ಥಾನಕ್ಕೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿದ್ದರಿಂದ 15ನೇ ವಾರ್ಡ್‌ನಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ ಗೀತಮ್ಮ ಶಿವರಾಜ ಬುಕ್ಕಣ್ಣ ಒಬ್ಬರೇ ಇದ್ದುದ್ದರಿಂದ ಆವರ ಆಯ್ಕೆ ಬಹುತೇಖ ಖಚಿತ ಎನ್ನಲಾಗಿದೆ.

ಪುರಸಭೆಗೆ ಚುನಾವಣೆ ನಡೆದು ಎರಡು ವರ್ಷದ ನಂತರ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಸದಸ್ಯರು ಚುರುಕುಗೊಂಡಿದ್ದಾರೆ. ಮಂಗಳವಾರ ಸಂಜೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಚೇರಿಯಲ್ಲಿ 14 ಸದಸ್ಯರ ಸಭೆ ನಡೆಸಲಾಗಿದೆ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಲಿದ್ದು ಸದಸ್ಯರು ಒಗ್ಗಟ್ಟಾಗಿ ಇರುವಂತೆ ಪ್ರತಾಪಗೌಡ ಪಾಟೀಲ ಅವರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ನಡೆ ನಿಗೂಢ: ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ 8 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ತಂತ್ರ ಎಣೆಯಲು ಮುಂದಾಗಿದೆ. ಅವಶ್ಯ ಬಿದ್ದರೆ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ತಿನ ಸದಸ್ಯರೊಬ್ಬರ ಮತ ಸೇರಿ 11ಕ್ಕೆ ತನ್ನ ಬಲ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

22 ಸದಸ್ಯರಲ್ಲಿ ಬಹುಮತಕ್ಕೆ 12 ಸದಸ್ಯರ ಸಂಖ್ಯೆ ಬೇಕು. ಸದ್ಯ ಬಿಜೆಪಿಯಲ್ಲಿ 14 ಹಾಗೂ ಕಾಂಗ್ರೆಸ್‌ನಲ್ಲಿ 8 ಸದಸ್ಯರಿದ್ದು ಪುರಸಭೆ ಆಡಳಿತ ಬಿಜೆಪಿ ಹಿಡಿಯುವ ಸಾಧ್ಯತೆ ಲಕ್ಷಣಗಳು ಸ್ಪಷ್ಟವಾಗಿವೆ.

ಚುನಾವಣೆ ದಿನಾಂಕ ಘೋಷಣೆಯಾದ ನಂತರ ರಾಜಕೀಯ ಚಟುವಟಿಗಳು ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಆರು ತಿಂಗಳಾದರೂ ಚುನಾವಣೆ ಇಲ್ಲ

ಮೂರನೇ ವಾರ್ಡ್‌ನಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಸದಸ್ಯೆ ಶಾಸಮ್ಮ ಎಂಬುವರು ನಿಧನ ಹೊಂದಿ ಆರು ತಿಂಗಳು ಮೇಲಾಗಿದೆ. ಇದುವರೆಗೂ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿಲ್ಲ. ತೆರವಾದ ಸ್ಥಾನಕ್ಕೆ ಆರು ತಿಂಗಳ ಒಳಗೆ ಚುನಾವಣೆ ನಡೆಸಬೇಕು ಎಂಬ ನಿಯಮ ಇದ್ದರೂ ಚುನಾವಣೆ ನಡೆಸದಿರುವುದು ಅಚ್ಚರಿ ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT