ಚುರುಕುಗೊಂಡ ರಾಜಕೀಯ ಚಟುವಟಿಕೆ
ಮಸ್ಕಿ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಕರಡು ಪಟ್ಟಿಯನ್ನು ಚುನಾವಣೆ ಆಯೋಗ ಗುರುವಾರ ಪ್ರಕಟಿಸಿದ ಬೆನ್ನ ಹಿಂದೆಯೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿವೆ.
ಉಪ ಚುನಾವಣೆ ಫಲಿತಾಂಶದ ನಂತರ ಕ್ಷೇತ್ರದಲ್ಲಿ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ರಾಜಕೀಯ ಚಟುವಟಿಕೆ ಮತ್ತೆ ಆರಂಭವಾದಂತಾಗಿದೆ. ಮಸ್ಕಿ ನೂತನ ತಾಲ್ಲೂಕು ಕೇಂದ್ರವಾದ ನಂತರ ಇದೇ ಮೊದಲ ಬಾರಿಗೆ 6 ಜಿಲ್ಲಾ ಪಂಚಾಯಿತಿ ಹಾಗೂ 13 ತಾಲ್ಲೂಕು ಪಂಚಾಯಿತಿ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಈ ಚುನಾವಣೆ ಮಹತ್ವ ಪಡೆದುಕೊಂಡಿದೆ.
ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಪಕ್ಷಗಳ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಆಕಾಂಕ್ಷೆಗಳು ಸಂದೇಶ ಹರಿ ಬಿಟ್ಟು ಜನ ಬೆಂಬಲ ಕೇಳುವ ಮೂಲಕ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸುತ್ತಿದ್ದಾರೆ.
ಎರಡು ಪಕ್ಷಗಳ ಆಕಾಂಕ್ಷೆಗಳ ಜೊತೆಗೆ ಪಕ್ಷಕ್ಕೆ ಸೇರದೆ ಇರುವ ಕೆಲವು ಯುವಕರು ಸಹ ತಮ್ಮ ಕ್ಷೇತ್ರದ ಮೀಸಲಾತಿ ಪಟ್ಟಿಯನ್ನು ಪೋಸ್ಟ್ ಮಾಡುವ ಮೂಲಕ ‘ನಾನು ಈ ಕ್ಷೇತ್ರದ ಸ್ಪರ್ಧಿ‘ ಎಂಬುದನ್ನು ಖಚಿತಪಡಿಸುವ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸುತ್ತಿದ್ದಾರೆ.
ಚುನಾವಣೆ ಆಯೋಗ ಚುನಾವಣೆ ದಿನಾಂಕ ಘೋಷಣೆ ಮಾಡುವ ಮುನ್ನವೇ ಪ್ರಕಟವಾದ ಮೀಸಲಾತಿ ಪಟ್ಟಿಯಿಂದ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಬರುವ ದಿನಗಳಲ್ಲಿ ಪಕ್ಷಗಳ ಟಿಕೆಟ್ ಗಿಟ್ಟಿಸಿಕೊಳ್ಳಲು ಪೈಪೋಟಿ ನಡೆಯುವ ಲಕ್ಷಣಗಳು ಈಗಲೇ ಸ್ಪಷ್ಟವಾಗಿ ಕಂಡು ಬರುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.