ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ಮಲ್ಲಿಗೆ ಬಳ್ಳಿಗೆ ಆಸರೆಯಾದ ನರೇಗಾ, ರೈತನ ಮೊಗದಲ್ಲಿ ಮಂದಹಾಸ

ಬಸವರಾಜ ಭೋಗಾವತಿ
Published 3 ಜನವರಿ 2024, 6:22 IST
Last Updated 3 ಜನವರಿ 2024, 6:22 IST
ಅಕ್ಷರ ಗಾತ್ರ

ಮಾನ್ವಿ: ತಾಲ್ಲೂಕಿನ ಕುರ್ಡಿ ಗ್ರಾಮದ ರೈತ ತಿಪ್ಪಣ್ಣ ಹೂಗಾರ ಮಲ್ಲಿಗೆ ಹೂ ಕೃಷಿಯಲ್ಲಿ ಯಶಸ್ಸು ಕಾಣುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯ ಮೂಲಕ ನರೇಗಾ ಯೋಜನೆಯ ನೆರವಿನಿಂದ ತಮ್ಮ ಮಳೆ ಆಶ್ರಿತ ಕಪ್ಪು ಮಣ್ಣಿನ ಒಂದು ಎಕರೆ ಜಮೀನಿನಲ್ಲಿ ಮಲ್ಲಿಗೆ ಹೂ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.

2022-23ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ಮೂಲಕ ಅಂದಾಜು ಮೊತ್ತ ₹46,378 ವೆಚ್ಚದಲ್ಲಿ ಮಲ್ಲಿಗೆ ಹೂ ಕೃಷಿ ಆರಂಭಿಸಿದ್ದರು. ನರೇಗಾ ಯೋಜನೆಯ ಅಡಿಯಲ್ಲಿ ಸದರಿ ಕಾಮಗಾರಿಯನ್ನು ಮೂರು ಜನರ ಕೂಲಿಕಾರ್ಮಿಕರ 90 ಮಾನವ ದಿನಗಳನ್ನು ಸೃಜನೆ ಮಾಡಿ ಮೊದಲ ಹಂತದಲ್ಲಿ 300 ಸಸಿಗಳನ್ನು ನೆಟ್ಟಿದ್ದರು. ₹28,201 ಕೂಲಿ ಜೊತೆಗೆ ಸಾಮಗ್ರಿ ವೆಚ್ಚವಾಗಿ ₹18,276 ಒಟ್ಟು ₹46,377 ಪಡೆದಿದ್ದರು.

ಎರಡನೇ ಹಂತದಲ್ಲಿಯೂ ಅರ್ಧ ಎಕರೆ ಜಮೀನಿನಲ್ಲಿ 300 ಸಸಿಗಳನ್ನು ನೆಡುವ ಕಾಮಗಾರಿ ನಿರ್ವಹಣೆಗೆ ಮೂರು ಜನರ ಕೆಲಸಕ್ಕೆ 90 ಮಾನವ ದಿನಗಳನ್ನು ಸೃಜನೆ ಮಾಡಿ ₹28,201 ಕೂಲಿ ಹಣ ಜೊತೆಗೆ ಸಾಮಗ್ರಿ ವೆಚ್ಚವಾಗಿ ₹18,276 ಒಟ್ಟು ₹46,377 ಪಡೆದಿದ್ದರು. ಮಳೆ ಕೊರತೆಯಾದಾಗ ಜಮೀನಿನಲ್ಲಿರುವ ಕೊಳವೆ ಬಾವಿಯಿಂದ ನೀರಿನ ಸೌಲಭ್ಯ ದೊರೆತಿದೆ.

ಈ ವರ್ಷ ತೋಟದಲ್ಲಿ ಮಲ್ಲಿಗೆ ಹೂಗಳು ಅರಳಿ ಮಾರಾಟ ಆರಂಭಿಸಿದ್ದಾರೆ. ಪ್ರತಿ ದಿನ 4ರಿಂದ 5 ಕೆ.ಜಿ ಹೂವುಗಳ ಮಾರಾಟದಿಂದ ಮಾಡಿ ಒಂದು ವರ್ಷದಲ್ಲಿ ಎಲ್ಲಾ ಖರ್ಚು ವೆಚ್ಚಗಳನ್ನು ತೆಗೆದು ₹1 ಲಕ್ಷ ಆದಾಯ ಗಳಿಸಿದ್ದಾರೆ.

‘ಈ ಮೊದಲ ನಮ್ಮ ಹೊಲದಲ್ಲಿ ತೊಗರಿ, ಸಜ್ಜೆ, ಹತ್ತಿ ಬಿತ್ತನೆ ಮಾಡಿದರೆ, ಒಂದು ಎಕರೆಗೆ ₹25 ಸಾವಿರ ಆದಾಯ ಬರುತ್ತಿತ್ತು. ಆದರೆ, ಮಲ್ಲಿಗೆ ಹೂವು ಬೆಳೆಯಿಂದ ₹1 ಲಕ್ಷ ನಿವ್ವಳ ಲಾಭ ಗಳಿಸಲು ಸಾಧ್ಯವಾಗಿದೆ’ ಎಂದು ತಿಪ್ಪಣ್ಣ ಹೂಗಾರ ಹೇಳುತ್ತಾರೆ.

ನರೇಗಾ ಯೋಜನೆಯ ನೆರವನ್ನು ಸದ್ಬಳಕೆ ಮಾಡಿಕೊಂಡಿರುವ ರೈತ ತಿಪ್ಪಣ್ಣ ಹೂಗಾರ ಸಾಧನೆಗೆ ಗ್ರಾಮ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನರೇಗಾ ಯೋಜನೆಯ ನೆರವಿನಿಂದ ‌ಮಲ್ಲಿಗೆ ಹೂವು ಕೃಷಿಯಲ್ಲಿ ಯಶಸ್ಸು ಗಳಿಸಲು ಅಧಿಕಾರಿಗಳ ಪ್ರೋತ್ಸಾಹ ಕಾರಣ.
–ತಿಪ್ಪಣ್ಣ ಹೂಗಾರ, ಕುರ್ಡಿ ರೈತ
ರೈತರು ತೋಟಗಾರಿಕೆ ಕೈಗೊಳ್ಳಲು ನರೇಗಾ ಯೋಜನೆಯ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.
–ಈರೇಶ, ನರೇಗಾ ಐಇಸಿ ಸಂಯೋಜಕ, ತಾಲ್ಲೂಕು ಪಂಚಾಯಿತಿ, ಮಾನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT