ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಆಸ್ಪತ್ರೆ ಭೂ ವಿವಾದ | ಶಾಸಕ, ಡಿ.ಸಿಯಿಂದ ಭೂಮಾಲೀಕರ ಮನವೊಲಿಕೆ ಯತ್ನ

ಮಸ್ಕಿ: ಸರ್ಕಾರಿ ಆಸ್ಪತ್ರೆ ಭೂ ವಿವಾದ ಪ್ರಕರಣ
Published : 15 ಸೆಪ್ಟೆಂಬರ್ 2024, 15:41 IST
Last Updated : 15 ಸೆಪ್ಟೆಂಬರ್ 2024, 15:41 IST
ಫಾಲೋ ಮಾಡಿ
Comments

ಮಸ್ಕಿ: ಪಟ್ಟಣದ ಸರ್ಕಾರಿ ಆಸ್ಪತ್ರೆ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಶಾಸಕರ ನೇತೃತ್ವದಲ್ಲಿ ಭೂ ಮಾಲೀಕರ ಮನವೊಲಿಸುವ ಯತ್ನ ಶನಿವಾರ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.

ಶಾಸಕ ಆರ್. ಬಸನಗೌಡ ತುರುವಿಹಾಳ ಹಾಗೂ ಜಿಲ್ಲಾಧಿಕಾರಿ ನಿತೀಶ್ ಕೆ. ನೇತೃತ್ವದಲ್ಲಿ ಸುಮಾರು 1 ಗಂಟೆ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಭೂ ಮಾಲೀಕ ಅಪ್ಪಾಜಿಗೌಡ ಪಾಟೀಲ ಇತರರು ಪಾಲ್ಗೊಂಡಿದ್ದರು.

ನಾಲ್ಕು ಎಕರೆ ನನ್ನ ಜಾಗವನ್ನು ಆರೋಗ್ಯ ಇಲಾಖೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದೆ. ನನಗೆ ಭೂ ಪರಿಹಾರ ಕೊಟ್ಟರೆ ಮಾತ್ರ ಸರ್ಕಾರಿ ಆಸ್ಪತ್ರೆಗೆ ಜಾಗ ಬಿಟ್ಟು ಕೊಡುವುದಾಗಿ ಭೂ ಮಾಲೀಕ ಅಪ್ಪಾಜಿಗೌಡ ಪಟ್ಟು ಹಿಡಿದರು ಎಂದು ತಿಳಿದು ಬಂದಿದೆ.

ಒಂದು ಹಂತದಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿ ಅವರು ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸುವ ಭರವಸೆ ನೀಡಿದ್ದು ಶೀಘ್ರ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಭೂ ಮಾಲೀಕರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಭೂ ವಿವಾದ ಹಿನ್ನೆಲೆ: ತಾಲ್ಲೂಕು ಕೇಂದ್ರ ಸ್ಥಾನವಾದ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಭೂಮಿ ತಮಗೆ ಸೇರಿದ್ದು ಎಂದು ಅಪ್ಪಾಜಿಗೌಡ ಪಾಟೀಲ ಕಲಬುರಗಿ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರಿಂದ ನಿರ್ಮಾಣ ಹಂತದಲ್ಲಿದ್ದ 30 ಹಾಸಿಗೆ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿತ್ತು.

ಹೈಕೋರ್ಟ್ ತಡೆ ನೀಡಿದ್ದರಿಂದ ಈಗಿನ 6 ಹಾಸಿಗೆಯ ಆಸ್ಪತ್ರೆ ಕಟ್ಟಡ ಹೊರತುಪಡಿಸಿ ಶವಪರೀಕ್ಷಾ ಕೇಂದ್ರ ಸೇರಿದಂತೆ ಉಳಿದ ಖಾಲಿ ಜಾಗಕ್ಕೆ ಭೂ ಮಾಲೀಕರು ತಂತಿ ಬೇಲಿ ಹಾಕಿದ್ದರು.

ಈ ಕುರಿತು ‘ಪ್ರಜಾವಾಣಿ’ಯು ಜುಲೈ 13ರಂದು ‘ಆಸ್ಪರ್ತೆ ಭೂ ವಿವಾದ: ಕಾಮಗಾರಿಗೆ ಗ್ರಹಣ’ ಶೀರ್ಷಿಕೆಯಡಿ ಮುಖಪುಟದಲ್ಲಿ ವರದಿ ಪ್ರಕಟಿಸಿತ್ತು.

ನಿತೀಶ್ ಕೆ.
ನಿತೀಶ್ ಕೆ.
ಆರ್. ಬಸನಗೌಡ ತುರುವಿಹಾಳ
ಆರ್. ಬಸನಗೌಡ ತುರುವಿಹಾಳ

ನಾನು ಮತ್ತು ಶಾಸಕ ಆರ್. ಬಸನಗೌಡ ತುರುವಿಹಾಳ ಸೇರಿ ಭೂ ಮಾಲೀಕರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಯತ್ನ ಮಾಡಿದ್ದೇವೆ. ಮಾತುಕತೆ ಒಂದು ಹಂತಕ್ಕೆ ಬಂದಿದ್ದು ಶೀಘ್ರ ಸಮಸ್ಯೆ ಇತ್ಯರ್ಥವಾಗುವ ಭರವಸೆ ಇದೆ

-ನಿತೀಶ್ ಕೆ. ಜಿಲ್ಲಾಧಿಕಾರಿ ರಾಯಚೂರು

ಸರ್ಕಾರಿ ಆಸ್ಪತ್ರೆ ಭೂ ವಿವಾದವನ್ನು ಇತ್ಯರ್ಥಪಡಿಸಿ ಶೀಘ್ರ ಮಸ್ಕಿ ಆಸ್ಪತ್ರೆಯನ್ನು ನೂರು ಹಾಸಿಗೆಗಳ ಆಸ್ಪತ್ರೆಯನ್ನಾಗಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಆರೋಗ್ಯ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ.

- ಆರ್.ಬಸನಗೌಡ ತುರುವಿಹಾಳ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT