ಶುಕ್ರವಾರ, ಸೆಪ್ಟೆಂಬರ್ 25, 2020
24 °C
ನದಿತೀರದ ಗ್ರಾಮಗಳಿಗೆ ಮುನ್ನೆಚ್ಚೆರಿಕೆ ನೀಡಿದ ಆಡಳಿತ

ರಾಯಚೂರು: ಕೃಷ್ಣಾ, ತುಂಗಭದ್ರಾದಲ್ಲಿ ಏಕಕಾಲಕ್ಕೆ ಪ್ರವಾಹ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೃಷ್ಣಾನದಿ ಉಗಮಿಸುವ ಮಹಾರಾಷ್ಟ್ರದಲ್ಲಿ ಹಾಗೂ ತುಂಗಭದ್ರಾ ನದಿಗಳು ಉಗಮಿಸುವ ಚಿಕ್ಕಮಗಳೂರಿನಲ್ಲಿ ಎಡೆಬಿಡದೆ ಮಳೆ ಬೀಳುತ್ತಿದ್ದು, ಈ ವರ್ಷವೂ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಕೃಷ್ಣಾ ನದಿ ಜಲಾಶಯಗಳೆಲ್ಲ ಭರ್ತಿಯಾಗಿದ್ದು, ಮುಂಬರುವ ದಿನಗಳಲ್ಲಿ ನೀರಿನ ಹೊರಹೊರಿವು ನಿರಂತರವಾಗಿ ಹೆಚ್ಚಳವಾಗಲಿದೆ. ನಾರಾಯಣಪುರ ಜಲಾಶಯದಿಂದ 70 ಸಾವಿರ ಕ್ಯುಸೆಕ್‌ ಅಡಿ ಹೊರ ಬಿಡಲಾಗುತ್ತಿದೆ. ಮುಂಬೈನಲ್ಲಿ ಸುರಿಯುತ್ತಿರುವ ರಕ್ಕಸ ಮಳೆಯನ್ನು ಅವಲೋಕಿಸಿದರೆ, ಮುಂದಿನ ಎರಡೇ ದಿನಗಳಲ್ಲಿ ಪ್ರವಾಹ ಭಾರಿ ಏರಿಕೆ ಆಗಬಹುದು. ಬೆಳಗಾವಿ ಜಿಲ್ಲೆಯಲ್ಲಿ ವಾಹನ ಸಂಪರ್ಕದ ಕೆಲವು ಸೇತುವೆಗಳು ಈಗಾಗಲೇ ಮುಳುಗಡೆ ಆಗಿವೆ. ಅಲ್ಲಿಂದ ನೀರು ಹರಿದು ರಾಯಚೂರು ಜಿಲ್ಲೆಗೆ ತಲುಪಲು ಎರಡು ದಿನಗಳಾಗುತ್ತದೆ.

ಪ್ರವಾಹದ ಮುನ್ಸೂಚನೆ ಅರಿತಿರುವ ಜಿಲ್ಲಾಡಳಿತವು ಜನರ ಪ್ರಾಣಹಾನಿ ಆಗದಂತೆ ಈಗಾಗಲೇ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳೆಲ್ಲ ಕೃಷ್ಣಾನದಿ ನಡುಗಡ್ಡೆ ಗ್ರಾಮಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ಬಂದಿದ್ದಾರೆ. ಪ್ರವಾಹದ ಅಪಾಯ ಪರಿಸ್ಥಿತಿ ನಿರ್ವಹಿಸಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ವಿಪತ್ತು ನಿರ್ವಹಣೆ ಸಭೆ ನಡೆಸಲಾಗಿದ್ದು, ಕಳೆದ ವರ್ಷದ ಅನುಭವ ಆಧರಿಸಿ ಕ್ರಮಕ್ಕೆ ಸಜ್ಜಾಗಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ತಿಳಿಸಿದ್ದಾರೆ.

ಲಿಂಗಸುಗೂರು ತಾಲ್ಲೂಕಿನ ಜಲದುರ್ಗದ ಬಳಿ ಕೃಷ್ಣಾನದಿ ಕವಲುಗಳಾಗಿ ಹರಿಯುತ್ತದೆ. ಒಂದುವರೆ ಲಕ್ಷ ಕ್ಯುಸೆಕ್‌ ದಾಟಿದರೆ, ಶೀಲಹಳ್ಳಿ ಗ್ರಾಮಸ್ಥರಿಗೆ ಸಂಪರ್ಕ ಕಡಿತವಾಗುತ್ತದೆ. ಅಧಿಕಾರಿಗಳು ಮುನ್ಸೂಚನೆ ನೀಡಿದ್ದರೂ ಮ್ಯಾದರಗಡ್ಡಿ ಸೇರಿ ಕೆಲವು ಗ್ರಾಮಗಳ ಜನರು ನಡುಗಡ್ಡೆಯಿಂದ ಸುರಕ್ಷಿತ ಸ್ಥಳಕ್ಕೆ ಬಂದಿರಲಿಲ್ಲ. ಹೀಗಾಗಿ ಪ್ರವಾಹವು ಐದು ಲಕ್ಷ ಕ್ಯುಸೆಕ್‌ಗೆ ತಲುಪಿದಾಗ ಸಂಕಷ್ಟ ಎದುರಿಸಬೇಕಾಯಿತು.  ಜಲದುರ್ಗ ಸೇತುವೆ ಮುಳುಗಡೆಯಿಂದಾಗಿ ಜನರ ಸಂರಕ್ಷಿಸಲು ಹೋಗಿದ್ದ ಎನ್‌ಡಿಆರ್‌ಎಫ್‌ ತಂಡ ಕೂಡಾ ನಡುಗಡ್ಡೆಯಲ್ಲಿ ಸಿಲುಕಬೇಕಾಯಿತು. ಮ್ಯಾದರಗಡ್ಡಿಯಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ಹೆಲಿಕಾಪ್ಟರ್‌ ಧಾವಿಸಿತ್ತು. 

ಎರಡೂವರೆ ಲಕ್ಷ ಕ್ಯುಸೆಕ್‌ಗಿಂತ ಹೆಚ್ಚು ನೀರು ಬಂದರೆ ದೇವದುರ್ಗ ತಾಲ್ಲೂಕು ಹೂವಿನಹೆಡಗಿ ಸಂಪರ್ಕ ಸೇತುವೆ ಮುಳುಗಡೆ ಆಗುತ್ತದೆ. ರಾಯಚೂರು ತಾಲ್ಲೂಕು ಗಡಿಭಾಗ ಕಾಡ್ಲೂರ ಗ್ರಾಮದ ಬಳಿ ಕೃಷ್ಣಾನದಿ, ಭೀಮಾನದಿ ಸಂಗಮ ಆಗುವುದರಿಂದ ಪ್ರವಾಹ ಇನ್ನೂ ಹೆಚ್ಚಾಗುತ್ತದೆ. ಗುರ್ಜಾಪುರ, ಅರಷಿಣಗಿ ಗ್ರಾಮಗಳು ಪ್ರವಾಹ ಎದುರಿಸಬೇಕಾಗುತ್ತದೆ. 

ಕಳೆದ ವರ್ಷ ಮುನ್ನಚ್ಚರಿಕೆ ಕ್ರಮವಾಗಿ ಗ್ರಾಮಗಳ ಜನರನ್ನು ಸ್ಥಳಾಂತರಿಸಿ ಸರ್ಕಾರಿ ಶಾಲೆ ಗಂಜಿ ಕೇಂದ್ರಗಳಲ್ಲಿ ಇರಿಸಲಾಗಿತ್ತು. ಈ ವರ್ಷ ಕೋವಿಡ್‌ ಸೋಂಕು ಇರುವುದರಿಂದ ಅಂತರ ಇರುವಂತೆ ಜನರನ್ನು ಇರಿಸುವ ಸವಾಲಿದೆ. ಸಮಸ್ಯೆ ಉದ್ಭವ ಆದಾಗಲೇ ಪರಿಹಾರ ಹುಡುಕುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದರು. ಈ ವರ್ಷವಾದರೂ ಸಮಸ್ಯೆಗಳನ್ನು ಅರಿತು ಮೊದಲೇ ಪರಿಹಾರ ಸಿದ್ಧ ಮಾಡಿಕೊಳ್ಳುವ ಅಗತ್ಯವಿದೆ.

ತುಂಗಭದ್ರಾದಲ್ಲೂ ಪ್ರವಾಹ: ತುಂಗಭದ್ರಾ ನದಿಯಲ್ಲೂ ಪ್ರವಾಹ ಆರಂಭವಾಗಿದೆ. ತುಂಗಭದ್ರಾ ಜಲಾಶಯದಿಂದ 8 ಸಾವಿರ ಕ್ಯುಸೆಕ್‌ ಅಡಿ ನೀರು ಹರಿಬಿಡಲಾಗುತ್ತಿದೆ. ಮಲೆನಾಡಿನಲ್ಲಿ ಮಳೆ ಮುಂದುವರಿದಿದ್ದು, ಪ್ರವಾಹ ಏರಿಕೆ ಆಗುವ ಸಾಧ್ಯತೆ ಇದೆ. ಒಂದೂವರೆ ಲಕ್ಷ ಕ್ಯುಸೆಕ್‌ ದಾಟಿದರೆ ಸಿಂಧನೂರು, ಮಾನ್ವಿ ತಾಲ್ಲೂಕಿನ ಕೆಲವು ಗ್ರಾಮಗಳ ಅಂಚಿಗೆ ಪ್ರವಾಹದ ನೀರು ನುಗ್ಗುತ್ತದೆ. 2009 ರಲ್ಲಿ ಉಂಟಾಗಿದ್ದ ಪ್ರವಾಹವನ್ನು ಅಧರಿಸಿ ಬಹುತೇಕ ಗ್ರಾಮಗಳನ್ನು ಸ್ಥಳಾಂತರಿಸಲಾಗಿದೆ. ಬೆರಳೆಣಿಕೆ ಗ್ರಾಮಗಳ ಜನರು ಇನ್ನೂ ಹಳೇ ಜಾಗದಲ್ಲಿಯೇ ವಾಸ ಇದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು