ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಜೂನ್‌, ಜುಲೈ ನಿರೀಕ್ಷೆ ಮೀರಿ ಮಳೆ

ರೈತ ಸಮುದಾಯದಲ್ಲಿ ಮನೆಮಾಡಿದ ಹರ್ಷ
Last Updated 1 ಆಗಸ್ಟ್ 2020, 16:39 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಜೂನ್‌, ಜುಲೈ ಮುಂಗಾರು ಮಳೆ ಕೃಷಿಗೆ ಪೂರಕವಾಗಿ ಹದವಾಗಿ ಸುರಿದಿದೆ. ಅತಿವೃಷ್ಟಿಯಿಂದ ಹಾನಿ ಆಗದಂತೆ ವಾಡಿಕೆಗಿಂತಲೂ ಹೆಚ್ಚು ಮಳೆ ಬಿದ್ದಿರುವುದು ವಿಶೇಷ.

ಜೂನ್‌ನಲ್ಲಿ ಶೇ 35 ರಷ್ಟು, ಜುಲೈನಲ್ಲಿ ಶೇ 75 ರಷ್ಟು ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ವಾಡಿಕೆ ಮಳೆ 85 ಮಿಲಿಮೀಟರ್‌, ಆದರೆ 115 ಮಿಲಿಮೀಟರ್‌ ಜೂನ್‌ನಲ್ಲಿ ಮಳೆ ಆಗಿದೆ. ಜುಲೈನಲ್ಲಿ ವಾಡಿಕೆ ಮಳೆ 93 ಮಿಲಿಮೀಟರ್‌ ಬದಲಿಗೆ 163 ಮಿಲಿಮೀಟರ್‌ ಮಳೆಯಾಗಿದೆ. ಪ್ರತಿಯೊಂದು ಹೋಬಳಿಯಲ್ಲೂ ಮಳೆಯಾಗಿದೆ. ಜಿಲ್ಲೆಯಾದ್ಯಂತ ದಿನಬಿಟ್ಟು ದಿನಕ್ಕೆ ಮಳೆ ಬಿದ್ದುದರಿಂದ ಹಾನಿಯಾಗಿಲ್ಲ.

ಜಿಲ್ಲೆಯಲ್ಲಿ ಮುಂಗಾರು ಆರಂಭದಲ್ಲಿ ಮಸ್ಕಿ ಮತ್ತು ಸಿರವಾರ ತಾಲ್ಲೂಕುಗಳಲ್ಲಿ ಅತಿಹೆಚ್ಚು ಮಳೆ ಸುರಿದಿದ್ದರಿಂದ ಬಿತ್ತನೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಿತ್ತು. ಬಹಳಷ್ಟು ರೈತರು ತೊಗರಿ ಹಾಗೂ ಹತ್ತಿ ಬಿತ್ತನೆ ಮಾಡಿದ್ದಾರೆ. ಜುಲೈನಲ್ಲಿ ಸುರಿದ ಅತಿಯಾದ ಮಳೆಯಿಂದ ಜಮೀನುಗಳಲ್ಲಿ ಬೆಳೆಗಿಂತಲೂ ಹೆಚ್ಚು ಕಳೆ ಬೆಳೆದು ನಿಂತಿರುವುದು ರೈತರಿಗೆ ತಲೆನೋವಾಗಿದೆ. ಇಳಿಜಾರು ಜಮೀನುಗಳಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಕೊಚ್ಚಿಹೋಗಿವೆ. ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ಸಂಗ್ರಹ ಆಗಿರುವುದು ಇನ್ನೂ ಒಣಗಿಲ್ಲ. ಸದ್ಯಕ್ಕೆ ಮಳೆ ಬಿಡುವುದು ನೀಡಿರುವುದರಿಂದ ಕಳೆ ತೆಗೆದು ಹಾಕುವುದಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಭತ್ತ ಬಿತ್ತನೆ ಆರಂಭಿಸಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಜೂನ್‌ನಲ್ಲಿ ಯಾದಗಿರಿ ನಂತರ ಅತಿಹೆಚ್ಚು ಮಳೆ ರಾಯಚೂರಿನಲ್ಲಿ ಸುರಿದಿದೆ. ಎರಡು ತಿಂಗಳುಗಳ ಅಂಕಿಅಂಶಗಳನ್ನು ಹೋಲಿಸಿದಾಗ ಕೊಪ್ಪಳದಲ್ಲಿ ವಾಡಿಕೆಗಿಂತ ಶೇ 92 ರಷ್ಟು ಅಧಿಕ ಮಳೆಯಾಗಿದೆ. ಬಳ್ಳಾರಿಯಲ್ಲಿ ಶೇ 78, ಯಾದಗಿರಿಯಲ್ಲಿ ಶೇ 69 ರಷ್ಟು ಮಳೆ ಅಧಿಕ ಸುರಿದಿದೆ. ಮುಂಗಾರಿನಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಶೇ 125 ರಷ್ಟು ಮಳೆ ಚಿತ್ರದುರ್ಗ ಜಿಲ್ಲೆಯಲ್ಲೆ ಆಗಿದೆ.

ಕಾಲುವೆಗಳಿಗೆ ನೀರು:ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) ಹಾಗೂ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ಕಾಲುವೆಗಳಿಗೂ ನೀರು ಹರಿಸುವ ಯೋಜನೆ ಶುರುವಾಗಿದೆ. ಭತ್ತ ಸಸಿ ಮಾಡಿಕೊಂಡಿರುವ ಕಾಲುವೆ ಭಾಗದ ರೈತರು ಈಗಾಗಲೇ ಬಿತ್ತನೆ ಆರಂಭಿಸಿದ್ದಾರೆ. ಮುಂಗಾರು ಅವಧಿಯಲ್ಲಿ ಹೆಚ್ಚು ಪ್ರದೇಶಗಳಲ್ಲಿ ಬಿತ್ತನೆ ಆಗಿರುವ ಹತ್ತಿ, ತೊಗರಿ, ಭತ್ತದ ಬೆಳೆಗಳು ಹುಲುಸಾಗಿ ಬೆಳೆಯುವುದಕ್ಕೆ ಸದ್ಯಕ್ಕೆ ವಾತಾವರಣ ಪೂರಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT