ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಕ್ರಮಣಕ್ಕೆ ನಲುಗದ ಮುದಗಲ್ ಕೋಟೆ ‘ಅತಿಕ್ರಮಣ’ಕ್ಕೆ ನಲುಗಿತು

ಜಿಲ್ಲಾಡಳಿತದ ನಿರ್ಲಕ್ಷ್ಯ: ರಾಜಧಾನಿಯ ಕುರುಹು ಮಣ್ಣುಪಾಲು, ಕುರಿ–ಮೇಕೆ ಕಟ್ಟುವ ಸ್ಥಳವಾಗಿ ಮಾರ್ಪಟ್ಟ ಪ್ರವೇಶ ದ್ವಾರಗಳು
Published : 12 ಆಗಸ್ಟ್ 2024, 7:12 IST
Last Updated : 12 ಆಗಸ್ಟ್ 2024, 7:12 IST
ಫಾಲೋ ಮಾಡಿ
Comments

ರಾಯಚೂರು: ಜಿಲ್ಲೆಯಲ್ಲಿ ಅನೇಕ ರಾಜ ಮನೆತನಗಳು ಆಳಿ ಹೋದ ಕುರುಹುಗಳು, ಸ್ಮಾರಕಗಳು ಇತಿಹಾಸ ಸಾರುತ್ತಿವೆ. ಆದರೆ, ಒಂದು ಕಾಲದಲ್ಲಿ ಸೇವಣರ ರಾಜಧಾನಿಯ ವೈಭವ ಮೆರೆದ ಮುದಗಲ್‌ನ ಕುರುಹು ಜಿಲ್ಲಾಡಳಿತದ ನಿರ್ಲಕ್ಷದಿಂದ ಮಣ್ಣು ಪಾಲಾಗುತ್ತಿದೆ. ಸ್ವಾತಂತ್ರ್ಯದ ನಂತರವೂ ಸುಸ್ಥಿತಿಯಲ್ಲಿದ್ದ ಕೋಟೆ ಇದೀಗ ಅತಿಕ್ರಮಣಕಾರರ ಹಾವಳಿಯಿಂದ ನಲುಗಿದೆ.

ಜಿಲ್ಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸ್ಮಾರಕಗಳಿದ್ದರೂ ಒಂದೇ ಒಂದು ಸ್ಮಾರಕ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಅಧೀನದಲ್ಲಿಲ್ಲ. ಮುದಗಲ್‌ನ ಐತಿಹಾಸಿಕ ಕೋಟೆ ರಾಜ್ಯ ಪುರಾತತ್ವ ಇಲಾಖೆಯ ಅಧೀನದಲ್ಲಿ ಇದ್ದರೂ ಇಲ್ಲದ ಲೆಕ್ಕದಲ್ಲೇ ಇದೆ.

ಮುದಗಲ್‌ ಕೋಟೆ ಗೋಡೆಯನ್ನೂ ಬಿಡದಂತೆ ಭೂಗಳ್ಳರು ಅತಿಕ್ರಮಣ ಮಾಡಿದ್ದಾರೆ. ಕೋಟೆಯ ಸಭಾ ಮಂಟಪಗಳು, ಪ್ರವೇಶ ದ್ವಾರಗಳಲ್ಲಿರುವ ಕೊಠಡಿಗಳು ಕುರಿ–ಮೇಕೆಗಳನ್ನು ಕಟ್ಟುವ ಹಾಗೂ ಕೈಗಾಡಿಗಳನ್ನು ಇಡುವ ಸ್ಥಳವಾಗಿದೆ. ಕೋಟೆಯ ಬುರ್ಜ ಮೇಲೆ ತೋಪು ಇದ್ದರೂ ಇಲ್ಲಿನ ಜನ ಕೋಟೆ ಗೋಡೆ ಹಾಗೂ ವೀಕ್ಷಣಾ ಗೋಪುರಗಳನ್ನು ಬಯಲು ಶೌಚಕ್ಕೆ ಬಳಸುತ್ತಿರುವುದು ಶೋಚನೀಯ ಸ್ಥಿತಿಯನ್ನು ಬಿಂಬಿಸುತ್ತಿದೆ.

ಅತಿಕ್ರಮಣಕಾರರೊಬ್ಬರು ಪುರಾತನ ಗರಡಿ ಮನೆಯನ್ನೇ ಅತಿಕ್ರಮಣ ಮಾಡಿಕೊಂಡು ಅದರ ಮೇಲೆ ಕಟ್ಟಡ ಕಟ್ಟಿದ್ದಾರೆ. ಅರಳಿ ಮರಗಳು ಬೇರುಬಿಟ್ಟು ಕೋಟೆ ಗೋಡೆಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿವೆ. ಕೋಟೆಯ ಕಲ್ಲು ಕಿತ್ತುಕೊಂಡು ಜನ ಮನೆಗಳನ್ನು ಕಟ್ಟಿಕೊಳ್ಳಲು ಆರಂಭಿಸಿದ್ದಾರೆ.

ವೈರಿಗಳ ದಾಳಿ ತಡೆಯಲು ಕೋಟೆಯ ಪ್ರವೇಶ ದ್ವಾರಗಳ ಮೂಲಕ ಹೋಗುವ ಮಾರ್ಗಗಳನ್ನು ಅರ್ಧ ಚಕ್ರಾಕಾರದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ ವಾಹನಗಳ ಸಂಚಾರ ನಿಷೇಧಿಸದ ಕಾರಣ ಭಾರಿ ವಾಹನಗಳನ್ನು ಒಳಗೆ ನುಗ್ಗಿಸಲಾಗುತ್ತಿದೆ. ಈಚೆಗೆ ಭಾರಿ ವಾಹನವೊಂದು ರಾತ್ರಿ ವೇಳೆಯಲ್ಲಿ ಒಳಗೆ ಬಂದು ಕಟ್ಟಡಕ್ಕೆ ಗುದ್ದಿದೆ. ಪ್ರವೇಶ ಮಂಟಪದ ಶಿಲಾಸ್ತಂಭಕ್ಕೆ ಹಾನಿಯಾಗಿದ್ದು, ಉರುಳಿ ಬೀಳುವಂಥ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾ ಮಟ್ಟದಲ್ಲಿರುವ ಸ್ಮಾರಕ ಸಂರಕ್ಷಣಾ ಸಮಿತಿಗೆ ಜಿಲ್ಲಾಧಿಕಾರಿಯೇ ಅಧ್ಯಕ್ಷರು. ಆದರೆ, ಒಬ್ಬ ಜಿಲ್ಲಾಧಿಕಾರಿಯೂ ಇವುಗಳ ರಕ್ಷಣೆಯ ವಿಷಯದಲ್ಲಿ ಗಂಭೀರವಾಗಿ ಸಭೆ ನಡೆಸಿದ ದಾಖಲೆಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿಲ್ಲ. ಇತಿಹಾಸ ಪ್ರೇಮಿಗಳು ಹಾಗೂ ಹೋರಾಟಗಾರರು ಕೊಡುವ ಮನವಿಪತ್ರಗಳು ಕಸದ ಬುಟ್ಟಿ ಸೇರಿವೆ.

ಜಿಲ್ಲಾಡಳಿತ, ಚುನಾಯಿತ ಪ್ರತಿನಿಧಿಗಳ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ಸ್ಮಾರಕಗಳು ಪ್ರತಿವರ್ಷ ನಿಧಾನವಾಗಿ ನೆಲಕ್ಕೆ ಉರುಳುತ್ತಿವೆ. ಅತಿಕ್ರಮಣಕಾರರು ಕೋಟೆ ಗೋಡೆಗಳಲ್ಲಿನ ಮಣ್ಣು ತೆಗೆದು ಸಡಿಲಗೊಳಿಸಿ ಹಾನಿ ಉಂಟು ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಕೋಟೆ ಗೋಡೆ ಹಾಗೂ ಪ್ರವೇಶ ದ್ವಾರದ ಮಂಟಪಗಳಲ್ಲಿರುವ ಗಣಪತಿ, ವಿಷ್ಣು, ಶಿಲಾ ಬಾಲಕಿಯರು ಹಾಗೂ ದ್ವಾರ ಪಾಲಕರ ಮೂರ್ತಿಗಳನ್ನು ಭಗ್ನಗೊಳಿಸಲಾಗಿದೆ. ಮೂರ್ತಿಗಳನ್ನು ಹಾಳು ಮಾಡುವ ಕೆಲಸ ಇಲ್ಲಿ ನಿತ್ಯ ನಡೆಯುತ್ತಿದ್ದರೂ ಕೇಳುವವರಿಲ್ಲ.

ಕ್ಷೇತ್ರದ ಶಾಸಕರಿಗೆ ಹಾಗೂ ಸಚಿವರಿಗೆ ಜಿಲ್ಲೆ ಅಭಿವೃದ್ಧಿಯಾಗಬೇಕು. ಪ್ರವಾಸೋದ್ಯಮ ಬೆಳೆಯಬೇಕು ಎನ್ನುವ ಮನಸ್ಸು ಕಿಂಚಿತ್ತೂ ಇಲ್ಲ. ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸಹ ಆಸಕ್ತಿಯಿಂದ ಸ್ಮಾರಕಗಳ ರಕ್ಷಣೆಗೆ ಒತ್ತು ಕೊಡುತ್ತಿಲ್ಲ. ಎರಡು ವರ್ಷ ಕೆಲಸ ಮಾಡಿ ಇಲ್ಲಿಂದ ನಿರ್ಗಮಿಸುತ್ತಿದ್ದಾರೆ. ಜನಪರ ಕಾಳಜಿ ಹೊಂದಿರುವ ಒಬ್ಬ ಅಧಿಕಾರಿಯೂ ಜಿಲ್ಲೆಗೆ ಬಂದಿಲ್ಲ ಎನ್ನುವುದೇ ಜಿಲ್ಲೆಯ ದುರ್ದೈವ.

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿಯೂ ಒಂದು ಆಗ್ರಾ ಮಾದರಿಯ ಚಿಕ್ಕ ತಾಜಮಹಲ್ (ಬೀಬಿಕಾ ಮಕಬರಾ) ಇರುವಂತೆ ಮುದಗಲ್‌ ಬೆಟ್ಟದ ಮೇಲೂ ಹೈದರಾಬಾದ್‌ ಮಾದರಿಯ ಚಿಕ್ಕ ಚಾರ್‌ಮಿನಾರ್‌ ಇದೆ. ಅದನ್ನೂ ಸಹ ಕಿಡಿಗೇಡಿಗಳು ಹಾಳು ಮಾಡಿದ್ದಾರೆ. ಮತ ರಾಜಕೀಯ ಅಭಿವೃದ್ಧಿಯನ್ನು ಮಣ್ಣು ಪಾಲು ಮಾಡಿದೆ. ಒಂದು ಅವಧಿಯಲ್ಲಿ ಸಾಂಸ್ಕೃತಿಕ ಸಿರಿವಂತಿಕೆಯನ್ನು ಮೆರೆದ ಮುದಗಲ್‌ ಇಂದು ಹಾಳು ಊರಿನ ಹಣೆಪಟ್ಟಿಕೊಳ್ಳಬೇಕಾದ ಸ್ಥಿತಿಗೆ ಬಂದಿದೆ.

ಮುದಗಲ್‌ನಲ್ಲಿ ಮೊಹರಂ ಆಚರಣೆ ಪೂರ್ವದಲ್ಲಿ ಸಿದ್ಧತೆಯ ನೆಪದಲ್ಲಿ ಪುರಸಭೆ ಅಧಿಕಾರಿಗಳು ಜೆಸಿಬಿ ಬಳಸಿ ಕಂದಕ ಮುಚ್ಚಿದರೂ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತುಕೊಂಡಿತು. ಇಲ್ಲಿಯ ಜನ ಜಿಲ್ಲಾಧಿಕಾರಿ ಸೇರಿ ಹಿರಿಯ ಅಧಿಕಾರಿಗಳಿಗೆ ಫೋನ್‌ ಕರೆ ಮಾಡಿದ್ದರು. ವಾಟ್ಸ್‌ಆ್ಯಪ್ ಸಂದೇಶ ಕಳಿಸಿದರೂ ಸ್ಪಂದಿಸಲಿಲ್ಲ. ಪತ್ರಿಕೆಗಳು ಇಲ್ಲಿನ ಅವ್ಯವಸ್ಥೆಯನ್ನೂ ಬಿಚ್ಚಿಟ್ಟರೂ ಎಚ್ಚೆತ್ತುಕೊಳ್ಳಲಿಲ್ಲ. ಅಧಿಕಾರಿಗಳ ಜಾಣಮೌನ ನಡೆ ಹಲವು ಅಕ್ರಮಗಳಿಗೆ ದಾರಿ ಮಾಡಿಕೊಡುತ್ತಿದೆ.

ಕೋಟೆ ಪ್ರವೇಶ ದ್ವಾರದಿಂದ ಒಳಗಡೆ ಪುರಸಭೆಯು ರಸ್ತೆ ಡಾಂಬರೀಕರಣ ಮಾಡಿದೆ. ರಾಜ್ಯ ಪುರಾತತ್ವ ಇಲಾಖೆಯ ಒಂದು ಫಲಕವೂ ಇಲ್ಲಿಲ್ಲ. ಪ್ರವಾಸೋದ್ಯಮ ಇಲಾಖೆ ಇಲ್ಲಿ ಒಂದು ಫಲಕ ಹಾಕಿದ್ದನ್ನು ಬಿಟ್ಟರೆ ಏನನ್ನೂ ಮಾಡಿಲ್ಲ. ಪ್ರವಾಸಿ ಮಿತ್ರ ಅಡಿಯಲ್ಲಿ ನೇಮಕ ಮಾಡಿರುವ ಕಾವಲುಗಾರರೊಬ್ಬರು ಬೆಳಿಗ್ಗೆಯಿಂದ ಸಂಜೆವರೆಗೂ ಇಲ್ಲಿ ಇರುತ್ತಾರೆ. ಅವರು ರಾತ್ರಿ ಮನೆಗೆ ಹೋದ ಮೇಲೆ ಅಕ್ರಮ ಚಟುವಟಿಕೆಗಳು ಶುರುವಾಗುತ್ತವೆ. ಇನ್ನೊಬ್ಬ ಕಾವಲುಗಾರನನ್ನು ನೇಮಕ ಮಾಡಬೇಕು ಎನ್ನುವುದು ಇತಿಹಾಸ ಪ್ರೇಮಿಗಳ ಒತ್ತಾಯವಾಗಿದೆ.

ಮುದಗಲ್‌ ಪಟ್ಟಣ ಜಿಲ್ಲಾ ಕೇಂದ್ರದಿಂದ 120 ಕಿ.ಮೀ ದೂರದಲ್ಲಿದೆ. ಇಳಕಲ್ ತಾಲ್ಲೂಕಿನೊಂದಿಗೆ ಗಡಿ ಹಂಚಿಕೊಂಡಿದೆ. ಜಿಲ್ಲಾ ಕೇಂದ್ರದಿಂದ ಹೆಚ್ಚು ದೂರವಿರುವ ಕಾರಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಸಹಕಾರ: ಶರಣಪ್ಪ ಆನೆಹೊಸೂರ

ರಾಯಚೂರು ಜಿಲ್ಲೆಯ ಮುದಗಲ್‌ ಕೋಟೆ
ರಾಯಚೂರು ಜಿಲ್ಲೆಯ ಮುದಗಲ್‌ ಕೋಟೆ
ಮುದಗಲ್‌ ಕೋಟೆ ಕಾವಲು ಮಂಟಪಕ್ಕೆ ಲಾರಿ ಡಿಕ್ಕಿ ಹೊಡೆದ ಕಾರಣ ಕಂಬ ವಾಲಿದ್ದು ಕಟ್ಟಡಕ್ಕೆ ಹಾನಿಯಾಗಿದೆ
ಮುದಗಲ್‌ ಕೋಟೆ ಕಾವಲು ಮಂಟಪಕ್ಕೆ ಲಾರಿ ಡಿಕ್ಕಿ ಹೊಡೆದ ಕಾರಣ ಕಂಬ ವಾಲಿದ್ದು ಕಟ್ಟಡಕ್ಕೆ ಹಾನಿಯಾಗಿದೆ
ಮುದಗಲ್‌ ಕೋಟೆಯ ದ್ವಾರ ಮಂಟಪದಲ್ಲಿ ಮೇಕೆಗಳನ್ನು ಕಟ್ಟಲಾಗಿದೆ
ಮುದಗಲ್‌ ಕೋಟೆಯ ದ್ವಾರ ಮಂಟಪದಲ್ಲಿ ಮೇಕೆಗಳನ್ನು ಕಟ್ಟಲಾಗಿದೆ
ಮುದಗಲ್‌ ಕೋಟೆ
ಮುದಗಲ್‌ ಕೋಟೆ
ಮುದಗಲ್‌ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಚಾರ್‌ಮಿನಾರ್ ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ವಿರೂಪಕೊಂಡಿದೆ
ಮುದಗಲ್‌ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಚಾರ್‌ಮಿನಾರ್ ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ವಿರೂಪಕೊಂಡಿದೆ
ಮುದಗಲ್‌ ಕೋಟೆಯೊಳಗೆ ಇರುವ ವಿಜಯನಗರ ಅರಸರ ಕಾಲದ ಮೊಗಸಾಲೆಯಲ್ಲಿನ ಶಿಲಾಸ್ತಂಭದ ಮೇಲಿರುವ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ
ಮುದಗಲ್‌ ಕೋಟೆಯೊಳಗೆ ಇರುವ ವಿಜಯನಗರ ಅರಸರ ಕಾಲದ ಮೊಗಸಾಲೆಯಲ್ಲಿನ ಶಿಲಾಸ್ತಂಭದ ಮೇಲಿರುವ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ

ರಕ್ಷಣೆಗೆ ಇನ್ನೂ ಕಾಲ ಮಿಂಚಿಲ್ಲ ಮುದಗಲ್‌ ಕೋಟೆ ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಸೇರಿದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಈವರೆಗೂ ಸಂರಕ್ಷಣೆ ಮಾಡದ ಸ್ಮಾರಕಗಳನ್ನು ಸಂರಕ್ಷಣೆ ಮಾಡುವ ಅಧಿಕಾರ ಎಎಸ್ಐಗೆ ಇದೆ. ಲಿಂಗಸುಗೂರು ಶಾಸಕರು ಒಂದು ಪತ್ರಕೊಟ್ಟು ಸಂರಕ್ಷಣೆ ಮಾಡಿ ಎಂದು ಮನವಿ ಮಾಡಿಕೊಂಡರೂ ಪ್ರಕ್ರಿಯೆ ಆರಂಭಿಸಲು ಅವಕಾಶ ಇದೆ. ಆದರೆ ಇಲ್ಲಿಯವರೆಗೆ ಒಬ್ಬ ಶಾಸಕರೂ ಸ್ಮಾರಕ ರಕ್ಷಣೆಗೆ ಪತ್ರಕೊಟ್ಟಿರುವ ದಾಖಲೆಗಳಿಲ್ಲ. ಲೋಕಸಭಾ ಕ್ಷೇತ್ರದ ಶಾಸಕರು ಸಹ ಒಂದು ಪತ್ರ ಕೊಟ್ಟರೂ ಸಾಕು ಎಎಸ್‌ಐಯಿಂದ ಸಂರಕ್ಷಣಾ ಕಾರ್ಯ ಶುರುವಾಗಲಿದೆ. ಹಿಂದಿನ ಸಂಸದರು ಪತ್ರಕೊಡುವುದಿರಲಿ ಸಂಸತ್ತಿನಲ್ಲಿ ಸ್ಮಾರಕ ರಕ್ಷಣೆಗೆ ತುಟಿ ಬಿಚ್ಚಿದ ಉದಾಹರಣೆ ಇಲ್ಲ. ಹೊಸದಾಗಿ ಸಂಸದರಾಗಿ ಆಯ್ಕೆಯಾದ ನಿವೃತ್ತ ಐಎಎಸ್‌ ಅಧಿಕಾರಿಯೂ ಈಗ ಜನರ ಕೈಗೆ ಸಿಗುತ್ತಿಲ್ಲ. ಜನರ ಮೊಬೈಲ್‌ ಕರೆಗಳನ್ನೇ ಸ್ವೀಕರಿಸುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸ್ಮಾರಕ ಸಂರಕ್ಷಣಾ ಸಮಿತಿಗೆ ಜಿಲ್ಲಾಧಿಕಾರಿಯೇ ಅಧ್ಯಕ್ಷರಾಗಿರುತ್ತಾರೆ. ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಬೇಕು. ಜಿಲ್ಲಾಧಿಕಾರಿಯವರು ಹಂಪಿ ವೃತ್ತದ ಅಧೀಕ್ಷಕರ ಮೂಲಕ ಎಎಸ್‌ಐ ನಿರ್ದೇಶಕರಿಗೆ ಒಂದು ಲಿಖಿತ ಪತ್ರ ಬರೆದರೂ ಸಾಕು ಐಎಸ್‌ಐ ಸಂರಕ್ಷಣೆ ಕಾರ್ಯವನ್ನು ಆರಂಭಿಸಲಿದೆ. ಮುದಗಲ್‌ ಕೋಟೆ ಸಂರಕ್ಷಣೆಗೆ ಇನ್ನೂ ಕಾಲ ಮಿಂಚಿಲ್ಲ. ಜಿಲ್ಲಾಧಿಕಾರಿ ಶಾಸಕರು ಅಥವಾ ಸಂಸದರು ಒಂದು ಪತ್ರ ಕೊಟ್ಟರೂ ಸಾಕು ಎಎಸ್‌ಐ ಸಂರಕ್ಷಣೆಗೆ ಮುಂದಾಗಲಿದೆ ಎಂದು ಎಎಸ್‌ಐ ಹಂಪಿ ವೃತ್ತದ ಅಧಿಕಾರಿಗಳು ಹೇಳುತ್ತಾರೆ.

ಅತಿಕ್ರಮಣದಿಂದಾಗಿ ಸಮಸ್ಯೆ ಮುದಗಲ್‌ ಕೋಟೆ ಸಂರಕ್ಷಣೆಗೆ ಪುರಾತತ್ವ ಇಲಾಖೆ ಬದ್ಧವಾಗಿದೆ. ಕೋಟೆಯನ್ನೇ ಅತಿಕ್ರಮಣ ಮಾಡಿದವರನ್ನು ತೆರವುಗೊಳಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಪಟ್ಟಣದ ಕೊಳಚೆ ನೀರನ್ನು ಪುರಸಭೆಯವು ಕಂದಕಕ್ಕೆ ಹರಿಯ ಬಿಟ್ಟಿದೆ. ಅದನ್ನು ತಡೆಯುವಂತೆ ಈಗಾಗಲೇ ಮುದಗಲ್‌ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದು ಕಲಬುರಗಿಯಲ್ಲಿರುವ ರಾಜ್ಯ ಪುರಾತತ್ವ ಇಲಾಖೆಯ ಪುರಾತತ್ವ ಸಂರಕ್ಷಣಾ ಎಂಜಿನಿಯರ್ ಪ್ರೇಮಲತಾ ಬಿ.ಎಂ. ಹೇಳಿದರು. ‘ಮೊಹರಂ ಸಂದರ್ಭದಲ್ಲಿ ಪುರಸಭೆ ಜೆಸಿಬಿ ಬಳಸಿ ನೆಲ ಸಮತಟ್ಟುಗೊಳಿಸಿದೆ ಅಲ್ಲದೇ ಮುರಂ ತಂದು ಹಾಕಿದೆ. ಕೋಟೆ ಆವರಣವನ್ನು ಖಾಸಗಿಯವರಿಗೆ ಬಾಡಿಗೆ ಕೊಟ್ಟಿರುವ ದೂರುಗಳು ಬಂದ ನಂತರ ಮುಖ್ಯಾಧಿಕಾರಿಗೆ ನೋಟಿಸ್‌ ಕೊಡಲಾಗಿದೆ’ ಎಂದು ತಿಳಿಸಿದರು. ‘ಕೋಟೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಸರ್ಕಾರ ಒಪ್ಪಿಗೆ ನೀಡಿದ ತಕ್ಷಣ ಅಭಿವೃದ್ಧಿ ಕಾರ್ಯ ಆರಂಭಿಸುತ್ತೇವೆ’ ಎಂದು ಹೇಳಿದರು.

ಆಳ್ವಿಕೆ ಮಾಡಿದ ರಾಜ ವಂಶಗಳು ಶಾತವಾಹನರು ಕದಂಬರು ಕಲ್ಯಾಣ ಚಾಲುಕ್ಯರು ಸೇವುಣರು ವಿಜಯನಗರ ಅರಸರು ವಿಜಯಪುರದ ಆದಿಲ್ ಶಾಹಿಗಳು ಮೊಘಲರು ಹೈದರಾಬಾದ್ ನಿಜಾಮರು ಮುದಗಲ್‌ ಪ್ರದೇಶವನ್ನು ಆಳಿದ್ದಾರೆ. ಕರಡಿಕಲ್ಲಿನ ಕದಂಬ ಅರಸ ಬಿಜ್ಜರಸನು ಕರಡಿಕಲ್ಲು ಮುದಗಲ್ ಅನ್ನು ರಾಜಧಾನಿಯಾಗಿ ಮಾಡಿಕೊಂಡು ಆಳುತ್ತಿದ್ದ ಎಂದು ಕರಡಕಲ್ಲ ಕುಣಿಸೋಮೇಶ್ವರ ದೇವಾಲಯದಲ್ಲಿರುವ ಶಾಸನ ಹೇಳುತ್ತದೆ.

ಅಭಿಪ್ರಾಯಗಳು ಮುದಗಲ್‌ನಲ್ಲಿ ಹಿಂದೂ ಜೈನ್ ಮುಸ್ಲಿಂ ಕ್ರೈಸ್ತ ಧರ್ಮಗಳಿಗೆ ಸೇರಿದ ಅನೇಕ ಸ್ಮಾರಕಗಳು ಇವೆ.  ಕನ್ನಡ ಗುಜರಾತಿ ಪರ್ಷಿಯನ್ ತೆಲುಗು ಸಂಸ್ಕೃತ ಅರೆಬಿಕ್ ಭಾಷೆಗಳ 100 ಕ್ಕೂ ಹೆಚ್ಚು ಶಾಸನಗಳಿವೆ. ಇವುಗಳ ರಕ್ಷಣೆಗೆ ಸರ್ಕಾರ ಮುಂದಾಗಿಲ್ಲ. ಕೋಟೆ ಗೋಡೆ ಕುಸಿಯುತ್ತಿದ್ದರಿಂದ ಶಾಸನಗಳು ಕುಸಿದ ಗೋಡೆಯ ಕಲ್ಲಿನಲ್ಲಿ ಮುಚ್ಚಿ ಹಾಳಾಗುತ್ತಿವೆ. ಸರ್ಕಾರ ಇಲ್ಲಿನ ಸ್ಮಾರಕಗಳ ರಕ್ಷಣೆಗೆ ಮುಂದಾಗಬೇಕು. ರಕ್ಷಣೆ ಮಾಡಲು ಪ್ರವಾಸೋದ್ಯಮ ಇಲಾಖೆ ಒಬ್ಬ ಕಾವಲುಗಾರನನ್ನು ನೇಮಕ ಮಾಡಿದರೆ ಸಾಲದು ರಾತ್ರಿ ಕಾವಲು ಮಾಡಲು ಇನ್ನೊಬ್ಬರನ್ನು ನೇಮಕ ಮಾಡಬೇಕು. ಗುರುಬಸಪ್ಪ ಸಜ್ಜನ ಇತಿಹಾಸ ಪ್ರೇಮಿ ವಿನಾಶದಂಚಿನಲ್ಲಿರುವ ಮುದಗಲ್ ಕೋಟೆ ಶಾಸನ ಫಿರಂಗಿ ಸೇರಿದಂತೆ ವಿವಿಧ ಸ್ಮಾರಕಗಳ ರಕ್ಷಣೆ ಮಾಡಬೇಕು. ಮುದಗಲ್ ಗೆ ಪ್ರವಾಸಿಗರು ಬರುವಂತೆ ಪ್ರಚಾರ ನೀಡಬೇಕು. ಪ್ರವಾಸಿಗರು ಪಟ್ಟಣಕ್ಕೆ ಬಂದರೆ ಇಲ್ಲಿನ ಜನರಿಗೆ ಅನೇಕ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇದರಿಂದ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಬೇಕು. ಮುದಗಲ್ ಉತ್ಸವ ಮಾಡಲು ಸರ್ಕಾರ ಮುಂದಾಗಬೇಕು. ಕೋಟೆ ಮೇಲೆ ಬೆಳೆದ ಗಿಡ ಮರಗಳು ಬೇರು ಬಿಟ್ಟು ಹಾನಿಮಾಡುತ್ತಿವೆ. ಅವುಗಳನ್ನು ತೆರವುಗೊಳಿಸಬೇಕು. ಸ್ಮಾರಕಗಳ ರಕ್ಷಣೆಗೆ ಸ್ಥಳೀಯ ಪುರಸಭೆ ಅನುದಾನ ನೀಡಬೇಕು. ಅಶೋಕಗೌಡ ಪಾಟೀಲ ಆದಾಪುರ ಮುದಗಲ್‌ ಪುರಸಭೆ ಮಾಜಿ ಅಧ್ಯಕ್ಷ ಹಾಳಾಗುತ್ತಿರುವ ಶಾಸನಗಳನ್ನು ಒಂದಡೆ ಇಟ್ಟು ರಕ್ಷಣೆಗೆ ಮುಂದಾಗಬೇಕು. ಸ್ಮಾರಕಗಳ ರಕ್ಷಣೆಗೆ ಸ್ಥಳೀಯರು ಸಹ ಮುಂದೆ ಬರಬೇಕು. ಪ್ರವಾಸೋದ್ಯಮ ಬೆಳೆದರೆ ಇಲ್ಲಿಯ ಜನರ ಜೀವನಮಟ್ಟದಲ್ಲೂ ಸುಧಾರಣೆಯಾಗಲಿದೆ. ಸ್ಮಾರಕ ರಕ್ಷಣೆಗೆ ಅಧಿಕಾರಿಗಳು ವಿಶೇಷ ಯೋಜನೆಗಳನ್ನು ರೂಪಿಸಬೇಕು. ನಾಗರಾಜ ಗಸ್ತಿ ಲಿಂಗಸುಗೂರಿನ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT