ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಗ್ಯವಲ್ಲದ ಭೂಮಿ ಖರೀದಿಸಿದ್ದು ನಾಡಗೌಡ’

ಸುದ್ದಿಗೋಷ್ಠಿಯಲ್ಲಿ ಶಾಸಕ ಹಂಪನಗೌಡ ಆರೋಪ
Published 8 ಜೂನ್ 2024, 15:13 IST
Last Updated 8 ಜೂನ್ 2024, 15:13 IST
ಅಕ್ಷರ ಗಾತ್ರ

ಸಿಂಧನೂರು: ‘ನಗರದಲ್ಲಿ ನೀರಿನ ಸಮಸ್ಯೆ ಉದ್ಭವಿಸಿರುವುದಕ್ಕೆ ಕಾರಣ ಪುರುಷ ವೆಂಕಟರಾವ್ ನಾಡಗೌಡ. ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ತುರ್ವಿಹಾಳ ಬಳಿ ಕೆರೆ ನಿರ್ಮಾಣಕ್ಕೆ ಯೋಗ್ಯವಲ್ಲದ 259 ಎಕರೆ ಜಮೀನು ಖರೀದಿ ಮಾಡಿದ್ದರಿಂದಲೇ ಈಗ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ’ ಎಂದು ಶಾಸಕ ಹಂಪನಗೌಡ ಬಾದರ್ಲಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು,‘ಕೆರೆ ನಿರ್ಮಾಣಕ್ಕೆ ಭೂಮಿ ಯೋಗ್ಯವಾಗಿದೆಯೋ ಸಮತಟ್ಟಾಗಿದೆಯೋ ಇಲ್ಲವೋ ಎಂದು ಪರಿಶೀಲಿಸದೆ, ಮಣ್ಣಿನ ಪರೀಕ್ಷೆ ಮಾಡಿಸದೆ ನಾಡಗೌಡ ಭೂಮಿ ಖರೀದಿ ಮಾಡಿದ್ದಾರೆ. ಒಂದು ಕಡೆ ಗುಡ್ಡವಿದೆ. ಇನ್ನೊಂದೆಡೆ ಇಳಿಜಾರು ಭೂಮಿ ಇದೆ. ತಳಪಾಯ ಸರಿಯಾಗಿಲ್ಲ. ಭೂಮಿ ಅಧಿಕ ಪ್ರಮಾಣದ ನೀರು ಹೀರಿಕೊಳ್ಳುತ್ತಿದೆ. ಆದ್ದರಿಂದಲೇ ತಾವು ಶಾಸಕರಾದ ನಂತರ ಜಿಲ್ಲಾಧಿಕಾರಿ, ಎಂಜಿನಿಯರ್‌ಗಳ ಸಭೆ ನಡೆಸಿ, ತೇವಾಂಶ ಜಾಸ್ತಿಯಾಗಿ ಕೆರೆಯ ಬಂಡ್ ಹೊಡೆಯುವ ಸಾಧ್ಯತೆ ಇರುವುದರಿಂದ ಎರಡು ಹಂತದಲ್ಲಿ ಕೆರೆ ನಿರ್ಮಿಸಬೇಕೆಂಬ ತೀರ್ಮಾನ ಕೈಗೊಂಡು ಮೊದಲನೇ ಹಂತದ ಕೆರೆ ನಿರ್ಮಿಸಲಾಗಿದೆ’ ಎಂದರು.

ಕೆ.ವಿರೂಪಾಕ್ಷಪ್ಪ, ನಾಡಗೌಡ ಹಾಗೂ ನಾನು ಶಾಸಕರಾಗಿದ್ದಾಗಲೂ ರಾಯಚೂರಿನ ಬಂಗಾರಪ್ಪ ಕೆರೆ ತುಂಬಿಸಿದ ನಂತರವೇ ಸಿಂಧನೂರು ಕೆರೆಯನ್ನು ತುಂಬಿಸಲಾಗಿದೆ. ಈ ಬಾರಿ 450 ಎಚ್‍ಪಿ 3 ಮೋಟರ್ ಕೂರಿಸಿ 8 ದಿನಗಳ ಕಾಲ ತುರ್ವಿಹಾಳ ಕೆರೆಗೆ ನೀರು ಹರಿಸಲಾಗಿದೆ. ನಗರಸಭೆ, ಪಿಡಿಒಗಳ ಜೊತೆಗೆ ಹಲವು ಬಾರಿ ಸಭೆ ನಡೆಸಿ, 6 ತಿಂಗಳುಗಳ ಕಾಲ ನಿರ್ವಹಣೆ ಮಾಡಿ ನೀರು ಹರಿಸಲಾಗಿದೆ. ಮಳೆ ಕೊರತೆಯಿಂದ ನೀರಿನ ಸಮಸ್ಯೆ ಉದ್ಭವಿಸಿದೆ ಎಂದು ತಿಳಿಸಿದರು.

ನಾಡಗೌಡರು ತುರ್ವಿಹಾಳ ಬಳಿ ಕೆರೆ ನಿರ್ಮಾಣಕ್ಕೆ ಯೋಗ್ಯ ಭೂಮಿ ಖರೀದಿಸಿದ್ದರೆ 259 ಎಕರೆ ಭೂಮಿಯಲ್ಲಿ ಸಂಪೂರ್ಣ ಕೆರೆ ನಿರ್ಮಿಸಬಹುದಾಗಿತ್ತು. ನಗರದ ಜನತೆಗೆ ಕುಡಿಯುವ ನೀರಿನ ತೊಂದರೆಯೂ ಆಗುತ್ತಿರಲಿಲ್ಲ. ಅವರು ಭೂಮಿ ಮಾತ್ರ ಖರೀದಿಸಿದ್ದಾರೆ. ನಾನು ಶಾಸಕನಾದ ನಂತರ ಸರ್ಕಾರದಿಂದ ₹99 ಕೋಟಿ ತಂದು 110 ಎಕರೆಯಲ್ಲಿ ಕೆರೆ ನಿರ್ಮಿಸಿ, ಸಿಂಧನೂರಿನ ದೊಡ್ಡ ಕೆರೆಯವರೆಗೆ ರೈಸಿಂಗ್ ಪೈಪ್‍ಲೈನ್ ಹಾಕಿಸಿ, ಫಿಲ್ಟರ್ ಅಳವಡಿಸಿ, 5 ಒಎಚ್‍ಟಿ ಜೋಡಿಸಿ, ಮನೆ ಮನೆಗೆ ಹೊಸ ನಳಗಳ ಪೈಪ್‍ಲೈನ್ ಹಾಕಿಸಿ ನೀರು ಪೂರೈಸಲಾಗಿದೆ ಎಂದರು.

ತುರ್ವಿಹಾಳ ಕೆರೆ ನಿರ್ಮಾಣ ಕಾಮಗಾರಿ ಇನ್ನೂ ಬಾಕಿಯಿದೆ. ಗುತ್ತಿಗೆದಾರರಿಗೆ ₹9 ಕೋಟಿ ಹಣ ಪಾವತಿಸುವುದು ಬಾಕಿ ಇದೆ. ಗುತ್ತಿಗೆ ಕಂಪನಿಯನ್ನು ಟರ್ಮಿನೇಟ್ ಮಾಡಲು ಪತ್ರ ಬರೆಯಲಾಗಿದೆ. ಆದರೆ ಗುತ್ತಿಗೆದಾರ ಕಲ್ಕತ್ತಾ ಕೋರ್ಟ್‍ನಿಂದ ತಡೆ ತಂದಿದ್ದಾರೆ. ಎರಡನೇ ಹಂತದ ಕೆರೆ ನಿರ್ಮಾಣಕ್ಕಾಗಿ ₹30 ಕೋಟಿ ಹಾಗೂ ₹120 ಕೋಟಿ ವೆಚ್ಚದ ಎರಡು ಡಿಪಿಆರ್ ತಯಾರಿಸಲಾಗಿದೆ. ಸರ್ಕಾರ ಒಪ್ಪಿಗೆ ಕೊಟ್ಟರೆ ಟೆಂಡರ್ ಕರೆದು ಕೆರೆ ಕಾಮಗಾರಿ ಆರಂಭಿಸಲಾಗುವುದು ಎಂದರು.

ಕ್ರೀಡಾಂಗಣ ಕಾಮಗಾರಿ ಅರ್ಧವಾಗಿದ್ದು, ತೀರಾ ಕಳಪೆಯಿಂದ ಕೂಡಿದೆ. ಇನ್ನೂ ₹1 ಕೋಟಿ ಹಣ ಉಳಿದಿದ್ದು, ಆದಷ್ಟು ಶೀಘ್ರ ಗುಣಮಟ್ಟದ ಕೆಲಸ ಆರಂಭಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಹಾಗೂ ಒಬ್ಬ ಅಧಿಕಾರಿ ಆತ್ಮಹತ್ಯೆ ಪ್ರಕರಣವನ್ನು ಈಗಾಗಲೇ ರಾಜ್ಯ ಸರ್ಕಾರ ಎಸ್‍ಐಟಿಗೆ ಒಪ್ಪಿಸಿದೆ. ತನಿಖೆ ಚುರುಕಿನಿಂದ ನಡೆಯುತ್ತಿದ್ದು, ವರದಿ ಬಂದ ನಂತರ ಸತ್ಯಾಸತ್ಯತೆ ಹೊರಗೆ ಬರಲಿದ್ದು, ಕಾದು ನೋಡೋಣ ಎಂದು ತಿಳಿಸಿದರು.

ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಎನ್.ಅಮರೇಶ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT