ಕವಿತಾಳ: ಪಟ್ಟಣದಲ್ಲಿ ನಾಗಚುತುರ್ಥಿಯನ್ನು ಗುರುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಮಹಿಳೆಯರು, ಮಕ್ಕಳು ಮನೆಯಲ್ಲಿ ನಾಗದೇವತೆಗೆ ಹಾಲೆರೆದು ಪೂಜೆ ಮಾಡಿದರೆ, ಕೆಲವರು ದೇವಸ್ಥಾನಗಳಿಗೆ ತೆರಳಿ ನಾಗದೇವತೆ ಮೂರ್ತಿಗೆ ಹಾಲೆರೆದು, ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದರು.
ಇಲ್ಲಿನ ಜಲಸಂಪನ್ಮೂಲ ಇಲಾಖೆಯ ಗಣಪತಿ ದೇವಸ್ಥಾನ, ತ್ರಯಂಭಕೇಶ್ವರ ದೇವಸ್ಥಾನ, ಲಕ್ಷ್ಮಿ ನಾರಾಯಣ ದೇವಸ್ಥಾನ ಮತ್ತು ಗೊಲ್ಲರ ಆಂಜನೇಯ ದೇವಸ್ಥಾನ ಸೇರಿದಂತೆ ವಿವಿಧೆಡೆ ನಾಗದೇವತೆ ಮೂರ್ತಿಗಳಿಗೆ ಮಹಿಳೆಯರು ಹಾಲೆರದು ಪೂಜೆ ಸಲ್ಲಿಸಿದರು.
‘ಮನೆಯಲ್ಲಿನ ನಾಗ ದೇವತೆ ಮೂರ್ತಿಗೆ ಬೆಲ್ಲದ ಹಾಲೆರೆದು ಮನೆಗೆ ಬರಮಾಡಿಕೊಳ್ಳಲಾಗುತ್ತದೆ. ನಾಗರ ಪಂಚಮಿಯಂದು ಹೊರಗಿನ ನಾಗ ದೇವತೆಗೆ ಬಿಳಿ ಹಾಲೆರೆದು ಹೊರಗೆ ಕಳುಹಿಸಲಾಗುತ್ತದೆ’ ಎಂದು ಗೃಹಣಿಯರಾದ ಲಕ್ಷ್ಮಿ ಇಲ್ಲೂರು, ಭಾರತಿ ಇಲ್ಲೂರು ಮತ್ತು ರತ್ನ ಇಲ್ಲೂರು ತಿಳಿಸಿದರು.