ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳರಿಗೆ ಕಡಿವಾಣ ಹಾಕಲು ‘ಗೃಹ ಸುರಕ್ಷಾ’

ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲು ‘ನಮ್ಮ ಟ್ರಾಫಿಕ್‌’
Last Updated 8 ಜುಲೈ 2019, 13:07 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ವಿವಿಧೆಡೆ ಮನೆಗಳಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳನ್ನು ನಿಯಂತ್ರಿಸುವುದಕ್ಕೆ ಮತ್ತು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ದಂಡ ವಿಧಿಸಲು ಸ್ಮಾರ್ಟ್‌ ತಂತ್ರಜ್ಞಾನ ಬಳಸಿಕೊಂಡು ಹೊಸ ವ್ಯವಸ್ಥೆಯೊಂದನ್ನು ರೂಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದರು.

ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ‘ನಮ್ಮ ಟ್ರಾಫಿಕ್‌’ ಮತ್ತು ‘ಗೃಹ ಸುರಕ್ಷಾ’ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು.

ಏನಿದು ನಮ್ಮ ಟ್ರಾಫಿಕ್‌: ಜಿಲ್ಲೆಯಲ್ಲಿನ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವುದಕ್ಕೆ ಮತ್ತು ಸಂಚಾರ ನಿಯಮಗಳನ್ನು ಪಾಲಿಸದವರ ವಿರುದ್ಧ ಕಾನೂನಿನ ಅನುಸಾರ ದಂಡ ವಿಧಿಸಲು ಜಿಲ್ಲಾ ಪೊಲೀಸ್‌ ವತಿಯಿಂದ ‘ನಮ್ಮ ಟ್ರಾಫಿಕ್‌’ ವ್ಯವಸ್ಥೆ ರೂಪಿಸಲಾಗಿದೆ. ಮುಖ್ಯವಾಗಿ ಇದರಲ್ಲಿ ಸಾರ್ವಜನಿಕರ ಪಾತ್ರವಿದೆ ಎಂದರು.

9480803800 ವ್ಯಾಟ್ಸ್‌ ಆ್ಯಪ್‌ ಸಂಖ್ಯೆಗೆ ಸಂಚಾರ ನಿಯಮ ಉಲ್ಲಂಘನೆಯಾದ ಬಗ್ಗೆ ಜಿಪಿಎಸ್‌ ಚಿತ್ರ ಸಹಿತ ದೂರು ಕಳುಹಿಸಬೇಕು. ಇದನ್ನು ಆಧರಿಸಿ ಪೊಲೀಸರು ಕಾನೂನಾತ್ಮಕ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಸ್ಮಾರ್ಟ್‌ಫೋನ್‌ನಿಂದ ಚಿತ್ರ ಕ್ಲಿಕ್‌ ಮಾಡುವಾಗ ಜಿಪಿಎಸ್‌ ಆನ್‌ ಮಾಡಿಟ್ಟುಕೊಳ್ಳಬೇಕು. ನಿಲುಗಡೆ ಇಲ್ಲದ ಕಡೆಗೆ ವಾಹನವಿದ್ದರೆ, ಬೈಕ್‌ ಮೇಲೆ ಮೂವರು ಸಂಚರಿಸುತ್ತಿದ್ದರೆ, ಹೆಲ್ಮೆಟ್‌ ಇಲ್ಲದೆ ಬೈಕ್‌ ಸಂಚಾರ, ಬೈಕ್‌ ಚಲಾಯಿಸುವಾಗ ಮೊಬೈಲ್‌ ಬಳಕೆ ಮಾಡುವುದು, ನಂಬರ್‌ ಪ್ಲೇಟ್‌ ಇಲ್ಲದೆ ವಾಹನ ಅಥವಾ ಬೈಕ್‌ ಚಾಲನೆ, ಸರಕುಗಳ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು, ಆಟೊ ಮತ್ತು ಕ್ಯಾಬ್‌ಗಳಲ್ಲಿ ಅತಿಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿರುವುದು ಕಂಡುಬಂದರೆ ಕೂಡಲೇ ಚಿತ್ರ ಸಹಿತ ದೂರು ಕೊಡಬಹುದಾಗಿದೆ.

ಸಂಚಾರ ನಿಯಮ ಉಲ್ಲಂಘನೆಯಾದ ಸ್ಥಳದ ಜಿಪಿಎಸ್‌ ಲೊಕೇಷನ್‌, ವಾಹನವು ಕಾಣಿಸುವ ಹಾಗೇ ವ್ಯಾಟ್ಸಪ್‌ ಚಿತ್ರ ತೆಗೆದು ಕಳುಹಿಸಬೇಕು.

ರಸ್ತೆ ಅಪಘಾತವಾದ ಪ್ರಕರಣಗಳಿದ್ದರೆ ಸ್ಥಳ ಮತ್ತು ಫೋಟೊ ಕಳುಹಿಸಿದರೆ ಕೂಡಲೇ ಹೈವೇ ವಾಹನಗಳನ್ನು ರವಾನಿಸಿ, ಬಾಧಿತರನ್ನು ಆಸ್ಪತ್ರೆಗೆ ರವಾನಿಸಿ ವೈದ್ಯಕೀಯ ನೆರವು ಸಿಗುವಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ, ಪೊಲೀಸ್‌ ಕೆಎಸ್‌ಪಿ ಆ್ಯಪ್‌ ಡೌನ್‌ಲೋಡ್ ಮಾಡಿ ನೋಂದಾಯಿಸಿಕೊಂಡು ಸಂಚಾರ ನಿಯಮ ಉಲ್ಲಂಘನೆಯ ದೂರು ಸಲ್ಲಿಸಬಹುದು.

ಏನಿದು ಗೃಹ ಸುರಕ್ಷಾ:ಸಾರ್ವಜನಿಕರು ವಿವಿಧ ಕಾರಣಗಳಿಗಾಗಿ ಬೇರೆ ಊರುಗಳಿಗೆ ತೆರಳುವಾಗ ಮನೆಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಪೊಲೀಸರು ‘ಗೃಹ ಸುರಕ್ಷಾ’ ವ್ಯವಸ್ಥೆ ರೂಪಿಸಿದ್ದಾರೆ. ಊರಿಗೆ ಹೋಗುವಾಗ 9480803800 ಸಂಖ್ಯೆಗೆ ಮನೆಯ ವಿಳಾಸ, ಮನೆಯ ಚಿತ್ರ ಹಾಗೂ ಯಾವ ದಿನಾಂಕದಿಂದ ದಿನಾಂಕದವರೆಗೂ ಇರುವುದಿಲ್ಲ ಎಂಬುದನ್ನು ವ್ಯಾಟ್ಸ್‌ ಆ್ಯಪ್‌ ತಂತ್ರಾಶದ ಮೂಲಕ ಮನೆಯ ಜಿಪಿಎಸ್‌ ಲೊಕೇಷನ್‌ ಮಾಹಿತಿ ನೀಡಬೇಕು.

ಈ ಮಾಹಿತಿಯನ್ನು ಪೊಲೀಸ್ ಕಂಟ್ರೊಲ್‌ ರೂಂ ಮೂಲಕ ಸಂಬಂಧಿಸಿದ ಪೊಲೀಸ್‌ ಠಾಣೆಯ ಪಿಎಸ್‌ಐ ಮತ್ತು ಗಸ್ತು ಸಿಬ್ಬಂದಿಗೆ ರವಾನಿಸಿ ಮನೆ ಸುರಕ್ಷತೆಯನ್ನು ನಿರ್ವಹಣೆ ಮಾಡಲಾಗುತ್ತದೆ.

9480803800 ಸಂಖ್ಯೆಯನ್ನು ಸ್ಮಾರ್ಟ್‌ಫೋನ್‌ನಲ್ಲಿ ರಾಯಚೂರು ಪೊಲೀಸ್‌ ಕಂಟ್ರೊಲ್‌ ರೂಮ್‌ ಎಂದು ಸೇವ್‌ ಮಾಡಿಟ್ಟುಕೊಳ್ಳಬೇಕು. ಜಿಪಿಎಸ್‌ ಆನ್‌ ಮಾಡಿಟ್ಟುಕೊಂಡು ಮನೆಯ ಚಿತ್ರವನ್ನು ವಿಳಾಸ ಸಹಿತ ಕಳುಹಿಸಬೇಕು.

ಪೊಲೀಸರು ಪ್ರತಿನಿತ್ಯ ಮೂರು ಸಲ ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ಸಾರ್ವಜನಿಕರು ಪೊಲೀಸರ ಮೇಲೆ ಅಪನಂಬಿಕೆ ಇಟ್ಟುಕೊಳ್ಳಬೇಡಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT