ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕಿರಿದಾದ ರಸ್ತೆ; ಸಂಚಾರ ಅಯೋಮಯ

ಸುಧಾರಣೆ ಕಾಣದ ನೆಲಹಾಳ– ಕಲ್ಲೂರ ಮಾರ್ಗದ ರಸ್ತೆ, ಸಂಚಾರ ಸಂಕಷ್ಟ
Last Updated 13 ಮೇ 2022, 19:30 IST
ಅಕ್ಷರ ಗಾತ್ರ

ರಾಯಚೂರು: ತಾಲ್ಲೂಕಿನ ನೆಲಹಾಳ ಗ್ರಾಮದಿಂದ ಕಲ್ಲೂರು ಗ್ರಾಮಕ್ಕೆ ಸಂಪರ್ಕಿಸುವ 10 ಕಿಲೋ ಮೀಟರ್‌ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಪ್ರತಿನಿತ್ಯ ವಾಹನ ಸವಾರರು ಮತ್ತು ಜಮೀನುಗಳಿಗೆ ಹೋಗುವವರು ತೊಂದರೆ ಅನುಭವಿಸುತ್ತಿದ್ದಾರೆ.

ಕಲ್ಲೂರಿನಿಂದ ರಾಯಚೂರು ಮತ್ತು ಮಾನ್ವಿ ಕಡೆಗೆ ಸಂಚರಿಸುವ ನೆಲಹಾಲ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಜನರು ಇದೇ ಮಾರ್ಗದಿಂದ ಸಂಚರಿಸುತ್ತಾರೆ. ಸರ್ಕಾರಿ ಬಸ್‌ ಹಾಗೂ ಖಾಸಗಿ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುವಾಗ ಸ್ವಲ್ಪ ಯಾಮಾರಿದರೂ ಅಪಘಾತಕ್ಕೀಡಾಗುವ ಅಪಾಯವಿದೆ. 30 ಅಡಿಗಳಷ್ಟು ವಿಸ್ತಾರವಾಗಿದ್ದ ರಸ್ತೆ ಮಾರ್ಗವು ಈಗ 10 ಅಡಿಗಳಷ್ಟು ಮಾತ್ರ ಗೋಚರಿಸುತ್ತಿದೆ.

ರಸ್ತೆಯ ಎರಡು ಬದಿಗಳಲ್ಲಿ ಮುಳ್ಳಿನ ಗಿಡಗಳು ಬೆಳೆದಿದ್ದು, ಸಂಚಾರ ಮಾರ್ಗಕ್ಕೆ ಚಾಚಿಕೊಂಡಿವೆ. ಮುಳ್ಳಿನ ಪೊದೆಯಿಂದಾಗಿ ನಡೆದುಕೊಂಡು ಹೋಗುವ ಜನರು ವಾಹನ ಸವಾರರಿಗೆ ಕೆಲವೊಮ್ಮೆ ಕಾಣಿಸುವುದಿಲ್ಲ. ಅಲ್ಲದೆ, ಬೈಕ್‌ನಲ್ಲಿ ಸಂಚರಿಸುವವರು ಸಾಕಷ್ಟು ಸಂಕಷ್ಟ ಅನುಭವಿಸುತ್ತಾರೆ. ಎದುರಿಗೆ ಬಸ್‌ ಅಥವಾ ಯಾವುದಾದರೂ ದೊಡ್ಡ ವಾಹನ ಎದುರಾದರೆ ಮುಳ್ಳಿನ ಪೊದೆಗಳಲ್ಲಿ ನಿಂತುಕೊಳ್ಳುವ ಅನಿವಾರ್ಯತೆ ಇದೆ. ಮೇಲಿಂದ ಮೇಲೆ ಬೈಕ್‌ ಪಂಕ್ಚರ್‌ ಆಗುತ್ತಿದ್ದು, ಆಡಳಿತ ವ್ಯವಸ್ಥೆಗೆ ಜನರು ಹಿಡಿಶಾಪ ಹಾಕುವಂತಾಗಿದೆ.

ಕಚ್ಚಾರಸ್ತೆಯನ್ನು ಪಕ್ಕರಸ್ತೆ ಮಾಡಿ ಡಾಂಬರೀಕರಣ ಮಾಡುವಂತೆ ನೆಲಹಾಳ ಗ್ರಾಮಸ್ಥರು ತಹಶೀಲ್ದಾರ್‌ ಕಚೇರಿಗೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಾ ಬರುತ್ತಿದ್ದಾರೆ. ಆದರೆ, ಸ್ಪಂದನೆ ಆಗದಿರುವುದು ಗ್ರಾಮಸ್ಥರಲ್ಲಿ ಅಸಮಾಧಾನ ಮೂಡಿಸಿದೆ. ಪ್ರತಿವರ್ಷ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ನರಕದ ಅನುಭವ. ರಸ್ತೆ ತಗ್ಗುಗಳಲ್ಲಿ ಮಳೆನೀರು ಸಂಗ್ರಹವಾಗುವುದರ ಜೊತೆಗೆ, ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ರೈತರು ತಮ್ಮ ಜಮೀನುಗಳಿಗೆ ಬೈಕ್‌ನಲ್ಲಿ ಸಂಚರಿಸುವುದಕ್ಕೆ ಆಗದಂತಹ ಸ್ಥಿತಿ ಉದ್ಭವವಾಗುತ್ತದೆ. ಅನಿವಾರ್ಯವಾಗಿ ಕೆಸರಿನಲ್ಲೇ ರೈತರು ನಡೆದುಕೊಂಡು ಜಮೀನುಗಳಿಗೆ ತೆರಳುತ್ತಾರೆ. ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದರೂ ನೆಲಹಾಳ, ರಸ್ತೆ ಅಭಿವೃದ್ಧಿ ವಿಷಯದಲ್ಲಿ ಹಿಂದುಳಿದಿದೆ.

‘ನೆಲಹಾಳದಿಂದ ಕಲ್ಲೂರಿಗೆ ಜನಸಂಪರ್ಕ ಹೆಚ್ಚಿನ ಪ್ರಮಾಣದಲ್ಲಿದೆ. ಜನರಿಗೆ ಅನುಕೂಲ ಮಾಡಿಕೊಡುವುದಕ್ಕೆ ಈ ರಸ್ತೆಯನ್ನು ಸುಧಾರಣೆ ಮಾಡಿಕೊಡುವ ಬಗ್ಗೆ ಅಧಿಕಾರಿಗಳು ಯೋಜನೆ ಮಾಡುತ್ತಿಲ್ಲ. ಮುರಂ ಹಾಕಿದರೂ ಅದು ಒಂದು ವರ್ಷ ಕೂಡಾ ಇರುವುದಿಲ್ಲ. ಪ್ರತಿವರ್ಷ ಮಳೆಗಾಲದಲ್ಲಿ ರಸ್ತೆ ಕಿತ್ತು ಹೋಗುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸಬೇಕು‘ ಎಂದು ಗ್ರಾಮಸ್ಥ ವೆಂಕಟೇಶ ಮನವಿ ಮಾಡಿದರು.

*

ಕಲ್ಲೂರು ಮಾರ್ಗದ ರಸ್ತೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಲ್ಲದೆ, ಆಗಾಗ ಬಂದು ವಿಚಾರಿಸುತ್ತಲೇ ಇದ್ದೇವೆ. ಬರೀ ಭರವಸೆ ನೀಡುತ್ತಿದ್ದಾರೆ ವಿನಾ ರಸ್ತೆ ಸುಧಾರಣೆ ಮಾಡುತ್ತಿಲ್ಲ.

–ಭೀಮನಗೌಡ, ನೆಲಹಾಳ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT